‘ಕ್ರೇಜಿ ಸ್ಟಾರ್’ ರವಿಚಂದ್ರನ್ ಅವರ ಎರಡನೇ ಪುತ್ರ ವಿಕ್ರಮ್ ಈಗಾಗಲೇ ‘ತ್ರಿವಿಕ್ರಮ’ ಚಿತ್ರದಿಂದ ಗ್ರ್ಯಾಂಡ್ ಆಗಿ ಸ್ಯಾಂಡಲ್ವುಡ್ಗೆ ಎಂಟ್ರಿ ನೀಡಲು ಸಜ್ಜಾಗಿದ್ದಾರೆ. ಸದ್ಯ ಟೀಸರ್ ಮೂಲಕ ತ್ರಿವಿಕ್ರಮ ಎಲ್ಲರ ಗಮನಸೆಳೆಯುತ್ತಿದೆ. ಅಷ್ಟರಲ್ಲೇ ಮತ್ತೊಂದು ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ವಿಕ್ರಮ್!
‘ವೈಟ್’ ಎಂಬ ಕಿರು ಚಿತ್ರವನ್ನು ನಿರ್ದೇಶನ ಮಾಡಿದ್ದ ಮನು ನಾಗ್ ವಿಕ್ರಮ್ ಅವರ ಎರಡನೇ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಕನ್ನಡ ಹಾಗೂ ಮಲಯಾಳಂನ ಕೆಲ ನಿರ್ದೇಶಕರ ಜೊತೆ ಕೆಲಸ ಮಾಡಿದ ಅನುಭವ ಇರುವ ಮನುಗೆ ಇದು ಮೊದಲ ಪೂರ್ಣಪ್ರಮಾಣದ ಸಿನಿಮಾವಾಗಿದೆ. ಕಥೆಯಲ್ಲಿ ಮಾಸ್ ಅಂಶಗಳಿದ್ದು, ತಾಯಿ-ಮಗನ ಸೆಂಟಿಮೆಂಟ್ ದೃಶ್ಯಗಳು ಕೂಡ ಸಿನಿಮಾದಲ್ಲಿ ಹೈಲೈಟ್ ಆಗಲಿವೆಯಂತೆ. ವಿಕ್ರಮ್ ಹೀರೋ ಆಗಿ ನಟಿಸುತ್ತಿರುವುದು ಬಿಟ್ಟರೆ, ಮಿಕ್ಕಂತೆ ಸಿನಿಮಾದಲ್ಲಿ ಯಾರೆಲ್ಲ ನಟಿಸಲಿದ್ದಾರೆ? ಚಿತ್ರದ ತಾಂತ್ರಿಕ ಬಳಗದಲ್ಲಿ ಯಾರೆಲ್ಲ ಕೆಲಸ ಮಾಡಲಿದ್ದಾರೆ ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ. ಸದ್ಯಕ್ಕೆ ತಮ್ಮ ಚಿತ್ರಕ್ಕಾಗಿ ವಿಕ್ರಮ್ ಅವರಿಗೆ ಲುಕ್ ಟೆಸ್ಟ್ ಮಾಡಿರುವ ಮನು ನಾಗ್ ಸದ್ಯದಲ್ಲೇ ಉಳಿದ ಎಲ್ಲ ವಿವರಗಳ ಮೂಲಕ ಮಾಧ್ಯಮಗಳ ಮುಂದೆ ಬರಲಿದ್ದಾರೆ.
ಇನ್ನು, ‘ತ್ರಿವಿಕ್ರಮ’ ಚಿತ್ರಕ್ಕೆ ಸಹನಮೂರ್ತಿ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾವನ್ನು ಐದು ಭಾಷೆಗಳಲ್ಲಿ ರಿಲೀಸ್ ಮಾಡಬೇಕು ಎಂಬುದು ನಿರ್ಮಾಪಕರ ಆಲೋಚನೆ ಆಗಿದೆ. ಹಾಗಾಗಿ, ಮೊದಲ ಯತ್ನದಲ್ಲೇ ಪಂಚಭಾಷೆಗಳಲ್ಲಿ ವಿಕ್ರಮ್ ಮಿಂಚುವುದು ಗ್ಯಾರಂಟಿ. ‘ತ್ರಿವಿಕ್ರಮ’ದಲ್ಲಿ ಅವರಿಗೆ ನಾಯಕಿಯಾಗಿ ಆಕಾಂಕ್ಷಾ ಶರ್ಮಾ ನಟಿಸುತ್ತಿದ್ದಾರೆ.