ಚಿತ್ರೀಕರಣ ಮುಗಿಸಿದ ತಾಜ್‌ಮಹಲ್-2

ಇದೊಂದು ಪಕ್ಕಾ ಲವ್ ಅಂಡ್ ಎಮೋಷನಲ್ ಕಥಾಹಂದರ ಇರುವ ಚಿತ್ರವಾಗಿದ್ದು, ದೇವರಾಜ್‌ಕುಮಾರ್ ಅವರೇ ಕಥೆ, ಚಿತ್ರಕಥೆ ರಚಿಸಿದ್ದಾರೆ.

ಈ ಹಿಂದೆ ಡೇಂಜರ್‌ಜೋನ್, ನಿಶ್ಯಬ್ಧ-೨, ಅನುಷ್ಕದಂಥ ಚಿತ್ರಗಳನ್ನು ನಿರ್ದೇಶನ ಮಾಡಿದ್ದ ದೇವರಾಜಕುಮಾರ್ ಅವರ ನಿರ್ದೇಶನದ ತಾಜ್‌ಮಹಲ್-೨ ಚಿತ್ರದ ಚಿತ್ರೀಕರಣ ಇದೀಗ ಮುಕ್ತಾಯವಾಗಿದೆ. ಬೆಂಗಳೂರಿನ ಹೆಚ್‌ಎಂಟಿ ಏರಿಯಾದಲ್ಲಿ ಸೆಟ್ ಹಾಕಿ ಜೀವ ಬಿಡುವೆ ನಿನಗಾಗಿ ಎಂಬ ಹಾಡು ಹಾಗೂ ಸಾಹಸ ಸನ್ನಿವೇಶದ ಚಿತ್ರೀಕರಣ ನಡೆಸುವುದರೊಂದಿಗೆ ಚಿತ್ರೀಕರಣಕ್ಕೆ ಮಂಗಳ ಹಾಡಲಾಗಿದೆ. ಇದೊಂದು ಪಕ್ಕಾ ಲವ್ ಅಂಡ್ ಎಮೋಷನಲ್ ಕಥಾಹಂದರ ಇರುವ ಚಿತ್ರವಾಗಿದ್ದು, ದೇವರಾಜ್‌ಕುಮಾರ್ ಅವರೇ ಕಥೆ, ಚಿತ್ರಕಥೆ ರಚಿಸಿದ್ದಾರೆ. ಚಿತ್ರಕ್ಕೆ ವೀನಸ್‌ಮೂರ್ತಿ ಅವರ ಛಾಯಾಗ್ರಹಣವಿದೆ. ಈ ಚಿತ್ರದಲ್ಲಿ ದೇವರಾಜ್‌ಕುಮಾರ್ ಅವರೇ ನಾಯಕರಾಗಿದ್ದು, ನಿರ್ದೇಶನದ ಜೊತೆಗೆ ನಾಯಕನಾಗಿ ಅದೃಷ್ಟ ಪರೀಕ್ಷೆಗೂ ಇಳಿದಿದ್ದಾರೆ. ಸಮೃದ್ಧಿ ಶುಕ್ಲ ಚಿತ್ರದ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ.

ಮೊನ್ನೆ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ದೇವರಾಜ್ ತಾಜ್‌ಮಹಲ್ ಪ್ರೀತಿಯ ಸಂಕೇತ, ಅಪ್ಪಟ ಪ್ರೀತಿಯ ಕಥೆಯನ್ನು ಈ ಸಿನಿಮಾದಲ್ಲಿ ನೋಡಬಹುದು. ನೈಜ ಘಟನೆ ಅಧರಿಸಿ ಮಾಡಿರುವ ಚಿತ್ರವಿದು. ೨೦೧೯ರಲ್ಲೇ ಚಿತ್ರವನ್ನು ಆರಂಭಿಸಿದ್ದೆವು. ಒದು ಶೆಡ್ಯೂಲ್ ಮಾತ್ರ ಬಾಕಿಯಿತ್ತು. ಆರು ದಿನಗಳ ಕಾಲ ಶೂಟ್ ಮಾಡುವುದರೊಂದಿಗೆ ಅದನ್ನೂ ಈಗ ಮುಗಿಸಿದೆವು. ದೊಡ್ಡ ಮಟ್ಟದಲ್ಲಿ ಈ ಸಿನಿಮಾ ಮಾಡಿದ್ದೇವೆ. ಈಗಾಗಲೇ ಚಿತ್ರದ ಡಬ್ಬಿಂಗ್ ರೀರೆಕಾರ್ಡಿಂಗ್ ಕೂಡ ಮುಗಿದಿದೆ.

೨೫ ದಿನಗಳ ಕಾಲ ಸಕಲೇಶಪುರದಲ್ಲಿ ಸೆಟ್ ಹಾಕಿ ಮಳೆಯಲ್ಲೇ ಚಿತ್ರೀಕರಿಸಿದ್ದೇವೆ. ಮನ್ವರ್ಷಿ ಅವರು ಉತ್ತಮ ಡೈಲಾಗ್‌ಗಳನ್ನು ಬರೆದಿದ್ದಾರೆ. ಚಂದ್ರು ಬಂಡೆ ಅವರು ರೆಗ್ಯುಲರ್ ಆಕ್ಷನ್‌ಗಿಂತ ಬೇರೆ ಥರದಲ್ಲಿ ಆಕ್ಷನ್ ಕಂಪೋಜ್ ಮಾಡಿದ್ದಾರೆ. ಕಥೆಯಲ್ಲಿ ಕಾಕ್ರೋಚ್ ಸುಧೀರ್ ಅವರ ಪಾತ್ರದಿಂದ ಚಿತ್ರಕ್ಕೆ ದೊಡ್ಡ ತಿರುವು ಸಿಗುತ್ತದೆ. ಕೆಲ ಸೀನ್ ಗಳು ನೋಡುವವರಿಗೆ ಕಣ್ಣೀರು ಬರಿಸುತ್ತದೆ. ವಿಕ್ಟರಿ ವಾಸು ನನ್ನ ಹಳೇ ಗುರುಗಳು, ನಾನು ಹೀರೋ ಆಗುತ್ತೇನೆ ಎಂದಾಗ ಧೈರ್ಯ ತುಂಬಿದ್ದರು. ಅವರು ಚಿತ್ರದಲ್ಲಿ ಇನ್‌ಸ್ಪೆಕ್ಟರ್ ಪಾತ್ರ ಮಾಡಿದ್ದಾರೆ. ಈ ಕಥೆ ಬರೆದಾಗ ನಾಯಕಿ ಪಾತ್ರಕ್ಕೆ ತುಂಬಾ ಜನರನ್ನು ಆಡಿಷನ್ ಮಾಡಿದ್ದೆ, ಕೊನೆಗೆ ಸಮೃದ್ದಿ ಸೆಲೆಕ್ಟ್ ಆದರು. ಚಿತ್ರದಲ್ಲಿ ೪ ಹಾಡಿದ್ದು, ರಾಜೇಶ್ ಕೃಷ್ಣನ್, ಬಸಣ್ಣಿ ಖ್ಯಾ ತಿಯ ವರ್ಷ ಸುರೇಶ್ ಕೂಡ ಒಂದು ಸಾಂಗ್ ಹಾಡಿದ್ದಾರೆ. ಮೇ ಮೊದಲವಾರ ಟೀಸರ್ ರಿಲೀಸ್ ಮಾಡಿ, ಸೆಪ್ಟೆಂಬರ್‌ ನಲ್ಲಿ ಚಿತ್ರ ರಿಲೀಸ್ ಮಾಡೋ ಪ್ಲಾನ್ ಇದೆ ಎಂದು ಹೇಳಿದರು.