ರಾಷ್ಟ್ರೀಯ ಯುವ ದಿನ ಸ್ವಾಮಿ ವಿವೇಕಾನಂದರ 158ನೇ ಜನ್ಮದಿನಾಚರಣೆ

ಯುವಕರ ಪಾಲಿನ ಸ್ಫೂರ್ತಿಯ ಚಿಲುಮೆ, ಭವ್ಯ ಭಾರತದ ಹೆಮ್ಮೆಯ ಪುತ್ರ ಸ್ವಾಮಿ ವಿವೇಕಾನಂದರು ಜನಿಸಿದ ಪುಣ್ಯ ದಿನವಿಂದು. ಈ ದಿನವನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತದೆ.

ಸ್ವಾಮಿ ವಿವೇಕಾನಂದರ ಹೆಸರು ಕೇಳಿದರೆ ಸಾಕು ಮೈ ರೋಮಾಂಚನಗೊಳ್ಳುತ್ತದೆ. ಕಣಕಣದಲ್ಲೂ ದೇಶ ಭಕ್ತಿಯನ್ನು ತುಂಬಿಕೊಂಡಿದ್ದ ಆ ಮಹಾನ್ ಚೇತನ ಭಾರತ ದೇಶದ ವೈಶಿಷ್ಟ್ಯವನ್ನು ವಿಶ್ವಕ್ಕೆ ಪರಿಚಯಿಸಿದವರು.

ಕೋಲ್ಕತ್ತಾದ ವಿಶ್ವನಾಥ ದತ್ತ ಮತ್ತು ಭುವನೇಶ್ವರಿ ದೇವಿ ದಂಪತಿ ಪುತ್ರನಾಗಿ 1863ರ ಜನವರಿ 12ರಂದು ಜನಿಸಿದ ನರೇಂದ್ರನಾಥ ದತ್ತ ಬಳಿಕ ವಿವೇಕಾನಂದ ಎಂಬ ಹೆಸರಿನಿಂದ ಜಗದ್ವಿಖ್ಯಾತಿಗಳಿಸಿದರು. ಗುರುಗಳಾದ ರಾಮಕೃಷ್ಣ ಪರಮಹಂಸರು ತೋರಿದ ಜ್ಞಾನದ ಬೆಳಕಿನಲ್ಲಿ ಬೆಳೆದ ವಿವೇಕಾನಂದರು ನಂತರ ಯುವ ಜನರ ಪಾಲಿನ ಕಣ್ಮಣಿಯಾಗಿ ರೂಪುಗೊಂಡರು. ಸ್ವಾಮಿ ವಿವೇಕಾನಂದರು ಬೆಳಗಿದ ಜ್ಞಾನದ ದೀವಿಗೆ ಜಗತ್ತಿನ ಅದೆಷ್ಟೋ ಯುವಕ, ಯುವತಿಯರ ಬದುಕಿನಲ್ಲಿ ಹೊಸ ಚೈತನ್ಯ ತಂದಿತ್ತು.

ಸ್ವಾಮಿ ವಿವೇಕಾನಂದರ ಜನ್ಮದಿನವಾದ ಜ.12ನ್ನು ‘ರಾಷ್ಟ್ರೀಯ ಯುವ ದಿನ’ವಾಗಿ ಆಚರಿಸಲಾಗುತ್ತದೆ. “ಏಳಿ ಎದ್ದೇಳಿಗುರಿ ಮುಟ್ಟುವ ತನಕ ನಿಲ್ಲದಿರಿ” ಎಂದು ಯುವಕರಿಗೆ ಕರೆಕೊಟ್ಟ ವಿವೇಕಾನಂದರಿಗೆ ಯುವಶಕ್ತಿಯ ಮೇಲೆ ಅಪಾರವಾದ ನಂಬಿಕೆ ಇತ್ತು. ಯುವಶಕ್ತಿಗಿಂತ ಮಿಗಿಲಾದುದ್ದು ಯಾವುದು ಇಲ್ಲ. ನನಗೆ 100 ಜನ ಗಟ್ಟಿ ಮುಟ್ಟಾದ ಯುವಕರನ್ನು ಕೊಡಿ ನಾವು ನವಭಾರತವನ್ನು ನಿರ್ಮಾಣ ಮಾಡುತ್ತೇನೆ ಎನ್ನುತ್ತಿದ್ದರು ಸ್ವಾಮೀಜಿ.

ಯುವಕರು ಹೇಡಿಗಳಾಗಬಾರದು, ನೀವೂ ಎಂದೂ ಪರಾವಲಂಬಿಗಳಲ್ಲ, ನಿಮ್ಮ ಬದುಕಿನ ಶಿಲ್ಪಿಗಳು ನೀವೇ ಎಂಬ ಸ್ವಾಮೀಜಿ ಸಂದೇಶ ಎಂದೆಂದಿಗೂ ಯುವ ಮನಸುಗಳನ್ನು ಎಚ್ಚರಿಸುವಂತದ್ದು. 1984ರಲ್ಲಿ ಭಾರತ ಸರಕಾರ ಈ ದಿನವನ್ನು ಯುವ ದಿನವಾಗಿ ಆಚರಿಸುವಂತೆ ಘೋಷಣೆ ಹೊರಡಿಸಿತು. ”ಸ್ವಾಮಿ ವಿವೇಕಾನಂದರ ತತ್ತ್ವಜ್ಞಾನ ಮತ್ತು ಅವರು ಬದುಕಿ ಬೋಧಿಸಿದ ಆದರ್ಶಗಳು ಭಾರತದ ಯುವಜನತೆಯ ದೊಡ್ಡ ಸಂಪನ್ಮೂಲ ಹಾಗೂ ಸ್ಫೂರ್ತಿಮೂಲವಾಗಿವೆ,” ಎಂದು ಸರಕಾರ ಈ ಘೋಷಣೆಯಲ್ಲಿ ಗುರುತಿಸಿತು.

1985 ರಿಂದೀಚೆಗೆ ಪ್ರತಿವರ್ಷ ಯುವದಿನವನ್ನು ಆಚರಿಸಲಾಗುತ್ತಿದೆ. 1893ರ ಶಿಕಾಗೋ ಸರ್ವಧರ್ಮ ಸಮ್ಮೇಳನದಲ್ಲಿ ”ಅಮೆರಿಕದ ಸಹೋದರಿಯರೇ ಮತ್ತು ಸಹೋದರರೇ,” ಎಂದು ಹೇಳುವ ಮೂಲಕ ಪಾಶ್ಚಿಮಾತ್ಯರ ಕಣ್ಣನ್ನು ತೆರೆಸಿದ ವಿವೇಕಾನಂದರು, ಭಾರತದ ಕೀರ್ತಿ ಪತಾಕೆಯನ್ನು ವಿಶ್ವದ ಮುಂದೆ ಎತ್ತಿ ಹಿಡಿದರು.

1892 ರ ಸೆಪ್ಟೆಂಬರ್ 11 ರಂದು ಸೋಮವಾರ ಶಿಕಾಗೋ ನಗರದಲ್ಲಿ ನೆಡೆದ ಸರ್ವಧರ್ಮ ಸಮ್ಮೇಳನದಲ್ಲಿ ಮಾಡಿದ ಕೇವಲ 3 ನಿಮಿಷದ ಭಾಷಣದಲ್ಲಿ ಭಾರತದ ಸನಾತನ ಧರ್ಮದ ಹಿರಿಮೆ ವಿಶ್ವಕ್ಕೆ ತಿಳಿಸಿ ವಿಶ್ವಾದ್ಯಂತ ಪ್ರಸಿದ್ಧರಾದರು. ವಿಶ್ವ ಧರ್ಮ ಸಮ್ಮೇಳನದಲ್ಲಿ ಪಾಲ್ಗೋಂಡ ಬಳಿಕ ಅಮೆರಿಕ, ಇಂಗ್ಲೆಂಡ್, ಯುರೋಪ್ ಹಾಗೂ ಭಾರತದಲ್ಲಿ ಅವರು ಮಾಡಿದ ಭಾಷಣ, ಅವರ ಪತ್ರಗಳು, ಅವರು ನೆಡೆಸಿದ ಚರ್ಚೆಗಳು ಇಂದಿಗೂ ಆಕಾರ ಗ್ರಂಥಗಳಾಗಿವೆ ನೊಬೆಲ್ ಪುರಸ್ಕೃತ ರವೀಂದ್ರನಾಥ ಟಾಗೂರರು ವಿವೇಕಾನಂದರ ಕುರಿತು “ಭಾರತವನ್ನು ತಿಳಿಯಬೇಕೆಂದರೆ ಸ್ವಾಮಿ ವಿವೇಕಾನಂದರ ಬಗ್ಗೆ ಓದಿ” ಎಂದು ಹೇಳಿದ್ದಾರೆ. ಅಂದರೆ ವಿವೇಕಾನಂದರು ಭಾರತವನ್ನು ಪ್ರೀತಿಸುವುದರ ಜೊತೆಗೆ ಭಾರತವನ್ನು ಅಧ್ಯಯನ ಮಾಡಿದ್ದರು.

ಯುವದಿನದ ಆಚರಣೆ

ಯುವದಿನವನ್ನು ಈ ಮೊದಲು ವಿವೇಕಾನಂದ ಜಯಂತಿ ಎಂದು ಆಚರಿಸಲಾಗುತ್ತಿತ್ತು, ಶಾಲೆ ಹಾಗೂ ಕಾಲೇಜುಗಳಲ್ಲಿ ವಿವೇಕಾನಂದರ ಜೀವನ, ಬೋಧನೆಗಳ ಬಗ್ಗೆ ಉಪನ್ಯಾಸ, ಪ್ರವಚನ, ಸೆಮಿನಾರ್‌, ಯೋಗಾಸನಗಳು, ಸ್ಪರ್ಧೆಗಳು, ಸಂಗೀತ, ಯುವಜನೋತ್ಸವಗಳು ನಡೆಯುತ್ತವೆ.

ಸ್ವಾಮಿ ವಿವೇಕಾನಂದರ ಸಂದೇಶಗಳು…

* ಏಳಿ, ಎದ್ದೇಳಿ… ಗುರಿ ಮುಟ್ಟುವ ತನಕ ನಿಲ್ಲದಿರಿ…

 

* ಎಲ್ಲಿಯ ತನಕ ನಿಮಗೆ ನಿಮ್ಮ ಮೇಲೆ ನಂಬಿಕೆ ಬರುವುದಿಲ್ಲವೋ, ಅಲ್ಲಿಯ ತನಕ ನಿಮಗೆ ದೇವರ ಮೇಲೆ ನಂಬಿಕೆ           ಬರದು.

* ಯಾರೂ ನಿಮಗೆ ಕಲಿಸಲಾರರು, ಯಾರೂ ನಿಮ್ಮನ್ನು ಆಧ್ಮಾತ್ಮಿಕ ವ್ಯಕ್ತಿಗಳನ್ನಾಗಿ ಮಾಡಲಾರರು. ನಿಮಗೆ ನೀವೇ         ಗುರುಗಳು. ನಿಮ್ಮ ಆತ್ಮ ಹೊರತುಪಡಿಸಿ ಬೇರೆ ಯಾವ ಗುರುವೂ ಇಲ್ಲ.

* ನಿಮ್ಮ ಬುದ್ಧಿ ಮತ್ತು ಹೃದಯಕ್ಕೆ ಸಂಘರ್ಷ ನಡೆಯುತ್ತಿರುವಾಗ ಹೃದಯದ ಮಾತನ್ನೇ ಕೇಳಿರಿ.

 

* ನಾವು ಏನಾಗಿದ್ದೇವೋ ಅದು ನಮ್ಮ ವಿಚಾರಗಳಿಂದಲೇ. ಹೀಗಾಗಿ, ನೀವು ಏನು ವಿಚಾರ ಮಾಡುತ್ತೀರಿ ಎಂಬ ಬಗ್ಗೆ         ಗಮನ ಇರಲಿ.

* ಬಡವರು, ಅಶಕ್ತರು, ರೋಗಿಗಳಲ್ಲಿ ಯಾರು ಶಿವನನ್ನು ಕಾಣುತ್ತಾರೋ ಅವರೇ ನಿಜವಾದ ಶಿವಭಕ್ತರು

* ನಿಮ್ಮ ದೇಶಕ್ಕೆ ನಾಯಕರು ಬೇಕು. ನೀವು ಯಾವಾಗಲೂ ನಾಯಕರಾಗಿರಿ. ಕೆಲಸ ಮಾಡುವುದೇ ನಿಮ್ಮ ಕರ್ತವ್ಯ.         ಆಗ  ಪ್ರತಿಯೊಂದೂ ನಿಮ್ಮನ್ನು ಅನುಸರಿಸಿಕೊಂಡು ಬರುತ್ತದೆ.