ಸೂಪರ್​ಸ್ಟಾರ್​ಗೆ ಅದ್ಧೂರಿ ಮುಹೂರ್ತ; ಸೋಮವಾರದಿಂದ ಶೂಟಿಂಗ್​ ಶುರು

‘ಲೇ ಮಚಾ.. ತೆಳ್ಳಗೆ ಬೆಳ್ಳಗೆ ಇದಾನೆ ಅಂತ ಲಿಟಲ್ ಸ್ಟಾರ್ ಅಂದ್ಕೊಂಡ್ಬಿಟ್ಟೇನೋ ಮಗನೇ.. ರಿಯಲ್ ಸ್ಟಾರ್ ಗರಡಿಯಲ್ಲಿ ಪಳಗಿರೋ ಸೂಪರ್ಸ್ಟಾರ್ ಕಣೋ.. ಕರೆದ ತಕ್ಷಣ ಬರೋಕೆ ಡಾನ್ಸರ್ಸ್ ಏನು ನಿನ್ನ ಕಟ್ಕೋಂಡಿರೋಳಾ ಏನು ಇಟ್ಕೋಂಡಿರೋಳಾ ಮಗನೇ..’ ಹೀಗೆ ಖಡಕ್​ ಡೈಲಾಗ್​ ಹೇಳುವ ಮೂಲಕ ಚಪ್ಪಾಳೆ ಗಿಟ್ಟಿಸಿಕೊಂಡರು ನಟ ನಿರಂಜನ್​ ಸುಧೀಂದ್ರ.

ಹೌದು, ಪೋಸ್ಟರ್ ಮೂಲಕ ಸದ್ದು ಮಾಡಿದ್ದ ಸೂಪರ್​ಸ್ಟಾರ್ ಚಿತ್ರದ ಅದ್ಧೂರಿ ಮುಹೂರ್ತ ಶುಕ್ರವಾರ ಅಂಜನಾನಗರದಲ್ಲಿನ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನೆರವೇರಿತು. ನಿರ್ದೇಶಕ ರಮೇಶ್ ವೆಂಕಟೇಶ್​ ಬಾಬು ಅವರ ತಾಯಿ ಶ್ರೀಮತಿ ಗೌರಮ್ಮ ಮುನಿಯಪ್ಪ ಕ್ಲಾಪ್ ಮಾಡಿದರೆ, ಶ್ರೀಮತಿ ಲಕ್ಷ್ಮೀ ಕ್ಯಾಮರಾಕ್ಕೆ ಚಾಲನೆ ನೀಡಿದರು.
ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಿಯಲ್ ಸ್ಟಾರ್​ ಉಪೇಂದ್ರ, ‘ಕಳೆದ ಎರಡು ವರ್ಷಗಳಿಂದ ಈ ಸಿನಿಮಾ ಬಗ್ಗೆ ಇಡೀ ತಂಡ ತಲೆ ಕೆಡಿಸಿಕೊಂಡಿದೆ. ನಿರ್ದೇಶಕರು, ನಿರ್ಮಾಪಕರು ಮತ್ತು ಹೀರೋ ಶಕ್ತಿ ಮೀರಿ ಶ್ರಮ ಹಾಕುತ್ತಿದ್ದಾರೆ. ನಮ್ಮ ಮನೆಮಂದಿಯೆಲ್ಲ ನಿರಂಜನ್​ನನ್ನು ನೋಡಿ ಜಿಮ್​ ಸೇರಿದ್ದಾರೆ. 19ನೇ ವರ್ಷಕ್ಕೆ ಜಿಮಿನಾಸ್ಟಿಕ್ ಶುರುಮಾಡಿದ ಅದಾದ ಬಳಿಕ ಡಾನ್ಸ್​, ಜಿಮ್, ಡ್ರಾಮಾ ಹೀಗೆ ಸಿನಿಮಾಕ್ಕಾಗಿ ತುಂಬ ಶ್ರಮ ಹಾಕುತ್ತಿದ್ದಾನೆ. ಪರಿಶ್ರಮ ಇದ್ದರೆ ಮಾತ್ರ ಯಶಸ್ಸು. ಪಟ್ಟಂತ ಯಾರು ಸೂಪರ್​ಸ್ಟಾರ್ ಆಗಲು ಸಾಧ್ಯವಿಲ್ಲ. ಯೋಗ್ಯತೆ ಬೇಕು. ಅದೊಂದು ದೊಡ್ಡ ಪದವಿ. ಇನ್ನು ಈ ಸಿನಿಮಾ ಶುರುವಾದಾಗಿನಿಂದ ಯಶ್, ಶ್ರೀಮುರಳಿ, ಪ್ರೇಮ್, ಶಿವಣ್ಣ. ಪುನೀತ್​ ಹೀಗೆ ಎಲ್ಲರೂ ಬೆಂಬಲಿಸುತ್ತಿದ್ದಾರೆ. ಅದರಲ್ಲೂ 87ರ ಪ್ರಾಯದ ಮೂಗೂರು ಸುಂದರ್​ ಅವರೂ ಸಾಥ್ ನೀಡಿದ್ದಾರೆ. ನಿಜಕ್ಕೂ ನಿರಂಜನ್​ಗಿದು ವಿಶೇಷ. ಮುಹೂರ್ತಕ್ಕೆ ಸೇರಿದಂತೆ ಚಿತ್ರಮಂದಿರದಲ್ಲೂ ಈತನ ಸಿನಿಮಾಕ್ಕೆ ಇದೇ ರೀತಿ ಜನ ಬರಲಿ ಎಂದು ಆಶಿಸುತ್ತೇನೆ ಎಂದರು ಉಪೇಂದ್ರ.

ಚಿತ್ರ ನಿರ್ಮಾಣದ ಬಗ್ಗೆ ಮಾಹಿತಿ ನೀಡಿದ ನಿರ್ಮಾಪಕ ಮೈಲಾರಿ, ‘ಸಿನಿಮಾ ನಿರ್ಮಾಣ ಮಾಡುತ್ತಿರುವುದಕ್ಕೆ ಸಂತೋಷವಾಗುತ್ತಿದೆ. ಉಪೇಂದ್ರ ಮತ್ತವರ ಇಡೀ ಕುಟುಂಬ ಮತ್ತು ಚಿತ್ರರಂಗದ ಸಾಕಷ್ಟು ಸ್ಟಾರ್ ನಟರು ನಮ್ಮ ಸಿನಿಮಾಕ್ಕೆ ಬೆಂಬಲ ನೀಡುತ್ತಿದ್ದಾರೆ. ಆ ನಿರೀಕ್ಷೆಗೆ ತಕ್ಕಂತೆ ಸಿನಿಮಾ ಮೂಡಿಬರಲಿದೆ ಎಂಬ ನಂಬಿಕೆ ಇದೆ ಎಂದರು.
ಇನ್ನು ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡ ನಿರ್ದೇಶಕ ರಮೇಶ್ ವೆಂಕಟೇಶ್​ ಬಾಬು, ‘ಈ ಸಿನಿಮಾಕ್ಕೆ ಮೂಗೂರು ಸುಂದರಂ ಅವರನ್ನು ಕರೆತರುವುದಕ್ಕೆ ನಾಲ್ಕು ತಿಂಗಳ ಕಾಲ ವ್ಯಯ ಮಾಡಿದ್ದೇವೆ. ಪೋನ್ ಮಾಡಿದರೂ ಅವರು ಸಿಕ್ಕಿರಲಿಲ್ಲ. ಕೊನೆಗೆ ಅವರ ಮನೆಗೆ ಹೋಗಿ ಕಥೆ ಹೇಳಿ ಅವರ ಒಪ್ಪಿಗೆ ಪಡೆದುಕೊಂಡು ಬಂದಿದ್ದೇವೆ. ಈ ಸಿನಿಮಾದಲ್ಲಿ ಅವರು ಡಾನ್ಸ್ ಮಾಸ್ಟರ್ ಪಾತ್ರ ಮಾಡಲಿದ್ದಾರೆ. ಉಪೇಂದ್ರ ಅವರ ಮನೆಗೆ ಈ ಸಿನಿಮಾ ಕುರಿತು ಚರ್ಚೆಗೆ ಹೋದರೆ, ನಮಗೆ ಉತ್ಸಾಹ ತುಂಬಿ ಕಳುಹಿಸುತ್ತಿದ್ದರು. ಪ್ರೇಮ್​ ಅವರಿಂದಲೂ ತುಂಬ ಸಹಾಯವಾಗಿದೆ. ನಿರ್ಮಾಪಕರು, ನುಗ್ಗು ವೆಂಕಿ ಎಂದು ಬೆನ್ನು ತಟ್ಟುತ್ತ ಬಂದಿದ್ದಾರೆ. ಕೆಲಸ ನಡುವೆಯೇ ಚೇತನ್​ ಅವರು ಎಲ್ಲ ಹಾಡುಗಳಿಗೆ ಸಾಹಿತ್ಯ ಬರೆದುಕೊಡುತ್ತಿದ್ದಾರೆ. ಇನ್ನೆನು ಸೋಮವಾರದಿಂದ ಶೂಟಿಂಗ್​ ಶುರುವಾಗಲಿದೆ‘ ಎಂದರು ನಿರ್ದೇಶಕರು.
ಬಳಿಕ ಮಾತನಾಡಿದ ನಾಯಕ ನಿರಂಜನ್, ‘ನನಗೆ ಸಿನಿಮಾವೊಂದೆ ಗೊತ್ತಿರುವುದು. ಅದರಲ್ಲಿಯೇ ಏನಾದರು ಮಾಡಬೇಕೆಂಬ ತುಡಿತ ಇದೆ. ತುಂಬ ವರ್ಷಗಳಿಂದ ಒಳ್ಳೇ ಸ್ಕ್ರಿಪ್ಟ್ ಸಲುವಾಗಿ ಕಾಯುತ್ತಿದ್ದೆ. ಅದು ಸೂಪರ್​ಸ್ಟಾರ್ ಮೂಲಕ ಸಿಕ್ಕಿತು. ಡಾನ್ಸಿಂಗ್​ ಸಿನಿಮಾ ಆಗಿರುವುದರಿಂದ ನನಗೂ ಡಾನ್ಸ್ ಇಷ್ಟ. ಒಂದೊಳ್ಳೆ ಮೆಸೆಜ್ ಸಹ ಇದರಲ್ಲಿದೆ‘ ಎಂದ ನಟ ನಿರಂಜನ್, ಸಿನಿಮಾದ ಖಡಕ್ ಡೈಲಾಗ್​ ಹೇಳಿ ಚಪ್ಪಾಳೆ ಗಿಟ್ಟಿಸಿಕೊಂಡರು.
ಇನ್ನು ಚಿತ್ರದ ಲಿರಿಕಲ್ ವಿಡಿಯೋವನ್ನು ಲವ್ಲಿ ಸ್ಟಾರ್ ಪ್ರೇಮ್ ಬಿಡುಗಡೆ ಮಾಡಿದರು. ವಿಜಯ್ ಮಾಸ್ಟರ್ ಅವರು ಈ ಚಿತ್ರಕ್ಕೆ ಸಾಹಸ ನಿರ್ದೇಶನ ಮಾಡಲಿದ್ದಾರೆ. ಯೋಗಿ ಕ್ಯಾಮರ್, ರಾಘವೇಂದ್ರ ವಿ ಸಂಗೀತ, ವಿಜಯ್ ಕುಮಾರ್ ಸಂಕಲನ, ಮೋಹನ್ ಅವರು ಈ ಚಿತ್ರಕ್ಕೆ ಕಲಾ ನಿರ್ದೇಶನ ಮಾಡಲಿದ್ದಾರೆ. ಇನ್ನುಳಿದ ತಾರಾಗಣದ ಆಯ್ಕೆಯೂ ನಡೆಯುತ್ತಿದ್ದು, ಶೀಘ್ರದಲ್ಲಿ ಅದನ್ನು ಬಹಿರಂಗ ಪಡಿಸಲಿದ್ದಾರೆ.