ಸುದೀಪ್ ಈಗ ಚಿರಂಜೀವಿ “ಅಶ್ವತ್ಥಾಮ”

ಮಹಾಭಾರತದಲ್ಲಿ ಚಿರಂಜೀವಿಗಳಲ್ಲಿ ಒಬ್ಬರಾದ ‘ಅಶ್ವತ್ಥಾಮ’ನ ಬಗ್ಗೆ ಪುರಾಣ – ಪುಣ್ಯಕಥೆಗಳಲ್ಲಿ ಸಾಕಷ್ಟು ಉಲ್ಲೇಖವಿದೆ. ಈಗ ಇದೇ ‘ಅಶ್ವತ್ಥಾಮ’ನಿಗೆ ಸಿನಿಮಾ ರೂಪ ನೀಡಲು ಹೊರಟಿದ್ದಾರೆ ನಿರ್ದೇಶಕ ಅನೂಪ್ ಭಂಡಾರಿ. ಸದ್ಯಕ್ಕೆ ಸುದೀಪ್ ಅಭಿನಯದ ‘ಫ್ಯಾಂಟಮ್’ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿರುವ ಅನೂಪ್, ತಮಗೆ ಸಿಕ್ಕ ಬಿಡುವಿನ ವೇಳೆಯಲ್ಲಿ ಹೊಸಕಥೆಯೊಂದನ್ನು ರೆಡಿ ಮಾಡಿದ್ದಾರೆ. ಅದಕ್ಕೆ ‘ಅಶ್ವತ್ಥಾಮ’ ಎಂದು ಹೆಸರಿಟ್ಟಿದ್ದಾರೆ. ಮಹಾಭಾರತದಲ್ಲಿ ಬರುವ ಚಿರಂಜೀವಿ ‘ಅಶ್ವತ್ಥಾಮ’ನ ಎಳೆಯನ್ನು ಇಟ್ಟುಕೊಂಡು, ಅದನ್ನು ಇಂದಿನ ಜನರೇಶನ್‌ಗೆ ಕನೆಕ್ಟ್ ಆಗುವ ರೀತಿಯಲ್ಲಿ ತೆರೆಮೇಲೆ ಹೇಳಲು ಹೊರಟಿ ದ್ದಾರಂತೆ ಅನೂಪ್ ಭಂಡಾರಿ.

ಈ ಬಗ್ಗೆ ಮಾತನಾಡುವ ಅನೂಪ್ ಭಂಡಾರಿ, ನಾವೆಲ್ಲ ಮಹಾಭಾರತದಲ್ಲಿ ಬರುವ ಅಶ್ವತ್ಥಾಮನ ಬಗ್ಗೆ ಕೇಳಿರುತ್ತೀವಿ. ಚಿರಂಜೀವಿ ಎಂದು ಹೇಳಲಾಗುವ ಅಶ್ವತ್ಥಾಮನ ಬಗ್ಗೆ ಹಲವು ಕಥೆಗಳಿವೆ. ಇಂದಿಗೂ ಅಶ್ವತ್ಥಾಮ ಬದುಕಿದ್ದಾನೆ.ಅವನನ್ನು ನೋಡಿದ್ದೇವೆ ಎಂದು ಹೇಳುವವರು ಇದ್ದಾರೆ. ಹಾಗಾದ್ರೆ ನಿಜವಾಗಿಯೂ ಅಶ್ವತ್ಥಾಮ ಇಂದಿಗೂ ಬದುಕಿದ್ದಾನಾ? ಬದುಕಿದ್ದರೆ ಅಶ್ವತ್ಥಾಮ ಹೇಗಿರಬಹುದು? ಇವತ್ತಿನ ಆಧುನಿಕ ಜಗತ್ತನ್ನು ಆಗ ಹೇಗೆ ನೋಡುತ್ತಿರ ಬಹುದು? ಹೀಗೆ ಹಿಂದಿನ ಮತ್ತು ಇಂದಿನ ಅನೇಕ ಸಂಗತಿಗಳ ಸುತ್ತ ಈ ಕಥೆ ನಡೆಯುತ್ತದೆ ಎನ್ನುತ್ತಾರೆ.

ಅನೂಪ್ ಭಂಡಾರಿ ಹೇಳುವಂತೆ ‘ಅಶ್ವತ್ಥಾಮ’ ಒಂದು ಆ್ಯಕ್ಷನ್ ಕಂ ಅಡ್ವೆಂಚರ್-ಥ್ರಿಲ್ಲರ್ ಶೈಲಿಯ ಸಿನಿಮಾವಂತೆ. ಇಂದಿನ ಆಡಿಯನ್ಸ್ ಗೆ ತಕ್ಕಂತೆ ಕಂಟೆಂಟ್ ಈ ಸಿನಿಮಾದಲ್ಲಿರುತ್ತದೆ. ಇನ್ನು ‘ಅಶ್ವತ್ಥಾಮ’ ಚಿತ್ರದ ಕಥೆ ಕೇಳಿರುವ ನಟ ಕಿಚ್ಚ ಸುದೀಪ್ ಈ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಅಲ್ಲದೆ ತಮ್ಮ “ಕಿಚ್ಚ ಕ್ರಿಯೇಶನ್ಸ್” ಬ್ಯಾನರ್ ಮೂಲಕ ಈ ಚಿತ್ರದ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಮತ್ತೊಂದೆಡೆ ‘ಅಶ್ವತ್ಥಾಮ’ ಶುರುವಾಗೋದು ಯಾವಾಗ ಎಂಬ ಪ್ರಶ್ನೆಗೆ, ‘ಫ್ಯಾಂಟಮ್’ ಚಿತ್ರ ಮೊದಲು ಮುಗಿಯಬೇಕು ಎನ್ನುತ್ತಾರೆ ಅನೂಪ್.