ಶಂಕರ್ ರವರ “ಶಂಭೋ ಶಿವ ಶಂಕರ”

ಕರೊನಾದಿಂದ ನಾಲ್ಕು ತಿಂಗಳು ಕನ್ನಡ ಚಿತ್ರರಂಗ ಮಂಕಾಗಿತ್ತು. ಈಗ ಒಂದೊಂದೇ ಚಿತ್ರಗಳು ಪ್ರಾರಂಭವಾಗುತ್ತಿದ್ದು ಚಿತ್ರರಂಗವನ್ನೇ ನಂಬಿರುವ ಅನೇಕರಿಗೆ ಸಂತಸದ ದಿನಗಳು ಆರಂಭವಾಗುವ ಲಕ್ಷಣಗಳು ಕಾಣುತ್ತಿವೆ. ಈ ಸಂದರ್ಭದಲ್ಲಿ ಆರಂಭವಾಗುತ್ತಿರುವ ನೂತನ ಚಿತ್ರಗಳಲ್ಲಿ ಅಘನ್ಯ ಪಿಕ್ಚರ್ಸ್ ನಿರ್ಮಿಸುತ್ತಿರುವ “ಶಂಭೋ ಶಿವ ಶಂಕರ” ಚಿತ್ರ ಕೂಡ ಒಂದು.

ಸದ್ಯ ಈ ಚಿತ್ರದ ಪೋಸ್ಟರ್ ಹಾಗೂ ಚಿತ್ರದ ಶೀರ್ಷಿಕೆಯನ್ನು ನಟ ಡಾಲಿ ಧನಂಜಯ್ ಹಾಗೂ ವಶಿಷ್ಠ ಸಿಂಹ ಬಿಡುಗಡೆಗೊಳಿಸಿದ್ದಾರೆ.

ಈ ಚಿತ್ರವನ್ನು ಕಿರುತೆರೆಯಲ್ಲಿ ಯಶಸ್ಸು ಕಂಡ “ಜನುಮದ ಜೋಡಿ” “ನಾಯಕಿ” ಧಾರಾವಾಹಿಗಳನ್ನು ನಿರ್ದೇಶಿಸಿರುವ ಶಂಕರ್ ಕೋನಮಾನಹಳ್ಳಿ ಯವರು ನಿರ್ದೇಶಿಸುತ್ತಿದ್ದು ಕಿರುತೆರೆಯ ಅನುಭವದ ಮೇಲೆ ಬೆಳ್ಳಿ ಪರದೆಗೆ ಲಗ್ಗೆಹಾಕಿ ಅಲ್ಲಿಯೂ ಸಹ ಗೆಲುವನ್ನು ಕಾಣುವ ಹಂಬಲದಲ್ಲಿದ್ದಾರೆ.

ಸೆಪ್ಟೆಂಬರ್ ಎರಡನೆ ವಾರದಲ್ಲಿ ಚಿತ್ರೀಕರಣ ಆರಂಭವಾಗಲಿದ್ದು, ಬೆಂಗಳೂರಿನಲ್ಲಿ ಮಾತಿನ ಭಾಗದ ಚಿತ್ರೀಕರಣ ಹಾಗೂ ಕರ್ನಾಟಕದ ಸುಂದರ ಸ್ಥಳಗಳಲ್ಲಿ ಹಾಡಿನ ಚಿತ್ರೀಕರಣ ನಡೆಯಲಿದೆ. ಬೆಳ್ಳಿತೆರೆಯಲ್ಲಿ ಶಂಕರ್ ಕೋನಮಾನಹಳ್ಳಿ ಅವರಿಗೆ ಇದು ಮೊದಲ ಚಿತ್ರ. ಕಥೆ ಚಿತ್ರಕಥೆ ಸಂಭಾಷಣೆ ಕೂಡ ಶಂಕರ್ ಅವರದಾಗಿದೆ. ಅಭಯ್ ಪುನೀತ್, ರೋಹಿತ್, ರಕ್ಷಕ್, ಸೋನಲ್ ಮಾಂಟೆರೋ ಅಭಿನಯಿಸುತ್ತಿರುವ ಈ ಚಿತ್ರಕ್ಕೆ ಗೌಸ್ಪೀರ್ ಹಾಗೂ ಹಿತನ್ ಹಾಸನ್ ಹಾಡುಗಳನ್ನು ಬರೆದಿದ್ದು ಹಿತನ್ ಹಾಸನ್ ಅವರೇ ಸಂಗೀತ ನೀಡುತ್ತಿದ್ದಾರೆ. ನಟರಾಜ್ ಮುದ್ದಾಳ ಅವರ ಛಾಯಾಗ್ರಹಣವಿದ್ದು ಕಲೈ ನೃತ್ಯ ನಿರ್ದೇಶನ, ವೆಂಕಟೇಶ್ ಯುಡಿವಿ ಸಂಕಲನ ಹಾಗೂ ಅಲ್ಟಿಮೆಟ್ ಶಿವು ಅವರ ಸಾಹಸ ಈ ಚಿತ್ರಕ್ಕಿದೆ.