ನಾ ಕಂಡ ಬದುಕೆ ಸಿನಿಮಾ

ನಾ ಕಂಡ ಬದುಕೆ ಸಿನಿಮಾ

ನಾ ಕಂಡ ಬದುಕೆ ಸಿನಿಮಾ ಹೌದು ಪುಟ್ಟರಾಜು ಲವರ್ ಆಫ್ ಶಶಿಕಲಾ ಮುಖಾಂತರ ಭರವಸೆ ಮೂಡಿಸಿದಂತಹ ಅಪ್ಪಟ ದೇಸಿ ಪ್ರತಿಭೆ ನಿರ್ದೇಶಕ ಸಹದೇವ್ ಎಚ್ ಇವರು ಮೂಲತಃ ತುಮಕೂರಿನವರು. ತುಮಕೂರಿನ ಒಂದು ಪುಟ್ಟ ಹಳ್ಳಿಯಾದ ಗೂಳೆಹರವಿ ಎಂಬುದು ಇವರ ಊರು. ಇವರ ತಂದೆ ಹನುಮಂತರಾಯಪ್ಪ ತಾಯಿ ಸಾಕಮ್ಮ  ತಂದೆಯಾದ ಹನುಮಂತರಾಯಪ್ಪ ರವರು ಪೌರಾಣಿಕ ನಾಟಕ ಕಲಿಸುವ ಮಾಸ್ಟರ್ ಹಾಗೂ ಹರಿಕತೆ ದಾಸರು ಜೊತೆಗೆ ರೈತರು ಕೂಡ. ಸಹದೇವ್ ಬಾಲ್ಯದ ದಿನಗಳನ್ನು ತನ್ನ ಸ್ವಗ್ರಾಮಾವಾದ ಗೂಳೆಹರವಿಯಲ್ಲಿ ಕಳೆಯುತ್ತಾರೆ.

೧ನೇ ತರಗತಿಯಿಂದ ೭ನೇ ತರಗತಿಯವರೆಗೂ ಗೂಳೆಹರವಿಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ವ್ಯಾಸಂಗ ಮಾಡಿ ನಂತರ ಹೈಸ್ಕೂಲ್ ವಿದ್ಯಾಭ್ಯಾಸವನ್ನು ಪಕ್ಕದ ಊರಾದ ಪಾಲಸಂದ್ರದಲ್ಲಿ ಮಾಡುತ್ತಾರೆ. ಹೈಸ್ಕೂಲ್ನಲ್ಲಿ ಇರುವಾಗ ಖೋಖೋ ಆಟದಲ್ಲಿ ರಾಜ್ಯಮಟ್ಟದವರೆಗೂ ಹೋಗಿ ಬಂದಿರುತ್ತಾರೆ, ಮತ್ತೊಂದು ವಿಶೇಷವೆನೆಂದರೆ ಸಹದೇವ್ ರವರು ಡಾಕ್ಟರ್ ರಾಜ್ ಕುಮಾರ್ ರವರು ಅಭಿನಯಿಸಿರುವ ಭಕ್ತಪ್ರಹ್ಲಾದ ಚಿತ್ರದ ಹಿರಣ್ಯಕಶಿಪು ಏಕಪಾತ್ರ ಅಭಿನಯವನ್ನು ಮಾಡಿ ಇಡೀ ಶಾಲೆಯಿಂದಲೇ ಶಹಬ್ಬಾಸ್ ಗಿರಿ ಪಡೆದುಕೊಂಡಿದ್ದರು. ಜೊತೆಗೆ ಜಾನಪದ ಗೀತೆಗಳನ್ನು ಹಾಡುತ್ತಿದ್ದರು. ಆಗಿನಿಂದಲೇ ಸಿನಿಮಾಗಳ ಬಗ್ಗೆ ಅತಿ ಆಸಕ್ತಿ,ಅಪ್ಪನಿಗೆ ಗೊತ್ತಿಲ್ಲದಂತೆ ಸ್ನೇಹಿತರೊಂದಿಗೆ ಕದ್ದು ಹೋಗಿ ಸಿನಿಮಾಗಳನ್ನು ನೋಡಿ ಬರುತ್ತಿದ್ದರು. ಡಾಕ್ಟರ್ ರಾಜ್ ಕುಮಾರ್ ರವರ ಚಿತ್ರಗಳೆಂದರೆ ಸಹದೇವ್ ರವರಿಗೆ ತುಂಬಾ ಪ್ರಿಯ  ಅವರ ಪಕ್ಕಾ ಅಭಿಮಾನಿಯೂ ಕೂಡ ಆಗಿದ್ದರು.ಅವರ ಎಷ್ಟೋ ಪಾತ್ರಗಳನ್ನು ಶಾಲಾ ದಿನಗಳಲ್ಲಿ ಏಕ ಪಾತ್ರದಲ್ಲಿ ಅಭಿನಯಿಸಿ ಚಪ್ಪಾಳೆ ಗಿಟ್ಟಿಸಿಕೊಂಡಿದ್ದರು. ಆಕಸ್ಮಿಕ ಚಿತ್ರವನ್ನು ನೋಡಲು ಹೋಗಿ, ಆ ವಿಷಯ ತಂದೆಗೆ ಗೊತ್ತಾಗಿ ಒದೆ ತಿಂದಿದ್ದೂ ಉಂಟು. ಯಾಕೆಂದರೆ ಅಪ್ಪನಿಗೆ ಮಗ ಚೆನ್ನಾಗಿ ಓದಿ ಪೊಲೀಸ್ ಡಿಪಾರ್ಟ್ಮೆಂಟ್ನಲ್ಲಿ ಸೇರಿಕೊಳ್ಳಬೇಕೆಂದು ಅವರ ಆಸೆಯಾಗಿತ್ತು.ಆದರೆ ಸಹದೇವ್ ರವರ ಆಸಕ್ತಿಯೇ, ಆಸೆಯೇ ಬೇರೆಯಾಗಿತ್ತು, ಅದು ಸಿನಿಮಾ ನಟ ಹಾಗೂ ನಿರ್ದೇಶಕನಾಗುವ ಕನಸು.

ಇವರದು ರೈತ ಕುಟುಂಬವಾದ್ದರಿಂದ ತೋಟದಲ್ಲಿ, ಗದ್ದೆಗಳಲ್ಲಿ, ಹೊಲಗಳಲ್ಲಿ ಕೆಲಸ ಮಾಡಿಕೊಂಡು ಜೊತೆಗೆ ವಿದ್ಯಾಬ್ಯಾಸ ಮಾಡಿಕೊಂಡು ಶಾಲಾ ದಿನಗಳನ್ನು ಮುಗಿಸಿ ನಂತರ ಕಾಲೇಜು ವಿದ್ಯಾಭ್ಯಾಸವನ್ನು ಮುಂದುವರಿಸುತ್ತಾರೆ. ಕನ್ನಡ ಮಾಧ್ಯಮದಲ್ಲಿ ಓದಿದಂತಹ ಸಹದೇವ್ ಕಾಲೇಜಿನಲ್ಲಿ ಆಯ್ಕೆ ಮಾಡಿಕೊಳ್ಳುವುದು ಸೈನ್ಸ್ (ಪಿಸಿಎಂಬಿ) ಅನ್ನು ಮೊದಮೊದಲಿಗೆ ಕಷ್ಟವಾದರೂ ನಂತರ ಶ್ರದ್ಧೆಯಿಂದ ಕಷ್ಟ ಪಟ್ಟು ಓದಿ, ದ್ವಿತೀಯ ಪಿಯುಸಿಯಲ್ಲಿ ಮೊದಲನೇ ದರ್ಜೆಯಲ್ಲಿ ಉತ್ತೀರ್ಣರಾಗುತ್ತಾರೆ.ನಂತರ ಡಿಗ್ರಿಗೆ ಸೇರಿಕೊಂಡು ಅಲ್ಲಿ ಪಿಸಿಎಂ ಎಂಬ ಸಬ್ಜೆಕ್ಟ್ ಅನ್ನು ತೆಗೆದುಕೊಂಡು ಮೊದಲ ವರ್ಷ ಹಾಗೂ ಎರಡನೇ ವರ್ಷ ಪ್ರಥಮ ದರ್ಜೆಯಲ್ಲಿ ಉತ್ತಿರ್ಣರಾಗುತ್ತಾರೆ. ಮೂರನೇ ವರ್ಷದಲ್ಲಿ ಓದುತ್ತಿರುವಾಗ ಅವರ ತಂದೆ ಅಕಾಲಿಕ ಮರಣ ಹೊಂದುತ್ತಾರೆ,ಆಗ ಸಹದೇವ್ ರವರಿಗೆ ದಿಕ್ಕೇ ತೋಚದಂತಾಗುತ್ತದೆ, ಅಲ್ಲಿಯವರೆಗೂ ಅವರ ತಂದೆಯೆ ಇವರಿಗೆ ಬೆನ್ನೆಲುಬು.

ತಂದೆಯ ಆಸೆಯಂತೆ ಇವರು ಪೊಲೀಸ್ ಡಿಪಾರ್ಟ್ಮೆಂಟ್ ಸೇರಬೇಕಿತ್ತು ಆದರೆ ತಂದೆಯ ಅಕಾಲಿಕ ಮರಣದಿಂದ ಸಹದೇವ್ ಕುಗ್ಗಿಹೋಗುತ್ತಾರೆ. ಮೂರನೇ ವರ್ಷದ ಡಿಗ್ರಿ ಮುಗಿದ ನಂತರ ತನ್ನ ಅಕ್ಕನ ಮಗಳಾದ ಲಕ್ಷ್ಮಿ ಎಂಬುವವರ ಜೊತೆ ಮದುವೆಯಾಗುತ್ತಾರೆ. ನಂತರ ಅವರ ಆಸೆಯಂತೆ 2007 ರಲ್ಲೀ ನಿರ್ದೇಶಕನಾಗಬೇಕು, ನಟನಾಗಬೇಕು ಎಂಬ ಕನಸು ಹೊತ್ತು ಬೆಂಗಳೂರಿಗೆ ಸಹದೇವ್ ಬರುತ್ತಾರೆ. ಅವರಿಗೆ ಬೆಂಗಳೂರು ಹೊಸದು, ಇಲ್ಲಿ ಯಾರ ಪರಿಚಯವೂ ಇಲ್ಲ, ಅದರಲ್ಲೂ ಸಿನಿಮಾದಲ್ಲಿರುವ ಯಾರೂ ಕೂಡ ಇವರಿಗೆ ಗೊತ್ತಿಲ್ಲ, ಒಂದಷ್ಟು ದಿನಗಳು ಅಲೆದಾಟ, ಪರದಾಟ, ಹಸಿವು, ಅವಮಾನ, ಅವಕಾಶವಿಲ್ಲ, ಕಂಡ ಕನಸನ್ನು ನನಸು ಮಾಡಿಕೊಂಡೆ ಊರಿಗೆ ಹೋಗಬೇಕು ಎಂದು ಪ್ರಯತ್ನ ಬಿಡದೇ ಒಂದು ಸಿನಿಮಾದಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಗಿಟ್ಟಿಸಿಕೊಳ್ಳುತ್ತಾರೆ. ಅದಾದ ನಂತರ ನಾಲ್ಕೈದು ಸಿನಿಮಾಗಳಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿ 2017 ರಲ್ಲಿ ಸ್ವತಂತ್ರ ನಿರ್ದೇಶಕರಾಗಿ ನಾನು ನನ್ನ ಹುಡುಗಿ ಎಂಬ ಸಿನಿಮಾವನ್ನು ಪ್ರಾರಂಭಿಸುತ್ತಾರೆ.

ಇವರ ದುರಾದೃಷ್ಟವೋ ಏನೋ ಗೊತ್ತಿಲ್ಲ, ಆ ಸಿನಿಮಾ ಕೂಡ ಅರ್ಧಕ್ಕೆ ನಿಂತು ಹೋಗುತ್ತೆ. ಮುಂದೆ ಏನು ಮಾಡಬೇಕು ಎಂದು ತೋಚದಿದ್ದಾಗ, ಹೇಗಾದರೂ ಸಿನಿಮಾ ಮಾಡಲೇಬೇಕೆಂದು ನಿರ್ಧರಿಸಿ,ಒಂದಷ್ಟು ಸ್ನೇಹಿತರನ್ನು ಕಲೆಹಾಕಿ ಪುಟ್ಟರಾಜು ಲವರ್ ಆಫ್ ಶಶಿಕಲಾ ಎಂಬ ಸಿನಿಮಾವನ್ನು ನಿರ್ದೇಶನ ಮಾಡಲು ಅಣಿಯಾಗುತ್ತಾರೆ. ತುಮಕೂರಿನಲ್ಲಿ ತಾನು ಓದುತ್ತಿದ್ದಾಗ ನಡೆದ ಕೆಲವೊಂದಷ್ಟು ಘಟನೆಗಳು ಹಾಗೂ ಖೋಖೋ ಕ್ರೀಡೆಯನ್ನು ಇಟ್ಟುಕೊಂಡು ಸಿನಿಮಾ ತಯಾರಿ ಮಾಡುತ್ತಾರೆ. 2018 ಆಗಸ್ಟ್ 10 ನೇ ತಾರೀಖಿನಂದು ಪುಟ್ಟರಾಜು ಲವರ್ ಆಫ್ ಶಶಿಕಲಾ ಚಿತ್ರ ತೆರೆ ಕಾಣುತ್ತೆ. ಚಿತ್ರ ನೋಡಿದ ಪ್ರತಿಯೊಬ್ಬರು ಚಿತ್ರದ ಬಗ್ಗೆ ಒಳ್ಳೆಯ ಪ್ರಶಂಸೆಯನ್ನು ವ್ಯಕ್ತಪಡಿಸುತ್ತಾರೆ. ಚಿತ್ರಮಂದಿರದಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದ್ದಾಗಲೆ, ಪರಭಾಷೆ ಚಿತ್ರಗಳ ಹಾವಳಿಯಿಂದ ಪುಟ್ಟರಾಜು ಲವರ್ ಆಫ್‌ ಶಶಿಕಲಾ ಚಿತ್ರವನ್ನು ಹದಿನೈದು ದಿನಗಳ ನಂತರ ಚಿತ್ರಮಂದಿರದಿಂದ ಕಿತ್ತು ಬಿಸಾಕುತ್ತಾರೆ.

ಪ್ರಯತ್ನ ಉತ್ತಮವಾಗಿದ್ದರೂ ಚಿತ್ರಮಂದಿರದಲ್ಲಿ ಉಳಿಸಿಕೊಳ್ಳಲಾಗಲಿಲ್ಲ. ಆದರೆ ಸೋಷಿಯಲ್ ಮೀಡಿಯಾ ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಪುಟ್ಟರಾಜು ಲವರ್ ಆಫ್‌ ಶಶಿಕಲಾ ಸಿನಿಮಾ ಕೋಟ್ಯಾಂತರ ಜನರಿಗೆ ತಲುಪಿ ಅತ್ಯದ್ಭುತವಾದ ಯಶಸ್ಸನ್ನು ಕಾಣುತ್ತೆ. ಚಿತ್ರಮಂದಿರಗಳಲ್ಲಿ ಉಳಿಸಿಕೊಳ್ಳಲಾಗದ ಸಿನಿಮಾ ಜನರ ಮನಸ್ಸಿನಲ್ಲಿ ಉಳಿದುಕೊಳ್ಳುತ್ತದೆ. ಎಲ್ಲಾ ಕಡೆ ಪುಟ್ಟರಾಜು ಲವರ್ ಆಫ್ ಶಶಿಕಲಾ ಸಿನಿಮಾ ಬಗ್ಗೆ ಗೊತ್ತಾಗುತ್ತದೆ. ಎಲ್ಲರ ಬಾಯಲ್ಲೂ ಒಂದೇ ಮಾತು ಇಂತ ಒಳ್ಳೆಯ ಸಿನಿಮಾ ಏಕೆ ಚಿತ್ರಮಂದಿರಗಳಲ್ಲಿ ನಿಲ್ಲಲಿಲ್ಲ ಎಂದು ಕಾರಣ ಹೊಸಬರ ಸಿನಿಮಾ…. ಹತಾಶರಾಗದ ಸಹದೇವ್ ಅವರು ನಂತರ ಒಂದು ಒಳ್ಳೆಯ ಕತೆಯನ್ನು ರೆಡಿ ಮಾಡಿಕೊಂಡು, ಹೆಸರಿರುವ ನಾಯಕರನ್ನು ಹಾಕಿಕೊಂಡು ಸಿನಿಮಾ ಮಾಡಬೇಕೆಂದು ನಿರ್ಧಾರ ಮಾಡುತ್ತಾರೆ.

ಒಂದಷ್ಟು ಹೆಸರಿರುವ ನಾಯಕರ ಭೇಟಿಯನ್ನು ಮಾಡುತ್ತಾರೆ, ಯಾವುದೂ ಕೂಡ ಇವರು ಅಂದುಕೊಂಡ ಹಾಗೆ ಆಗುವುದಿಲ್ಲ ಕಾರಣ ಒಬ್ಬ ನಿರ್ದೇಶಕ ಅಂದುಕೊಂಡ ಹಾಗೆ ಸಿನಿಮಾ ಮಾಡಲಾಗದಿದ್ದರೆ, ಅದನ್ನು ಕೈ ಬಿಡಬೇಕೆ ಹೊರತು ಅದನ್ನು ಮುಂದುವರೆಸಬಾರದು ಎಂಬ ದೃಢ ನಿರ್ಧಾರ ತೆಗೆದುಕೊಂಡು, ಒಬ್ಬ ನಾಯಕನಿಗಾಗಿ ಕಥೆ ಮಾಡುವ ಬದಲು, ಕತೆಗೆ ನಾಯಕನನ್ನು ಹುಡುಕುವುದೇ ಒಬ್ಬ ನಿರ್ದೇಶಕನ ಬುದ್ಧಿವಂತಿಕೆ. ಆಗಲೇ ಸಹದೇವ ಅವರ ತಲೆಯಲ್ಲಿ ಹುಟ್ಟಿದ ಕಥೆಯೇ ಮುಖವಾಡ.

ಒಂದು ಗೆಲ್ಲುವ ಕುದುರೆ ಹಿಂದೆ ಓಡುವ ಬದಲು,ಹೊಸ ಕುದುರೆಯನ್ನು ಹಿಡಿದುಕೊಂಡು ಗೆಲ್ಲಿಸಲೇಬೇಕೆಂಬ ಹಠ ತೊಟ್ಟು, ಈ ಮುಖವಾಡ ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ. ಇದರಲ್ಲಿ ದಕ್ಷಿಣ ಭಾರತದ ಖ್ಯಾತ ನಟರಾದ ಅರ್ಜುನ್ ಸರ್ಜಾ ಕುಟುಂಬದವರಾದ ಪವನ್ ತೇಜ್ ರವರು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸುತ್ತಿದ್ದಾರೆ ಹಾಗೂ ತಮಿಳಿನಲ್ಲಿ ಖ್ಯಾತಿ ಪಡೆದ ಶಿಲ್ಪಾ ಮಂಜುನಾಥ್ ರವರು ನಾಯಕಿಯಾಗಿ ಅಭಿನಯಿಸುತ್ತಿದ್ದು, ಉಳಿದಂತೆ ದೊಡ್ಡ ಕಲಾವಿದರ ದಂಡೇ ಈ ಚಿತ್ರದಲ್ಲಿ ಇದೆ. ಜೊತೆಗೆ ಮುಖ್ಯ ಪಾತ್ರವೊಂದರಲ್ಲಿ ವಿನೋದ್ ರಾಜ್ ರವರು ಕೂಡ ಅಭಿನಯಿಸುವ ಸಾಧ್ಯತೆಗಳಿವೆ.

ಮುಖವಾಡ ಚಿತ್ರದ ಚಿತ್ರೀಕರಣ ನಡೆಯುತ್ತಿರುವಾಗಲೇ ಸಹದೇವ್ ಮತ್ತೊಂದು ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ ಅದರಲ್ಲಿ ಪೂರ್ತಿಯಾಗಿ ಹೊಸ ಮುಖಗಳನ್ನೇ ಪರಿಚಯಿಸುತ್ತಿದ್ದಾರೆ. ಚಿತ್ರದ ಹೆಸರು ಪೇಪರ್ ಬೋಟ್ ಇದೊಂದು ಹೃದಯ ಮುಟ್ಟುವ ಚಿತ್ರವಾಗುತ್ತದೆ ಎನ್ನುವುದು ಸಹದೇವ್ ರವರ ಮಾತು. ಎರಡೂ ಚಿತ್ರಗಳನ್ನು ಕೈಗೆತ್ತಿಕೊಂಡಿರುವ ಕಾರಣ ಈ ಚಿತ್ರಗಳಲ್ಲಿರುವ ಕಂಟೆಂಟ್ ಕನ್ನಡಿಗರ ಮನೆ ಮನಗಳಿಗೆ ಕಂಡಿತವಾಗಿಯು ತಲುಪಿ, ಇಡೀ ಭಾರತ ಚಿತ್ರರಂಗವೇ ತಿರುಗಿ ನೋಡುವಂತಹ ಚಿತ್ರಗಳಾಗುತ್ತವೆ.

ಸ್ಟಾರ್ ಗಳಿಗೆ ಸಿನಿಮಾ ಮಾಡಿ ಸ್ಟಾರ್ ನಿರ್ದೇಶಕರಾಗುವುದು ದೊಡ್ಡ ವಿಷಯವಲ್ಲ. ಹೊಸಬರನ್ನು ಕಟ್ಟಿಕೊಂಡು ಹೊಸ ಪ್ರಯತ್ನಗಳನ್ನು ಮಾಡಿ ಜನರ ಮನಸ್ಸಿನಲ್ಲಿ ಉಳಿಯುವಂತೆ ಮಾಡುವ ನಿರ್ದೇಶಕನೇ ನಿಜವಾದ ಸ್ಟಾರ್ ನಿರ್ದೇಶಕ ಎಂಬುದು ಸಹದೇವ್ ರವರ ಬಲವಾದ ನಂಬಿಕೆ ಇದುವೆ ನಾ ಕಂಡ ಬದುಕೆ ಸಿನಿಮಾ. ಮುಂದೆ ಅವರ ಕಡೆಯಿಂದ ಉತ್ತಮವಾದ ಚಿತ್ರಗಳು ಕನ್ನಡ ಕನ್ನಡಿಗರ ಮನೆ ಮನಸ್ಸನ್ನು ರಂಜಿಸಲಿ ಎಂಬುದು ಕನ್ನಡ ಗೋಲ್ಡ್ ಪ್ರೇಮ್ಸ್ ನ ಆಶಯ