ಸರಣಿ ಕೊಲೆಗಳ ಹಿಂದಿರುವ ರೈಮ್ಸ್ ರಹಸ್ಯ..

ನಾನು ಅಜಿತ್‌ರ ತಂದೆ ಜಯರಾಜ್ ಜೊತೆ ತುಂಬಾ ಕಾದಾಡಿದವನು. ನಾನು ಪೋಲೀಸ್ ಇಲಾಖೆಗೆ ಬರಲು ಒಂದು ರೀತಿ ಸಿನಮಾನೇ ಕಾರಣ.

ದಶಕಗಳ ಹಿಂದೆ ಭೂಗತಲೋಕವನ್ನಾಳಿದ್ದ ಭೂಗತದೊರೆ ಜಯರಾಜ್ ಅವರ ಪುತ್ರ ಅಜಿತ್ ಜಯರಾಜ್ ಈಗ
ಚಿತ್ರರಂಗದಲ್ಲಿ ಕಲಾವಿದನಾಗಿ ಬೆಳೆಯುತ್ತಿದ್ದಾರೆ, ಹನಿಹನಿ ಇಬ್ಬನಿ, ತ್ರಾಟಕ ಮೊದಲಾದ ಚಿತ್ರಗಳಲ್ಲಿ ನಟಿಸಿರುವ ಅಜಿತ್ ಈಗ ಸೈಕಲಾಜಿಕಲ್  ಥ್ರಿಲ್ಲರ್ ಕಥಾಹಂದರ ಇರುವ ರೈಮ್ಸ್ ಚಿತ್ರದಲ್ಲಿ ನಾಯಕ. ಅಜಿತ್‌ಕುಮಾರ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು  ಆ್ಯಕ್ಷನ್ ಕಟ್ ಹೇಳಿದ್ದಾರೆ.

ಜೊತೆಗೆ ಶಕ್ತಿ ಅವರ ಸಂಗೀತ, ಅರ್ಜುನ ಅಕ್ಕೋಟ ಅವರ ಛಾಯಾಗ್ರಹಣವಿದೆ. ಚಿತ್ರದ ಪೋಸ್ಟರ್ ಅನಾವರಣ ರೇಣುಕಾಂಬ ಥಿಯೇಟರಿನಲ್ಲಿ ನಡೆಯಿತು. ಇಲ್ಲಿ ಮಾಜಿ ಪೋಲೀಸ್ ಕಮೀಷನರ್ ಬಿಬಿ ಅಶೋಕ್‌ಕುಮಾರ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದ್ದು ವಿಶೇಷವಾಗಿತ್ತು. ಅವರು ಮಾತನಾಡುತ್ತ ನಾವೇನೇ ಕೇಸ್ ಪತ್ತೆ ಮಾಡಿದರೂ ಅದನ್ನು ಸಿನಿಮಾಗಳಲ್ಲಿ ರೋಚಕವಾಗಿ ತೋರಿಸುತ್ತಾರೆ. ನಾನು ಅಜಿತ್‌ರ ತಂದೆ ಜಯರಾಜ್ ಜೊತೆ ತುಂಬಾ ಕಾದಾಡಿದವನು. ನಾನು ಪೋಲೀಸ್ ಇಲಾಖೆಗೆ ಬರಲು ಒಂದು ರೀತಿ ಸಿನಮಾನೇ ಕಾರಣ, ಅಮಿತಾಭ್ ಅವರ ಜಂಜೀರ್ ಸಿನಿಮಾ ನೋಡಿ ಪ್ರೇರಿತನಾಗಿದ್ದೆ. ೩೫ ವರ್ಷ ಇಲಾಖೆಯಲ್ಲಿ ಕೆಲಸ ಮಾಡಿದ್ದೇನೆ.ಇದು ಪವಿತ್ರವಾದ ಖಾಕಿ, ಇಲ್ಲಿ ಸಿಗೋ ಅನುಭವ ಬೇರೆಲ್ಲೂ ಸಿಗಲ್ಲ, ಯಾರು ಪೋಲೀಸರನ್ನು ಹೇಟ್ ಮಾಡ್ತಿದ್ದರೋ ಅವರ ಮಗನೇ ಈಗ ಪೋಲೀಸ್ ಪಾತ್ರ ಮಾಡ್ತಿದಾನೆ ಎನ್ನುತ್ತಾ ತಮ್ಮ ಸಾಕಷ್ಟು ಅನುಭವಗಳನ್ನು ಹಂಚಿಕೊಂಡರು.

ಸೈಕಲಾಜಿಕಲ್ ಕ್ರೈಮ್ ಥ್ರಿಲ್ಲರ್ ಕಥಾನಕ ಒಳಗೊಂಡಿರುವ ಈ ಚಿತ್ರದಲ್ಲಿ ಸರಣಿ ಕೊಲೆಗಳ ಹಿನ್ನೆಲೆಯನ್ನು ಬಯಲಿಗೆಳೆಯುವ ಪೊಲೀಸ್ ಇನ್ಸ್ಪೆಕ್ಟರ್ ಪಾತ್ರದಲ್ಲಿ ಅಜಿತ್ ಜಯರಾಜ್ ಕಾಣಿಸಿಕೊಂಡಿದ್ದಾರೆ. ಆ ಎಲ್ಲಾ ಕೊಲೆಗಳ ಹಿಂದೆ ರೈಮ್ಸ್ ಇರುತ್ತದೆ. ಅದರ ಹಿನ್ನೆಲೆ ಏನೆಂಬುದು ಕ್ಲೈಮ್ಯಾಕ್ಸ್ ನಲ್ಲಿ ತಿಳಿಯುತ್ತದೆ. ಇಲ್ಲಿ ಪತ್ರಿಕೆಯೊಂದರ ಕ್ರೈಮ್ ವರದಿಗಾರ್ತಿಯೂ ನಾಯಕನ ತನಿಖೆಗೆ ಕೈಜೋಡಿಸುತ್ತಾರೆ. ನಾಯಕ ಅಜಿತ್ ಜಯರಾಜ್ ಮಾತನಾಡುತ್ತ ಈ ಸಿನಿಮಾ ಕನ್ನಡ ಇಂಡಸ್ಟಿಯನ್ನು ಬೇರೆ ಲೆವೆಲ್‌ಗೆ ತೆಗೆದುಕೊಂಡು ಹೋಗುತ್ತದೆ. ಚಿತ್ರದ ಕ್ಲೆಮ್ಯಾಕ್ಸ್ ಯಾರೂ ಊಹಿಸಲು ಸಾಧ್ಯವಿಲ್ಲ, ಪಾತ್ರದ ನರೇಶನ್ ನನಗೆ ತುಂಬಾ ಇಷ್ಟವಾಯಿತು ಎಂದು ಹೇಳಿದರು.