‘ರಾ ಗಿಣಿ’ ಗೆ ಮತ್ತೊಂದು ಶಾಕ್!

ಸ್ಯಾಂಡಲ್ ವುಡ್ ಡ್ರಗ್ಸ್ ಜಾಲದ ನಂಟು ಆರೋಪದಲ್ಲಿ ಆರೋಪಿಯಾಗಿರುವ ರಾಗಿಣಿ ಸದ್ಯ ಸಿಸಿಬಿ ವಶದಲ್ಲಿದ್ದಾರೆ. ಮಾದಕ ವಸ್ತು ಮಾರಾಟ ಜಾಲ ಪ್ರಕರಣದ ಸಂಬಂಧ ಶುಕ್ರವಾರ ಬಂಧಿಸಿದ ಬಳಿಕ ರಾಗಿಣಿಯನ್ನು ಸಿಸಿಬಿ ಏಳು ತಾಸುಗಳ ಸುದೀರ್ಘ ವಿಚಾರಣೆ ನಡೆಸಿತು. ಈ ವೇಳೆ ಸಾರಿಗೆ ಇಲಾಖೆ ನೌಕರ ರವಿಶಂಕರ್‌ನೊಂದಿಗಿನ ಗೆಳೆತನ, ಕನ್ನಡ ಚಲನಚಿತ್ರಗಳಲ್ಲಿ ನಟನೆ, ಐಷಾರಾಮಿ ಪಾರ್ಟಿಗಳು ಹಾಗೂ ಡ್ರಗ್ಸ್‌ ಸೇವನೆ ಸೇರಿದಂತೆ ತನ್ನ ಬದುಕಿನ ಕುರಿತು ಸವಿಸ್ತಾರವಾಗಿ ಆಕೆ ಹೇಳಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಇದರ ಬೆನ್ನಲ್ಲೇ ನಟಿ ರಾಗಿಣಿಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮತ್ತೊಂದು ಶಾಕ್ ನೀಡಿದೆ. ಸ್ವಚ್ಛ  ಭಾರತ ಅಭಿಯಾನದ ರಾಯಭಾರಿಯಾಗಿದ್ದ ರಾಗಿಣಿಯನ್ನು ರಾಯಭಾರಿ ಸ್ಥಾನದಿಂದ ಕೈಬಿಡಲಾಗಿದೆ.

ಹುಬ್ಬಳ್ಳಿ-ಧಾರವಾಡ ಪಾಲಿಕೆಯ ಸ್ವಚ್ಛ ಭಾರತ್ ಅಭಿಯಾನ್ ಕಾರ್ಯಕ್ರಮಕ್ಕೆ ರಾಗಿಣಿ ಅವರನ್ನು ರಾಯಭಾರಿಯನ್ನಾಗಿ ಮಾಡಲಾಗಿತ್ತು. ಆದರೆ ಇದೀಗ ಡ್ರಗ್ಸ್ ಕೇಸ್ ನಲ್ಲಿ ನಟಿ ಹೆಸರು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ರಾಯಭಾರಿ ಸ್ಥಾನದಿಂದ ಕೈಬಿಡಲಾಗಿದೆ.