ಪಾರ್ಟಿ ಫ್ರೀಕ್ ಹಾಡಿನ ಮೂಲಕ ನ್ಯೂ ಇಯರ್ ಕಿಕ್ಕೇರಿಸಲು ಬರುತ್ತಿದ್ದಾರೆ ಚಂದನ್ ಶೆಟ್ಟಿ

ಚಂದನ್ ಶೆಟ್ಟಿಗೆ ಪತ್ನಿ ನಿವೇದಿತಾ ಗೌಡ ಸಾಥ್; ಹಾಡಿನಲ್ಲಿರಲಿದ್ದಾರೆ ನಿಶ್ವಿಕಾ ನಾಯ್ಡು ಮತ್ತು ಧರ್ಮ

ಗಾಯಕ, ಸಂಗೀತಗಾರ ಚಂದನ್ ಶೆಟ್ಟಿ ಪಾರ್ಟಿ ಸಾಂಗ್ ಮಾಡದೇ ತುಂಬ ದಿನ ಆಯ್ತು. ‘ಮೂರೇ ಮೂರು ಪೆಗ್ಗಿಗೆ..’, ‘ಟಕೀಲಾ..’ ಪಾರ್ಟಿ ಸಾಂಗ್ ಗಳ ಬಳಿಕ ಬೇರೆ ಹಾಡುಗಳನ್ನು ಮಾಡಿದರೇ ಹೊರತು, ಅದಾದ ಬಳಿಕ ಪಾರ್ಟಿ ಹಾಡುಗಳು ಕಿವಿಗಪ್ಪಳಿಸಿರಲಿಲ್ಲ. ಇದೀಗ ಆ ಕಾಯುವಿಕೆಗೆ ಉತ್ತರ ಸಿಕ್ಕಿದೆ. ಅಂದರೆ, ಹೊಸ ವರ್ಷದ ಪ್ರಯುಕ್ತ ಕಿಕ್ಕೇರಿಸಲು ಚಂದನ್ ಶೆಟ್ಟಿ ಪಾರ್ಟಿ ಸಾಂಗ್ ಮೂಲಕ ಆಗಮಿಸುತ್ತಿದ್ದಾರೆ.

ಡಿ.26ಕ್ಕೆ ಯುನೈಟ್ ಆಡಿಯೋಸ್ ನಲ್ಲಿ ಬಿಡುಗಡೆ; ಚೈತನ್ಯ ಲಕಂಸಾನಿ ನಿರ್ಮಾಣ

ಈ ಸಲ ಒಂದಷ್ಟು ವಿಶೇಷಗಳ ಜತೆಗೆ ಚಂದನ್ ಶೆಟ್ಟಿ ಎಂಟ್ರಿಯಾಗುತ್ತಿದೆ. ಕನ್ನಡದ ಜತೆಗೆ ತೆಲುಗಿನಲ್ಲಿಯೂ ಈ ಹಾಡು ಮೂಡಿಬರಲಿದ್ದು, ಅದ್ಧೂರಿ ವೆಚ್ಚದಲ್ಲಿ, ಕಲರ್ ಫುಲ್ ಸೆಟ್ ನಲ್ಲಿ ಎರಡು ದಿನ ಹಾಡಿನ ಶೂಟಿಂಗ್ ನಡೆಯಲಿದೆ. ಬೆಂಗಳೂರಿನ ದೊಡ್ಡ ದೊಡ್ಡ ಹೋಟೆಲ್ ಮತ್ತು ಪಬ್ ಗಳಲ್ಲಿ ಈ ಹಾಡಿನ ಚಿತ್ರೀಕರಣವಾಗಲಿದೆ.
ಹಾಗಾದರೆ ಹಾಡಿನ ಶೀರ್ಷಿಕೆ ಏನು? ‘ಪಾರ್ಟಿ ಫ್ರೀಕ್’ ಹೆಸರಿನ ಈ ಹಾಡನ್ನು ಚೈತನ್ಯ ಲಕಂಸಾನಿ ನಿರ್ಮಾಣ ಮಾಡುತ್ತಿದ್ದಾರೆ. ಚಂದನ್ ಶೆಟ್ಟಿ ಸಂಗೀತ ನೀಡಿ, ಸಾಹಿತ್ಯ ಬರೆದು ಧ್ವನಿ ನೀಡಿ ಹಾಡಿನಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ನಟಿ ನಿಶ್ವಿಕಾ ನಾಯ್ಡು ಈ ಕಲರ್ ಫುಲ್ ಹಾಡಿನಲ್ಲಿ ಮಸ್ತ್ ಮಸ್ತ್ ಡಾನ್ಸ್ ಮಾಡಲಿದ್ದಾರೆ. ಅಷ್ಟೇ ಅಲ್ಲ ಚಂದನ್ ಶೆಟ್ಟಿ ಪತ್ನಿ ನಿವೇದಿತಾ ಗೌಡ ಸಹ ಈ ಹಾಡಿನಲ್ಲಿರಲ್ಲಿದ್ದಾರೆ. ವಿಶೇಷ ಪಾತ್ರದಲ್ಲಿ ನಟ ಧರ್ಮ ಅವರನ್ನು ತೋರಿಸಲಿದ್ದಾರೆ ಚಂದನ್.
ಶ್ರೀಶ ಕುದುವಳ್ಳಿ ಛಾಯಾಗ್ರಹಣ, ಅಜಿತ್ ಶ್ರೀರವಿ ಅವರ ವಸ್ತ್ರ ವಿನ್ಯಾಸ ಮಾಡಲಿದ್ದು, ಮೋಹನ್ ಮಾಸ್ಟರ್ ಹಾಡಿಗೆ ನೃತ್ಯ ನಿರ್ದೇಶನ ಮಾಡಲಿದ್ದಾರೆ. ಸಾಹಿತ್ಯ, ಸಂಗೀತ ಮತ್ತು ಗಾಯನದ ಉಸ್ತುವಾರಿ ಚಂದನ್ ಶೆಟ್ಟಿ ಅವರದ್ದು.
ಕರೊನಾ ಹಿನ್ನೆಲೆಯಲ್ಲಿ ಈ ವರ್ಷದ ನ್ಯೂ ಇಯರ್ ಪಾರ್ಟಿ ಆಚರಣೆಗೆ ಸರ್ಕಾರ ಬ್ರೇಕ್ ಹಾಕಿದೆ. ಮನೆಯಲ್ಲಿಯೇ ಕುಟುಂಬದೊಟ್ಟಿಗೆ ಆಚರಿಸುವಂತೆ ಹೇಳಿದೆ. ಅದನ್ನೇ ಗಮನದಲ್ಲಿಟ್ಟುಕೊಂಡು, ಸೂಕ್ತ ಮುನ್ನೆಚ್ಚರಿಕೆ ತೆಗೆದುಕೊಂಡು ಈ ಹಾಡನ್ನು ಚಿತ್ರೀಕರಿಸಲಿದ್ದು, ನಮ್ಮ ಹಾಡನ್ನು ಮನೆಯಲ್ಲಿಯೇ ಕೇಳಿ ಆನಂದಿಸುತ್ತ ಹೊಸ ವರ್ಷವನ್ನು ಬರಮಾಡಿಕೊಳ್ಳಿ ಎಂಬುದು ತಂಡದ ಉದ್ದೇಶ. ಹಾಗಾಗಿಯೇ ಈ ಹಾಡನ್ನು ಯುನೈಟ್ ಆಡಿಯೋಸ್ ನಲ್ಲಿ ಡಿ.26ರಂದು ಬಿಡುಗಡೆ ಮಾಡಲಿದೆ ತಂಡ.

ಚಂದನ್ ಶೆಟ್ಟಿ ಸಂಯೋಜಿಸಿ ಹಾಡಿರುವ ಪೊಗರು ಚಿತ್ರದ ಖರಾಬು ಹಾಡು ಕನ್ನಡದ ಜತೆಗೆ ತೆಲುಗಿನಲ್ಲಿಯೂ ಮೋಡಿ ಮಾಡುತ್ತಿದೆ. ಕನ್ನಡದಲ್ಲಿ 17ಕೋಟಿ ಬಾರಿ ವೀಕ್ಷಣೆಯಾದರೆ, ತೆಲುಗಿನಲ್ಲಿ 4.5 ಕೋಟಿ ವೀಕ್ಷಣೆ ಪಡೆದಿದೆ ಎಂಬುದು ಚಂದನ್ ಮಾತು. ಇದೀಗ ಪಾರ್ಟಿ ಫ್ರೀಕ್ ಮೂಲಕ ಆಗಮಿಸಲು ಅವರು ಸಜ್ಜಾಗುತ್ತಿದ್ದಾರೆ.