ನವರಸಗಳ ಅಭಿಮಾನಿಯನ್ನು ‘ಪದವಿಪೂರ್ವ’ಕ್ಕೆ ಸೇರಿಸಿದ ಜಗ್ಗೇಶ್

ಯೋಗರಾಜ್ ಭಟ್ ಗರಡಿಯಲ್ಲಿ ಪಳಗಿದ ಹರಿಪ್ರಸಾದ್ ಜಯಣ್ಣ ಅವರ ಚೊಚ್ಚಲ ನಿರ್ದೇಶನದಲ್ಲಿ “ಯೋಗರಾಜ್ ಸಿನಿಮಾಸ್” ಹಾಗು “ರವಿ ಶಾಮನೂರ್ ಫಿಲಂಸ್” ಜಂಟಿಯಾಗಿ ನಿರ್ಮಿಸುತ್ತಿರುವ “ಪದವಿಪೂರ್ವ” ಚಿತ್ರಕ್ಕೆ ಹಾಸನದ ಅರಕಲುಗೂಡಿನ ಪ್ರತಿಭೆ “ವಿಜೇಶ್” ಅಲಿಯಾಸ್ “ವೆಂಕಟೇಶ್ ಗಂಗಾಧರಪ್ಪ” ಪ್ರವೇಶ ಪಡೆದುಕೊಂಡಿದ್ದಾನೆ. ನವರಸನಾಯಕ ಜಗ್ಗೇಶ್ ಅಭಿನಯದ ಚಿತ್ರಗಳ ತುಣುಕುಗಳಿಗೆ ತನ್ನ ವಿಚಿತ್ರ ಮ್ಯಾನರಿಸಂ ಮೂಲಕ ಹೊಸ ಟಚ್ ನೀಡಿ ಜನರನ್ನು ನಕ್ಕು ನಗಿಸುತ್ತಿದ್ದ ಹುಡುಗನಿಗೆ ‘ಪದವಿಪೂರ್ವ’ ಚಿತ್ರ ಅದೃಷ್ಟ ಹೊತ್ತು ತಂದಿದೆ. ಸ್ವತಃ ಜಗ್ಗೇಶ್ ಅವರೇ ಈತನ ಅಭಿನಯ ಶೈಲಿಯನ್ನು ಮೆಚ್ಚಿ ‘ಪದವಿಪೂರ್ವ’ ಚಿತ್ರತಂಡಕ್ಕೆ ಪರಿಚಯಿಸುವ ಮೂಲಕ ಹೊಸ ಕಲಾವಿದನಿಗೆ ಆಸರೆಯಾಗಿದ್ದು, ಆಡಿಶನ್‌ನಲ್ಲಿ ಜಬರ್ದಸ್ತಾಗಿ ಪರ್ಫಾರ್ಮ್ ಮಾಡುವ ಮೂಲಕ ಚಿತ್ರದ ಪ್ರಮುಖ ಪಾತ್ರವೊಂದನ್ನು ಖಚಿತಪಡಿಸಿಕೊಳ್ಳುವಲ್ಲಿ ಯಶಸ್ವಿಯಾದನೆಂದು ಚಿತ್ರದ ನಿರ್ದೇಶಕ ಹರಿಪ್ರಸಾದ್ ಜಯಣ್ಣ ತಿಳಿಸಿದ್ದಾರೆ.

ಚಿತ್ರದ ನಾಯಕನಾಗಿ “ಪೃಥ್ವಿ ಶಾಮನೂರ್” ಅಭಿನಯಿಸುತ್ತಿದ್ದು, ನಾಯಕಿಯರಾಗಿ “ಅಂಜಲಿ ಅನೀಶ್” ಹಾಗು “ಯಶ ಶಿವಕುಮಾರ್” ಈಗಾಗಾಲೇ ಆಯ್ಕೆಯಾಗಿದ್ದಾರೆ. ಅರ್ಜುನ್ ಜನ್ಯ, ಸಂತೋಷ್ ರೈ ಪಾತಾಜೆರಂತ ಅತ್ಯುತ್ತಮ ತಂತ್ರಜ್ಞರನ್ನೂಳಗೊಂಡ ‘ಪದವಿಪೂರ್ವ’ ತಂಡಕ್ಕೆ, ಪಂಚತಂತ್ರ ಚಿತ್ರದ ರೇಸ್ ದೃಶ್ಯಗಳನ್ನು ಅಚ್ಚುಕಟ್’ ಆಗಿ ತೆರೆಯ ಮೇಲೆ ಮೂಡುವಂತೆ ಮಾಡಿದ್ದ ಸಂಕಲನಕಾರ “ಮಧು ತುಂಬಕೆರೆ” ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ.

ಚಿತ್ರದ ಪೂರ್ವತಯಾರಿ ಕಾರ್ಯ ಭರದಿಂದ ಸಾಗಿದ್ದು, ಪ್ರಮುಖ ಪಾತ್ರಧಾರಿಗಳಿಗೆ “ಆಕ್ಟಿಂಗ್ ವರ್ಕ್‌ಶಾಪ್” ನಡೆಸಲಾಗುತ್ತಿದೆ. ಶಿವಮೊಗ್ಗ, ಮಂಗಳೂರು ಹಾಗು ಬೆಂಗಳೂರಿನ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲು ಚಿತ್ರತಂಡ ಆಲೋಚಿಸುತ್ತಿದ್ದು, ನವೆಂಬರ್ ತಿಂಗಳಿನಲ್ಲಿ ಚಿತ್ರೀಕರಣ ಶುರು ಮಾಡಲು ಉತ್ಸುಕರಾಗಿದ್ದಾರೆ.