‘ಚಡ್ಡಿ‌ದೋಸ್ತ್ ಗಳಿಗಾಗಿ ನರ್ತಿಸಿದ ಹರ್ಷಿತಾ.

ರೆಡ್ ಅಂಡ್ ವೈಟ್ ಬ್ಯಾನರ್ ಅಡಿಯಲ್ಲಿ, ‘ಆಸ್ಕರ್’ ಕೃಷ್ಣ ನಾಯಕನಾಗಿ ನಟಿಸಿ, ನಿರ್ದೇಶಿಸಿರುವ ಚಿತ್ರ ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ. ಸದ್ಯದಲ್ಲೇ ಬಿಡುಗಡೆಗೆ ಸಿದ್ದವಾಗುತ್ತಿರುವ ಈ ಚಿತ್ರದ ಒಂದು ವಿಶೇಷ ಹಾಡಿನಲ್ಲಿ ಕನ್ನಡದ ಪ್ರತಿಭಾನ್ವಿತ ನಟಿ ಹರ್ಷಿತಾ ಕಲ್ಲಿಂಗಲ್ ಹೆಜ್ಜೆ ಹಾಕಿದ್ದಾರೆ.

‘ಮನುಷ್ಯನಾಗಿ ಹುಟ್ಟಿದ್ಮೇಲೆ ಏನ್ ಮಾಡ್ಬೇಕು’.. ಎನ್ನುವ ಹಾಡಿಗೆ, ಲಯಬದ್ಧವಾಗಿ ಕುಣಿದಿರುವ ಹರ್ಷಿತಾ ಕಲ್ಲಿಂಗಲ್ ಮೂಲತಃ ಬೆಂಗಳೂರಿನ ಹುಡುಗಿ. ಎಲ್ಲಕ್ಕಿಂತ ಹೆಚ್ಚಾಗಿ ಇವರು ಅಪ್ಪಟ ಕನ್ನಡತಿ ಎನ್ನುವುದು ವಿಶೇಷ. ಈಗಾಗಲೇ ಮಲೆಯಾಳಂ, ತೆಲುಗು, ತಮಿಳು ಹಾಗೂ ಇತರೇ ಭಾಷೆಯ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಹರ್ಷಿತಾ ಕಲ್ಲಿಂಗಲ್, ಈಗ ಕನ್ನಡದ ಚಿತ್ರವೊಂದರಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ.

ನಿರ್ದೇಶಕ ಆಸ್ಕರ್ ಕೃಷ್ಣ ಈ ಹಾಡಿಗಾಗಿ ನೃತ್ಯಗಾರ್ತಿಯ ಹುಡುಕಾಟದಲ್ಲಿದ್ದಾಗ ಇವರ ಕಣ್ಣಿಗೆ ಬಿದ್ದಿದ್ದು ಹರ್ಷಿತಾ ಕಲ್ಲಿಂಗಲ್. ಆಸ್ಕರ್ ಕೃಷ್ಣ, ತಮ್ಮ ಚಿತ್ರದಲ್ಲಿ ವಿಶೇಷ ಅವಕಾಶವನ್ನು ಕೊಟ್ಟು, ಅವರ ಪ್ರತಿಭೆಯನ್ನು ಬಳಸಿಕೊಂಡಿದ್ದಾರೆ.
ಇನ್ನು ಇತ್ತೀಚೆಗಷ್ಟೇ ಬಿಡುಗಡೆಯಾದ ಈ ಹಾಡು, ಅತಿ ಹಚ್ಚು ವೀಕ್ಷಣೆಯನ್ನು ಹೊಂದುತ್ತಾ, ದಿನದಿಂದ ದಿನಕ್ಕೆ ವೀಕ್ಷಕರ ಮೆಚ್ಚುಗೆಯನ್ನು ಪಡೆಯುತ್ತಿದೆ. ಚಿತ್ರದಲ್ಲಿ ಮೂರು ಹಾಡುಗಳಿದ್ದು, ಅನಂತ್ ಆರ್ಯನ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಎಲ್ಲವೂ ಅಂದುಕೊಂಡಂತಾದರೆ ಮಾರ್ಚ್ ಕೊನೆಯ ವಾರ ಈ ಚಿತ್ರವು ತೆರೆಗೆ ಬರಲಿದೆ.