ಅದ್ಧೂರಿ ಆಲ್ಬಂ ಹಾಡಿಗೆ ಸಿದ್ಧವಾಗುತ್ತಿದೆ ವೇದಿಕೆ.ನೋಡು ಶಿವ.. ಹಾಡಿಗೆ ಚಂದನ್ ಶೆಟ್ಟಿ ಸಂಗೀತ ಮತ್ತು ಗಾಯನ

ಮೋನಿಕಾ ಕಲ್ಲೂರಿ ಆರ್ಟ್ಸ್ ಪ್ರೊಡಕ್ಷನ್ ಬ್ಯಾನರ್ನಲ್ಲಿ ಇದೀಗ ಆಲ್ಬಂ ಸಾಂಗ್ವೊಂದು ಸಿದ್ಧವಾಗುತ್ತಿದೆ. ‘ನೋಡು ಶಿವ..’ ಶೀರ್ಷಿಕೆಯ ಈ ಹಾಡಿಗೆ ಚಂದನ್ ಶೆಟ್ಟಿ ಸಂಗೀತ ನೀಡಿ ಅವರೇ ಹಾಡನ್ನೂ ಹಾಡಿದ್ದಾರೆ. ಸುಮೀತ್ ಎಂ.ಕೆ ಈ ಹಾಡಿಗೆ ಸಾಹಿತ್ಯ ಬರೆದಿದ್ದು, ಪರಿಕಲ್ಪನೆ ಮತ್ತು ನಿರ್ದೇಶನ ಮಾಡುವುದರ ಜತೆಗೆ ಹಾಡಿನಲ್ಲಿಯೂ ಲೀಡ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ವಿಶೇಷ ಏನೆಂದರೆ, ಈ ಹಾಡಿನಲ್ಲಿ ಜೊತೆ ಜೊತೆಯಲಿ ಧಾರಾವಾಹಿ ಖ್ಯಾತಿಯ ಮೇಘಾ ಶೆಟ್ಟಿ ಗ್ಲಾಮರಸ್ ಆಗಿ ಹೆಜ್ಜೆ ಹಾಕಲಿದ್ದಾರೆ. ಸ್ಪೇಷಲ್ ಅಪೀಯರೆನ್ಸ್ ಆಗಿ ಚಂದನ್ ಶೆಟ್ಟಿ ಸಹ ಇರಲಿದ್ದಾರೆ.

ಎಎಂಸಿ ಸಿಟಿ ಗ್ರೂಪ್ ಆಫ್ ಇನ್ಸಿಟ್ಯೂಷನ್ ಸೇರಿ ಒಟ್ಟು 9 ವಿದ್ಯಾಸಂಸ್ಥೆಗಳನ್ನು ನಡೆಸುತ್ತಿರುವ ಮತ್ತು ಆ ಸಂಸ್ಥೆಗಳ ವೈಸ್ ಪ್ರೆಸೆಡೆಂಟ್ ಆಗಿರುವ ಮೋನಿಕಾ ಕಲ್ಲೂರಿ, ಈ ಆಲ್ಬಂ ಹಾಡಿನ ಮೂಲಕ ಸ್ಯಾಂಡಲ್ವುಡ್ಗೆ ಆಗಮಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈ ಹಾಡಿನ ಬಗ್ಗೆ ಮಾಹಿತಿ ನೀಡುವ ಮೋನಿಕಾ, ‘ನೋಡು ಶಿವ ಎಂದೇ ಹಾಡು ಶುರುವಾಗಲಿದೆ. ಎಷ್ಟೋ ಜನ ಜೀವನದಲ್ಲಿ ಅಂದುಕೊಂಡಿದ್ದು ಏನೂ ಆಗಿಲ್ಲವಲ್ಲ ಎಂದು ತಮ್ಮನ್ನೇ ತಾವೇ ಶಪಿಸಿಕೊಳ್ಳುತ್ತಿರುತ್ತಾರೆ. ಎಷ್ಟೇ ಶ್ರಮ ಪಟ್ಟರೂ ಅದು ಈಡೇರುವುದಿಲ್ಲ. ಅಂದುಕೊಂಡ ಯಶಸ್ಸು ಸಿಕ್ಕಿರುವುದಿಲ್ಲ. ಈ ಥರದ ಹುಡುಗ ದೇವರ ಹತ್ತಿರ ಹೇಗೆ ಸಂಭಾಷಣೆ ಮಾಡ್ತಾನೆ.. ತನ್ನ ಗೋಳನ್ನು ಹೇಗೆ ಹೇಳಿಕೊಳ್ಳುತ್ತಾನೆ ಎಂಬುದನ್ನು ಫನ್ನಿಯಾಗಿ ಹಾಡಿನಲ್ಲಿ ತೋರಿಸಲಿದ್ದೇವೆ’ ಎನ್ನುತ್ತಾರೆ.

ಈ ಹಾಡಿನ ನಿರ್ಮಾಣದ ಮುಖ್ಯ ಉದ್ದೇಶವನ್ನೂ ನಿರ್ಮಾಪಕಿ ಮೋನಿಕಾ ವಿವರಿಸಿದ್ದಾರೆ. ‘ಕನ್ನಡದಲ್ಲಿ ಇಲ್ಲಿಯವರೆಗೂ ಯಾರೂ ಮಾಡದ ಅದ್ಧೂರಿಯಾದ ಹಾಡನ್ನು ನಾವು ಚಿತ್ರೀಕರಿಸಲಿದ್ದೇವೆ. ಆಲ್ಬಂ ಹಾಡಿನ ವಿಚಾರದಲ್ಲಿ ಕನ್ನಡದಲ್ಲಿ ಈ ಹಿಂದೆಂದೂ ಆಗದ ಒಂದು ಹೊಸತನವನ್ನು ಈ ಹಾಡಿನಲ್ಲಿ ತೋರಿಸಲಿದ್ದೇವೆ. ಅದ್ಧೂರಿ ವೆಚ್ಚದಲ್ಲಿ ಸಿದ್ಧವಾಗಲಿರುವ ಈ ಹಾಡು, ಪರಭಾಷಿಕರಿಗೂ ವಿಶೇಷ ಎನಿಸಲಿದೆ. ಸರಿಸುಮಾರು 30ಲಕ್ಷ ಬಜೆಟ್ ನಲ್ಲಿ ಈ ಹಾಡು ಸಿದ್ದವಾಗಲಿದೆ.’ ಎಂಬುದು ಮೋನಿಕಾ ಮಾತು.

ಹಾಡಿನ ಸಾಹಿತ್ಯ ಕೇಳಿ ಇಷ್ಟಪಟ್ಟು ಕೇವಲ ಎರಡೇ ತಾಸಿನಲ್ಲಿ ಚಂದನ್ ಶೆಟ್ಟಿ ಕಂಪೋಸ್ ಮಾಡಿ, ಧ್ವನಿಯನ್ನೂ ನೀಡಿದ್ದಾರೆ. ಕಳೆದೊಂದು ತಿಂಗಳಿಂದ ಈ ಹಾಡಿನ ತಯಾರಿ ಕೆಲಸ ಶುರುವಾಗಿದ್ದು, 200 ಜನ ಈ ಹಾಡಿಗೆ ಕೆಲಸ ಮಾಡುತ್ತಿದ್ದಾರೆ. 60 ವೃತ್ತಿಪರ ಡಾನ್ಸರ್ಗಳು ಹೆಜ್ಜೆ ಹಾಕಲಿದ್ದಾರೆ. ಮೂರು ದಿನಗಳಲ್ಲಿ ಎಎಂಸಿ ಕಾಲೇಜು ಕ್ಯಾಂಪಸ್ನಲ್ಲಿಯೇ ಶೂಟಿಂಗ್ ಮುಗಿಸಿಕೊಳ್ಳುವ ಪ್ಲಾನ್ ತಂಡದ್ದಾಗಿದ್ದು, ಮೋಹನ್ ಮಾಸ್ಟರ್ ನೃತ್ಯ ನಿರ್ದೇಶನ ಮಾಡಲಿದ್ದಾರೆ.
ಇನ್ನು ವಿದೇಶದಲ್ಲಿ ಪದವಿ ಮತ್ತು ಸ್ನಾತಕೋತ್ತರ ವಿದ್ಯಾಭ್ಯಾಸ ಮಾಡಿರುವ ಮೋನಿಕಾ, ಮೊದಲಿಂದಲೂ ಕಲೆಯತ್ತ ಆಸಕ್ತಿ. ಜಾಗೃತಿ ಮೂಡಿಸುವ ಕೆಲಸವನ್ನು ಏಕಕಾಲದಲ್ಲಿ ದೊಡ್ಡ ಸಮುದಾಯಕ್ಕೆ ತೋರಿಸುವ ಆಕ್ತಿ ಸಿನಿಮಾ ಕ್ಷೇತ್ರಕ್ಕಿದೆ. ಆ ಒಂದು ಕಾರಣಕ್ಕೆ ಸಿನಿಮಾ ಕ್ಷೇತ್ರವನ್ನು ಆಯ್ದುಕೊಂಡಿದ್ದು, ಮುಂದಿನ ವರ್ಷ ಹೊಸ ಸಿನಿಮಾ ನಿರ್ಮಾಣ ಮಾಡುವ ಬಗ್ಗೆಯೂ ಹೇಳಿಕೊಳ್ಳುತ್ತಾರೆ. ಅಂದಹಾಗೆ,ಡಿಸೆಂಬರ್ ವೇಳೆಗೆ ಆನಂದ್ ಆಡಿಯೋದಲ್ಲಿ ಈ ಹಾಡು ಬಿತ್ತರವಾಗಲಿದೆ.