ಸಂಗೀತ ನಿರ್ದೇಶಕ ರಾಜನ್​ ವಿಧಿವಶ, ಅವರ ಆತ್ಮಕೆ ಶಾಂತಿ ಸಿಗಲಿ.

ಕನ್ನಡ ಚಿತ್ರರಂಗದ ಮತ್ತೊಂದು ಸಂಗೀತ ರತ್ನ ತೆರೆಮರೆಗೆ ಸರಿದಿದೆ. ಕನ್ನಡ ಚಿತ್ರ ರಸಿಕರು ಎಂದೆಂದಿಗೂ ಮರೆಯದಂಥ ಹಾಡುಗಳನ್ನು ನೀಡಿದ ಹೆಗ್ಗಳಿಕೆ ಹಿರಿಯ ಸಂಗೀತ ನಿರ್ದೇಶಕ ರಾಜನ್ ಅವರದ್ದು, ಮಾಧುರ್ಯಕ್ಕೆ ಸುಶ್ರಾವ್ಯತೆಗೆ ಮತ್ತೊಂದು ಹೆಸರಾಗಿದ್ದ ರಾಜನ್-ನಾಗೇಂದ್ರ ಜೋಡಿ, 6,000ಕ್ಕೂ ಹೆಚ್ಚು ಗೀತೆಗಳನ್ನು ನೀಡಿ ಚಿತ್ರರಸಿಕರ ಹೃದಯದಲ್ಲಿ
ಶಾಶ್ವತವಾಗಿ ನೆಲೆಯೂರಿದ್ದಾರೆ. ತಮ್ಮ ಸಹೋದರ ನಾಗೇಂದ್ರ ಅವರ ಜೊತೆಗೂಡಿ, 1950ರ ದಶಕದಿಂದ ಸತತ 5 ದಶಕಗಳ ಕಾಲ ಚಿತ್ರರಂಗದ ಸೇವೆಯನ್ನು ಮಾಡಿರುವ ಅವರು, ಕನ್ನಡ ಮಾತ್ರವಲ್ಲದೆ, ತೆಲುಗು, ಮಲಯಾಳಂ, ತುಳು, ಹಿಂದಿ ಹಾಗೂ ಸಿಂಹಳ ಭಾಷೆಗಳಲ್ಲಿ ಸುಮಾರು 375ಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ನೀಡಿದ್ದರು.2000ರಲ್ಲಿ ನಾಗೇಂದ್ರ ಅವರು ನಿಧನ ಹೊಂದಿದರು. 1952ರಲ್ಲಿ ಬಿಡುಗಡೆಯಾದ ಸೌಭಾಗ್ಯ ಲಕ್ಷ್ಮಿ ಚಿತ್ರದ ಮೂಲಕ ಸ್ವತಂತ್ರ್ಯ ಸಂಗೀತ ನಿರ್ದೇಶಕರಾಗಿ ಪರಿಚಿತಗೊಂಡ ಈ ಜೋಡಿ, ಆನಂತರ ಐದು ದಶಕಗಳ ಕಾಲ ಚಿತ್ರರಂಗದಲ್ಲಿ ಚಾಲ್ತಿಯಲ್ಲಿತ್ತು. ಡಾ.ರಾಜ್‌
ಕುಮಾರ್ ಮಾತ್ರವಲ್ಲದೆ, ವಿಷ್ಣುವರ್ಧನ್, ಅನಂತ್ ನಾಗ್, ಶಂಕರ್‌ನಾಗ್, ಪ್ರಭಾಕರ್‌ರಿಂದ ಹಿಡಿದು ಶಿವರಾಜ್‌ಕುಮಾರ್‌ ಪೀಳಿಗೆಯ ನಟರ ಚಿತ್ರಗಳಿಗೆ ಈ ಜೋಡಿ ಸಂಗೀತ ನೀಡಿತ್ತು. ಪ್ರಯೋಗಶೀಲತೆ ಬಯಲು ದಾರಿ ಸಿನಿಮಾದಲ್ಲಿರುವ ಅಷ್ಟೂ ಹಾಡುಗಳನ್ನು ಒಂದೇ ರಾಗದಲ್ಲಿ ಸಿದ್ಧಪಡಿಸಿದ್ದು ಸಾಮಾನ್ಯವಾಗಿ ಸುಪ್ರಭಾತದ ಹಾಡುಗಳಿಗೆ ಬಳಸುವ ‘ಚಕ್ರವಾಕ’ ರಾಗವನ್ನು ಶ್ರೀನಿವಾಸ ಕಲ್ಯಾಣ ಚಿತ್ರದ ಪವಡಿಸು ಪರಮಾತ್ಮ ಎಂಬ ಶಯನದ ಹಾಡಿಗೆ ಬಳಸಿದ್ದು ಅವರ ಪ್ರಯೋಗಗಳಲ್ಲಿ ಕೆಲವು ಮಾತ್ರ. ರಾಜನ್ ಅಂದ್ರೆ ಎಸ್ಪಿಬಿಗೆ ಅತ್ಯಂತ ಭಕ್ತಿ!: ರಾಜನ್ ಅವರೆಂದರೆ ಎಸ್ಪಿಬಿ ಪ್ರೀತಿ, ಆತ್ಮೀಯತೆ, 
ಎಸ್‌ಪಿಬಿ ಯವರಿಗೆ ಪ್ರಶಸ್ತಿ ತಂದ ಹಲವಾರು ಹಾಡುಗಳಲ್ಲಿ ಹೆಚ್ಚಿನ ಹಾಡುಗಳು ರಾಜನ್-ನಾಗೇಂದ್ರ ಅವರ
ಹಾಡುಗಳೇ ಎಂದು ಖುದ್ದು ಎಸ್‌ಪಿಬಿಯವರೇ ಅನೇಕ ಬಾರಿ ಹೇಳಿಕೊಂಡಿದ್ದರು. 

ಪ್ರಸಿದ್ದ ಚಿತ್ರಗಳು:

ನಾ ನಿನ್ನ ಮರೆಯಲಾರೆ, ಎರಡುಕನಸು, ಹೊಂಬಿಸಿಲು, ಬೆಂಕಿಯ ಬಲೆ, ಚಂದನದಗೊಂಬೆ, ಗಂಧದಗುಡಿ, ಬಯಲುದಾರಿ,ಗಿರಿ ಕನ್ಯ.

ಆಯ್ದ ಪ್ರಸಿದ್ದ ಚಿತ್ರಗೀತೆಗಳು:

ಆಕಾಶ ದೀಪವು ನೀನು (ಪಾವನ ಗಂಗಾ), ಬಾನಲ್ಲೂ ನೀನೆ ಭುವಿಯಲ್ಲೂ ನೀನೆ(ಬಯಲು ದಾರಿ), ಬಿಸಿಲಾದರೇನು
ಮಳೆಯಾದರೇನು (ಬೆಂಕಿಯ ಬಲೆ), ಎಲ್ಲೆಲ್ಲಿನೋಡಲಿ ನಿನ್ನನ್ನೇ ಕಾಣುವೆ (ನಾ ನಿನ್ನಮರೆಯಲಾರೆ), ಎಂದೆಂದು ನಿನ್ನನು ಮರೆತು(ಎರಡು ಕನಸು), ಮಾಮರವೆಲ್ಲೋ ಕೋಗಿಲೆಯಲ್ಲೇ (ದೇವರ ಗುಡಿ), ನಲಿವ ಗುಲಾಬಿ ಹೂವೇ (ಅಟೋ ರಾಜಾ), ನಾವಾಡುವ ನುಡಿಯೇ ಕನ್ನಡ ನುಡಿ(ಗಂಧದ ಗುಡಿ), ನೀರ ಬಿಟ್ಟು ನೆಲದ ಮೇಲೆ (ಹೊಂಬಿಸಿಲು), ನೋಟದಾಗೆ ನಗೆಯ ಬೀರಿ (ಪರಸಂಗದ ಗೆಂಡೆತಿಮ್ಮ), ಒಮ್ಮೆ ನಿನ್ನನ್ನು ಕಣ್ಣು ತುಂಬಿ ನೋಡುವಾಸೆ (ಗಾಳಿಮಾತು).

ರಾಜನ್ ಅವರ ಆತ್ಮಕ್ಕೆ ಶಾಂತಿಸಿಗಲಿ ಎಂದು ಪ್ರಾರ್ಥಿಸುವ ಮೂಲಕ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸೋಣ.