ಕಡಲ‌‌ ದಡದಲ್ಲಿ “ಫಾರ್ REGN” (For Registration ) ಹಾಡು.

ನಿಶ್ಚಲ್ ಫಿಲಂಸ್ ಬ್ಯಾನರ್ ಅಡಿಯಲ್ಲಿ ಮೂಡಿಬರುತ್ತಿರುವ “ಫಾರ್ REGN” (For Registration ) ಚಿತ್ರದ ಹಾಡಿನ ಚಿತ್ರೀಕರಣ ಮಂಗಳೂರು,ಉಡುಪಿ‌ ಬಳಿಯ ಕಡಲ ದಡದಲ್ಲಿ ನಡೆದಿದೆ.‌ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದ್ದು, ದ್ವಿತೀಯ ಹಂತದ ಚಿತ್ರೀಕರಣ ಮಾರ್ಚ್ ಅಂತ್ಯದ ವೇಳೆಗೆ ಆರಂಭವಾಗಲಿದೆ.

ಚಿತ್ರೀಕರಣದ ಕೆಲವು ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿಟ್ಟಿದ್ದು, ಭಾರಿ ಸದ್ದು ಮಾಡುತ್ತಿದೆ.
ಸ್ಯಾಂಡಲ್ ವುಡ್ ನಲ್ಲಿ ನಿಧಿಮಾ ಎಂದೇ ಖ್ಯಾತರಾಗಿರುವ ಮಿಲನಾ ನಾಗರಾಜ್ ಹಾಗೂ ದಿಯಾ ಖ್ಯಾತಿಯ ಪೃಥ್ವಿ ಅಂಬರ್ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದು, ಸುಧಾರಾಣಿ, ಸುಂದರರಾಜ್, ಸಿಹಿಕಹಿ ಚಂದ್ರು, ಸುಧಾ ಬೆಳವಾಡಿ, ಬಾಬು ಹಿರಣಯ್ಯ, ತಬಲಾ ನಾಣಿ, ತ್ರಿವೇಣಿ ರಾವ್ , ತುಳು ನಟ ಅರವಿಂದ್ ಬೋಳಾರ್ ಹೀಗೆ ಹಿರಿಯ ಕಲಾವಿದರ ಬಳಗವೇ ಈ ಚಿತ್ರದಲ್ಲಿದೆ.

ನವೀನ್ ದ್ವಾರಕನಾಥ ನಿರ್ದೇಶಿಸುತ್ತಿದ್ದು, ಚಿತ್ರಕ್ಕೆ ನವೀನ್ ರಾವ್ ಬಂಡವಾಳ ಹೂಡಿದ್ದಾರೆ. ವಿವೇಕ್ ಎಸ್ ಕೆ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ನಾಗಾರ್ಜುನ ಶರ್ಮ‌ ಅವರು ಬರೆದಿರುವ ಹಾಡುಗಳಿಗೆ ಹರೀಶ್ ಆರ್ ಕೆ ಸಂಗೀತ ನೀಡಿದ್ದಾರೆ. ಧರಣಿ ಕಲಾ ನಿರ್ದೇಶನ ಮಾಡಿದ್ದಾರೆ. ಇದು ಈ ತಂಡದ ಮೊದಲ ಪ್ರಯತ್ನವಾಗಿದ್ದರೂ, ಪಕ್ಕಾ ಪ್ರಾಮಿಸಿಂಗ್ ಚಿತ್ರ ಎನ್ನುವುದು ಚಿತ್ರತಂಡದ ಅನಿಸಿಕೆ.