ಜಾಹೀರಾತು ವಿನ್ಯಾಸಕ ಈಗ “ಮಾರಿಗುಡ್ಡದ ಗಡ್ಡಧಾರಿ”

ಕನ್ನಡ ಕಿರುತೆರೆ ಹಾಗೂ ಚಿತ್ರರಂಗದಲ್ಲಿ ಸುಮಾರು ಹನ್ನೆರಡು ವರ್ಷಗಳ ಕಾಲ ಕೆಲಸ ಮಾಡಿರುವ ಜಾಹೀರಾತು ವಿನ್ಯಾಸಕ ರಾಜೀವ್ ಅವರು ಈಗ ಚಿತ್ರ ನಿರ್ದೇಶಕನಾಗುವ ಮೂಲಕ ಹೊಸ ಹೆಜ್ಜೆ ಇಡುತ್ತಿದ್ದಾರೆ. 2008ರಲ್ಲಿ ತಾನೊಬ್ಬ ನಿರ್ದೇಶಕನಾಗಬೇಕು ಎಂಬ ಹಂಬಲದೊಂದಿಗೆ ಗಾಂಧಿನಗರಕ್ಕೆ ಕಾಲಿಟ್ಟ ರಾಜೀವ್ ಚಂದ್ರಕಾಂತ್ ನಾಯ್ಕರ್ರವರು ಕಾದಂಬರಿ ಎಂಬ ಧಾರಾವಾಹಿಯ ಮೂಲಕ ಸಹ ನಿರ್ದೇಶಕನಾಗಿ ಕೆಲಸ ಪ್ರಾರಂಭಿಸಿದರು.

ಆ ನಂತರ ಕಲ್ಯಾಣಿ ಗಾಳಿಪಟ ಸೇರಿದಂತೆ ಇನ್ನೂ ಒಂದಷ್ಟು ಧಾರಾವಾಹಿಗಳಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡುತ್ತಲೇ ನಿರ್ದೇಶನದ ಪಾಠ ಕಲಿತರು. ನಾನು ಏನೇ ಸಾಧನೆ ಮಾಡಿದರೂ ಅದು ಇಲ್ಲೇ ಎಂದು ನಿರ್ಧರಿಸಿ ಗಾಂಧಿನಗರದಲ್ಲಿ ಸಿನಿಮಾ ಜಾಹೀರಾತು ವಿನ್ಯಾಸಕನಾಗಿ ಹೊಸ ವೃತ್ತಿ ಆರಂಭಿಸಿದರು. ಬಹು ಬೇಗನೆ ಉತ್ತಮ ಕ್ರಿಯೆಟಿವ್ ಡಿಸೈನರ್ ಎಂದು ಗುರುತಿಸಿಕೊಂಡರು. ಕಳೆದ ನಾಲ್ಕು ವರ್ಷಗಳಿಂದ ಉತ್ತಮ ಡಿಸೈನರ್ ಎಂದೇ ಕರೆಸಿಕೊಂಡಿರುವ ರಾಜೀವ್ ಸುಮಾರು ಎಪ್ಪತ್ತೈದು ರಿಂದ ಎಂಬತ್ತು ಚಿತ್ರಗಳಿಗೆ ಕೆಲಸ ಮಾಡಿದ್ದಾರೆ. ಈಗ ಕೆಲ ಆತ್ಮೀಯ ಸ್ನೇಹಿತರ ಜೊತೆಗೂಡಿ ತನ್ನ ನಿರ್ದೇಶನದ ಮೊದಲ ಸಿನಿಮಾವನ್ನು ಆರಂಭಿಸುತ್ತಿದ್ದಾರೆ.


ಈ ಹಿಂದೆ “ಅಯ್ಯೋರಾಮ” ಎಂಬ ಚಿತ್ರವನ್ನು ನಿರ್ಮಿಸಿದ್ದ ನಿರ್ಮಾಪಕ ತ್ರಿವಿಕ್ರಮ್ ರಘು ಅವರು ರಾಜೀವ್ ಅವರಿಗೆ ಸಾಥ್ ಕೊಡಲು ಮುಂದೆ ಬಂದಿದ್ದಾರೆ. ಇವರ ಜೊತೆ ಪ್ರಸನ್ನ ಪಾಟೀಲ್ ಹಾಗೂ ಅಶೋಕ್ ಇಳಂತಿಲ ಕೂಡ ಬಂಡವಾಳ ಹಾಕುತ್ತಿದ್ದಾರೆ. ಒಂದು ಸಸ್ಪೆನ್ಸ್ ಥ್ರಿಲ್ಲರ್ ಕಥಾ ಹಂದರ ಹೊಂದಿರುವ ಈ ಚಿತ್ರದ ಹೆಸರು “ಮಾರಿಗುಡ್ಡದ ಗಡ್ಡಧಾರಿಗಳು” ಒನ್ ಶ್ರೀ ಕೃಪೆ ಬ್ಯಾನರ್ ಅಡಿಯಲ್ಲಿ ಈ ಮೂವರು ಸ್ನೇಹಿತರು ಸೇರಿ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

ಉತ್ತರ ಕರ್ನಾಟಕದಲ್ಲಿ ಮಾರಿ ಗುಡ್ಡದ ಗಡ್ಡಧಾರಿಗಳು ಚಿತ್ರದ ಬಹುತೇಕ ಭಾಗದ ಚಿತ್ರೀಕರಣ ನಡೆಯಲಿದ್ದು. ಸೆಪ್ಟೆಂಬರ್ ಎರಡು ರಂದು ಚಿತ್ರತಂಡ ಶೀರ್ಷಿಕೆ ಅನಾವರಣ ಮಾಡಲಿದೆ. ದಿಲಿಪ್ ಎಂ ರಾಜ್ ಯುವ ಪ್ರತಿಭೆ ಈ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಳ್ಳಲಿದ್ದು, ಇನ್ನುಳಿದ ತಾರಾಗಣದ ಆಯ್ಕೆ ಪ್ರಕ್ರಿಯೆ ಇನ್ನೂ ನಡೆಯಬೇಕಿದೆ. ಅಲ್ಲದೆ ಈ ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿವೆ. ಈಗಾಗಲೇ ಚಿತ್ರದ ಕಥೆ ಚಿತ್ರಕಥೆ ಹಾಗೂ ಸಂಭಾಷಣೆಗಳನ್ನು ರೆಡಿ ಮಾಡಿಕೊಂಡಿರುವ ನಿರ್ದೇಶಕ ರಾಜೀವ್ ಅವರು ಡಿಸೆಂಬರ್ ನಲ್ಲಿ ಚಿತ್ರೀಕರಣ ಆರಂಭಿಸಬೇಕೆನ್ನುವ ಯೋಚನೆಯಲ್ಲಿದ್ದಾರೆ.