‘ಲಾಕ್ಡೌನ್ ಇದ್ದರೂ ಪಾರ್ಟಿ’ ಯಾವ್ಯಾವ ಸೆಲೆಬ್ರಿಟಿಗಳು ಪಾರ್ಟಿಗಳಲ್ಲಿದ್ದರು

ಕೊರೊನಾ ಸೋಂಕು ಹಿನ್ನೆಲೆಯಲ್ಲಿ ದೇಶಾದ್ಯಂತ ಕಠಿಣ ಲಾಕ್‌ಡೌನ್ ಜಾರಿಯಲ್ಲಿದ್ದರೂ ಬೆಂಗಳೂರು ಸೇರಿದಂತೆ ವಿವಿಧ ಕಡೆ ಐಷಾರಾಮಿ ಪಾರ್ಟಿಗಳು ನಡೆದಿದ್ದು ಅವುಗಳಲ್ಲಿ ಡ್ರಗ್ಸ್ ಪೂರೈಕೆಯಾಗಿತ್ತು! ಇಂತಹದ್ದೊಂದು ಮಾಹಿತಿಯನ್ನು ‘ಡ್ರಗ್ಸ್ ದಂಧೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು ಬಯಲು ಮಾಡಿದ್ದಾರೆ. ನಗರದಲ್ಲಿ ಡ್ರಗ್ಸ್ ದಂಧೆ ಹಾಗೂ ಸ್ಯಾಂಡಲ್ ವುಡ್ ನಟಿಯರು ಭಾಗಿಯಾಗಿದ್ದಾರೆ ಎಂಬ ಆರೋಪದ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು, ನಟಿ ರಾಗಿಣಿ ಸೇರಿದಂತೆ 12 ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಈ ಎಫ್ಐಆರ್‌ ನಲ್ಲಿ 12 ಮಂದಿ ಆರೋಪಿತರು ಏ. 11 ರಿಂದ ಸೆ.4 ರವರೆಗೆ ನಗರದ ವಿವಿಧ ಸ್ಥಳಗಳಲ್ಲಿ ಪಾರ್ಟಿ ಆಯೋಜನೆ ಮಾಡಿ ಬಂದವರಿಗೆ ಡ್ರಗ್ಸ್ ಸರಬರಾಜು ಮಾಡಿ ಅಕ್ರಮವಾಗಿ ಹಣ ಗಳಿಸಿದ್ದಾರೆ ಎಂದು ನಮೂದಿಸಿದ್ದಾರೆ. ಇದರಿಂದ ಮಾ. 25ರಿಂದ ಕಠಿಣ ಲಾಕ್ಡೌನ್ ಇದ್ದರೂ ಪೊಲೀಸರ ಕಣ್ಣಪ್ಪಿಸಿ ಆರೋಪಿಗಳು ಪಾರ್ಟಿಗಳನ್ನು ಆಯೋಜಿಸಿದ್ದರು ಎಂಬ ಅಂಶ ಬಯಲಾಗಿದೆ. ಲಾಕ್‌ಡೌನ್ ಇದ್ದಾಗ್ಯೂ, ಪಾರ್ಟಿಗಳು ನಡೆದ ಸ್ಥಳ ವ್ಯಾಪ್ತಿಯ ಪೊಲೀಸರಿಗೆ ಈ ಬಗ್ಗೆ ಮಾಹಿತಿ ಇರಲಿಲ್ಲವೇ? ಅಥವಾ ಪೊಲೀಸರ ವೈಫಲ್ಯವೇ ಎಂಬ ಪ್ರಶ್ನೆಗಳೂ ಹುಟ್ಟಿಕೊಂಡಿವೆ. ಮತ್ತೊಂದೆಡೆ ‘ಲಾಕ್‌ಡೌನ್ ಅವಧಿಯಲ್ಲಿ ಪಾರ್ಟಿಗಳು ನಡೆದ ಸ್ಥಳಗಳು ಹಾಗೂ ಯಾವ್ಯಾವ ಸೆಲೆಬ್ರಿಟಿಗಳು ಪಾರ್ಟಿಗಳಲ್ಲಿದ್ದರು ಎಂಬ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.