ಲೈಗರ್ ಅವತಾರದಲ್ಲಿ ವಿಜಯ್ ದೇವರಕೊಂಡ.ಕನ್ನಡದಲ್ಲಿಯೂ ಬರಲಿದೆ ಬಹುಭಾಷಾ ಸಿನಿಮಾ

ಪುರಿ ಜಗನ್ನಾಥ್ ನಿರ್ದೇಶನ, ನಿರ್ಮಾಣದಲ್ಲಿ ಕರಣ್ ಜೋಹರ್, ಚಾರ್ಮಿ, ಅಪೂರ್ವ ಸಾಥ್

ಟಾಲಿವುಡ್ ನಟ ವಿಜಯ್ ದೇವರಕೊಂಡ ಹುಲಿ ಸಿಂಹದ ಎರಡೂ ಅವತಾರವನ್ನು ಎತ್ತಿದ್ದಾರೆ. ಅಂದರೆ, ಪುರಿ ಜಗನ್ನಾಥ್, ಕರಣ್ ಜೋಹರ್, ಚಾರ್ಮಿ ಕೌರ್, ಅಪೂರ್ವ ಮೆಹ್ತಾ ಜಂಟಿಯಾಗಿ ನಿರ್ಮಾಣ ಮಾಡುತ್ತಿರುವ ಚಿತ್ರಕ್ಕೆ ಲೈಗರ್ ಎಂದು ಶೀರ್ಷಿಕೆ ಇಡಲಾಗಿದ್ದು, ಅದರ ಫಸ್ಟ್ ಲುಕ್ ಬಿಡುಗಡೆ ಆಗಿದೆ. ಪ್ಯಾನ್ ಇಂಡಿಯಾ ಪರಿಕಲ್ಪನೆಯ ಈ ಸಿನಿಮಾ ಹಲವು ಭಾಷೆಗಳಲ್ಲಿ ಬಿಡುಗಡೆ ಮಾಡಲು ನಿರ್ಮಾಪಕರು ಯೋಜನೆ ಸಿದ್ಧಪಡಿಸಿದ್ದಾರೆ. ಈಗಾಗಲೇ ನಟ ವಿಜಯ್ ದೇವರಕೊಂಡ ಟಾಲಿವುಡ್ ಸೇರಿ ಬೇರೆ ಬೇರೆ ಇಂಡಸ್ಟ್ರಿಗಳಲ್ಲಿ ತಮ್ಮ ನೆಲೆ ಕಂಡುಕೊಂಡಿದ್ದಾರೆ. ಬೇಡಿಕೆಯ ನಟ ಎನಿಸಿಕೊಂಡಿದ್ದಾರೆ. ಇದೀಗ ಇವರ ಜತೆಗೆ ಇಸ್ಮಾರ್ಟ್ ಶಂಕರ್ ಸಿನಿಮಾ ಯಶಸ್ಸಿನ ಗುಂಗಲ್ಲಿರುವ ಪುರಿ ಜಗನ್ನಾಥ್ ಕೈ ಜೋಡಿಸಿದ್ದು, ಚಿತ್ರದ ಮೊದಲ ಲುಕ್ ಹೊರಬಿದ್ದಿದೆ.

ಆ್ಯಕ್ಷನ್ ಪ್ಯಾಕ್ ಸಿನಿಮಾ ಇದಾಗಿರಲಿದ್ದು, ವಿಜಯ್ ದೇವರಕೊಂಡ ಹಿಂದೆಂದೂ ಕಾಣಿಸದ ರೀತಿಯಲ್ಲಿ ಬಾಕ್ಸಿಂಗ್ ಕೋರ್ಟ್ನಲ್ಲಿ ಬಾಕ್ಸರ್ ಆಗಿ ಕಾಣಿಸಿಕೊಂಡಿದ್ದಾರೆ. ಲೈಗರ್ ಚಿತ್ರಕ್ಕೆ ಸಾಲಾ ಕ್ರಾಸ್ ಬ್ರೀಡ್ ಎಂಬ ಟ್ಯಾಗ್ಲೈನ್ ಸಹ ವಿಶೇಷ ಎನಿಸುವಂತಿದೆ. ಲೈಗರ್ ಶೀರ್ಷಿಕೆ ವಿಸ್ತ್ರತ ರೂಪ ಏನೆಂದರೆ, ಲೈಯನ್ ಮತ್ತು ಟೈಗರ್ ಎರಡರ ಕ್ರಾಸ್ ಬ್ರೀಡ್ ಎಂದರ್ಥ.
ಹಿಂದಿ, ತೆಲುಗು, ತಮಿಳು, ಕನ್ನಡ ,ಮತ್ತು ಮಲಯಾಳಂನಲ್ಲಿ ಈ ಸಿನಿಮಾ ರಿಲೀಸ್ ಆಗಲಿದ್ದು, ರಮ್ಯಾ ಕೃಷ್ಣನ್ ಪ್ರಮುಖ ಪಾತ್ರವೊಂದನ್ನು ನಿಭಾಯಿಸದ್ದಾರೆ. ಇನ್ನುಳಿದಂತೆ ರೋನಿತ್ ರಾಯ್, ವಿಶು ರೆಡ್ಡಿ, ಆಲಿ, ಮಕರಂದ್ ದೇಶಪಾಂಡೆ, ಗೆಟಪ್ ಶ್ರೀನು ನಟಿಸಿದ್ದಾರೆ. ಒಂದಷ್ಟು ಭಾಗದ ಶೂಟಿಂಗ್ ಕೆಲಸವೂ ಮುಕ್ತಾಯವಾಗಿದ್ದು, ಈ ಬಹುನಿರೀಕ್ಷಿತ ಸಿನಿಮಾಕ್ಕೆ ವಿಷ್ಣು ಶರ್ಮಾ ಛಾಯಾಗ್ರಹಣ ಮಾಡಿದ್ದಾರೆ. ಜಾನಿ ಶೇಖ್ ಬಾಷಾ ಕಲಾ ನಿರ್ದೇಶನ ಇರುವ ಈ ಚಿತ್ರಕ್ಕೆ ಜುನೈದ್ ಸಿದ್ಧಿಕಿ ಸಂಕಲನ ಮಾಡುತ್ತಿದ್ದಾರೆ. ಪುರಿ ಜಗನ್ನಾಥ್, ಚಾರ್ಮಿ ಕೌರ್, ಕರಣ್ ಜೋಹರ್, ಅಪೂರ್ವ ಮೆಹ್ತಾ ಜಂಟಿಯಾಗಿ ಈ ಸಿನಿಮಾಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಸದ್ಯ ಫಸ್ಟ್ ಲುಕ್ ಮೂಲಕ ಆಗಮಿಸಿರುವ ತಂಡ, ಶೀಘ್ರದಲ್ಲಿ ಇನ್ನುಳಿದ ಮಾಹಿತಿಯನ್ನು ಹಂಚಿಕೊಳ್ಳಲಿದೆ.