ಲಂಕೇಶ್ ಆಡಿಯೋಬುಕ್ಸ್-ಲಂಕೇಶ್ ಆ್ಯಪ್ ಬಿಡುಗಡೆ

 ಪತ್ರಕರ್ತ ಹಾಗೂ ನಿರ್ದೇಶಕರೂ ಆದ ಇಂದ್ರಜಿತ್ ಲಂಕೇಶ್ ತಮ್ಮ ತಂದೆ ಲಂಕೇಶ್ ಅವರ ಕೃತಿಗಳು ಓದುಗರೆಲ್ಲರಿಗೂ ಸುಲಭವಾಗಿ ಸಿಗಲೆಂದು ಅವುಗಳನ್ನೆಲ್ಲ ಡಿಜಿಟಲ್ ರೂಪಕ್ಕೆ ತಂದಿದ್ದಾರೆ. ಅಂದರೆ ಲಂಕೇಶ್ ಅವರ ಪುಸ್ತಕಗಳನ್ನು ಇನ್ನುಮುಂದೆ ಮೊಬೈಲ್ ಅಥವಾ ಲ್ಯಾಪ್‍ಟ್ಯಾಪ್‍ಗಳ ಮೂಲಕವೂ ಓದಬಹುದಾಗಿದ್ದು, ಈ ಲಂಕೇಶ್ ಆಡಿಯೋಬುಕ್ಸ್ ಹಾಗೂ ಲಂಕೇಶ್ ಆ್ಯಪ್‍ನ ಬಿಡುಗಡೆ ಕಾರ್ಯಕ್ರಮ ಗಾಂಧಿಭವನದಲ್ಲಿ ನಡೆಯಿತು.

ಇದರ ಜೊತೆಗೆ ಲಂಕೇಶ್ ಪತ್ರಿಕೆಯ 41ನೇ ವರ್ಷದ ವಿಶೇಷ ಸಂಚಿಕೆ ಸಹ ಬಿಡುಗಡೆಯಾಯಿತು. ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿ ಹಾಗೂ ಸಿದ್ದರಾಮೇಶ್ವರ ಮಹಾಸಂಸ್ಥಾನದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ಹಾಗೂ ನಟ ಶಿವರಾಜ್‍ಕುಮಾರ್ ಅಧ್ಯಕ್ಷತೆಯಲ್ಲಿ ಈ ಸಮಾರಂಭ ನಡೆಯಿತು. ಇನ್ನು ಡಾ.ಚಂದ್ರಶೇಖರ್ ಕಂಬಾರರು ಅನಾರೋಗ್ಯದ ಕಾರಣ ಹಾಜರಾಗದೆ, ವೀಡಿಯೋ ಮೂಲಕ ಮಾತನಾಡುತ್ತ ಲಂಕೇಶ್ ಜೊತೆಗಿನ ಸಂಬಂದವನ್ನು ಮೆಲುಕು ಹಾಕಿದರು.

ನಟ ಶಿವರಾಜ್‍ಕುಮಾರ ಮಾತನಾಡಿ ಇಂಥ ಹಿರಿಯರ ಬಗ್ಗೆ ನಾನೇನು ಅಷ್ಟಾಗಿ ತಿಳಿದುಕೊಂಡವನಲ್ಲ, ಚಿತ್ರರಂಗದಲ್ಲಿ ಯಾವಾಗ್ಲೂ ನಾನೊಬ್ಬ ಸ್ಟೂಡೆಂಟ್ ಆಗಿಯೇ ಇರಬಯಸುತ್ತೇನೆ. ಇಂದ್ರಜಿತ್ ಲಂಕೇಶ್ ಅವರು ನನ್ನ ಜೊತೆ ಬರೀ ಒಬ್ಬ ಪತ್ರಕರ್ತರಾಗಲ್ಲದೆ, ಕುಟುಂಬದ ಸದಸ್ಯರಂತೆಯೇ ಮಾತಾಡುತ್ತಾರೆ. ನಾನು ಹುಟ್ಟಿದ್ದು, ಬೆಳೆದದ್ದು ಎಲ್ಲಾ ಚೆನ್ನೈನಲ್ಲಿ, ಇಲ್ಲಿಗೆ ಬಂದಾಗ ನನಗೆ ಅಷ್ಟಾಗಿ ಯಾರೂ ಗೊತ್ತಿರಲಿಲ್ಲ. ನಂತರವಷ್ಟೇ ಎಲ್ಲರೂ ಹತ್ತಿರವಾದರು. ಅವಾರ್ಡ್ ತಗೊಳ್ಳೋದಕ್ಕಿಂತ ಅವಾರ್ಡ್ ತಗೊಳ್ಳೋರಿಗೆ ಪ್ರೇರಣೆ ಆಗುವುದು ಮುಖ್ಯ. ಲಂಕೇಶ್ ಅವರು ತಮ್ಮ ಬರವಣಿಗೆಯಂದಲೇ ಎಲ್ಲರಿಗೂ ಹತ್ತಿರವಾದರು. ಎಲ್ಲರನ್ನೂ ಪ್ರೀತಿಸುವ ಮನೋಭಾವ ಇದ್ದರೆ ಈ ರೀತಿಯ ಬರವಣಿಗೆ ಹೊರಬರುತ್ತದೆ. ಒಬ್ಬ ಉತ್ತಮ ರೈಟರ್ ಬಗ್ಗೆ ತಿಳಿದುಕೊಳ್ಳುವಂಥ ಕಾರ್ಯಕ್ರಮದಲ್ಲಿ ಭಾಗವಾಗಿದ್ದು ನನಗೆ ಸಿಕ್ಕ ಒಳ್ಳೇ ಅವಕಾಶ. ಇಂದ್ರಜಿತ್ ನನಗೆ ತುಂಬಾ ಆತ್ಮೀಯರು, ಅವರಿಗೋಸ್ಕರವೇ ನಾನಿಲ್ಲಿಗೆ ಬಂದೆ ಎಂದು ಹೇಳಿದರು.

ಇಂದ್ರಜಿತ್ ಲಂಕೇಶ್ ಸ್ವಾಗತಭಾಷಣ ಮಾಡುತ್ತ ಕಂಬಾರರು ನಾಟಕದ ಬಗ್ಗೆ, ಕನ್ನಡ ಸಾಹಿತ್ಯದ ಬಗ್ಗೆ ತುಂಬಾ ಚೆನ್ನಾಗಿ ಮಾತನಾಡಿದ್ದಾರೆ. ಇದು ಅಪರೂಪದ ಜಾಗ, ಇಲ್ಲಿ ಮೂವರು ಅಪರೂಪದ ಅತಿಥಿಗಳಿದ್ದಾರೆ, ನಿರ್ಮಲಾನಂದ ಸ್ವಾಮಿಗಳು ತಮ್ಮ ವಿದ್ಯಾರ್ಥಿಗಳಿಗೆ ಉಚಿತ ವೈಫೈ ಸೌಲಭ್ಯ ಒದಗಿಸಿದ್ದಾರೆ. ಅಮಿತ್ ಷಾರಂಥ ದಿಗ್ಗಜರೇ ಗುರುಗಳ ಬಳಿ ಬಂದು ಆಶೀರ್ವಾದ ಪಡೆದಿದ್ದಾರೆ. ಅದೇರೀತಿ ನನ್ನ ತಂದೆ ಬಳಿ ಹಲವಾರು ರಾಜಕಾರಣಿಗಳು ಬಂದು ಚರ್ಚೆ ಮಾಡುತ್ತಿದ್ದರು. ಅಲ್ಲದೆ ನನ್ನ ತಂದೆ ಎಂಭತ್ತರ ದಶಕದಲ್ಲೇ ಹಿಂದುಳಿದವರಿಗೆ, ದಲಿತ ವರ್ಗದವರಿಗೆ ಒಳ್ಳೇ ಅವಕಾಶ ಮಾಡಿಕೊಡುವ ಮೂಲಕ ಗಾಂಧೀಜಿಯವರನ್ನು ಅವಲಂಬಿಸಿದರು. ಗೋಕಾಕ್ ಚಳುವಳಿಗೆ ಡಾ.ರಾಜ್‍ಕುಮಾರ್ ಧುಮುಕಬೇಕು ಎಂದು ಆಗ ಆಗ್ರಹಿಸಿದವರೇ ನಮ್ಮ ತಂದೆ. ಅವರು ಹೇಳಿದ ಒಂದೇ ಮಾತಿಗೆ ಒಪ್ಪಿ ರಾಜ್‍ಕುಮಾರ್ ಅವರು ಗೋಕಾಕ್ ಚಳುವಳಿಯಲ್ಲಿ ಪಾಲ್ಗೊಂಡರು. ರಾಜಕುಮಾರ್ ತಮ್ಮ ಜೀವಮಾನದವರೆಗೆ ಕನ್ನಡವನ್ನು ಉಳಿಸಿ ಬೆಳೆಸಿದರು. ಈಗ ಅವರನ್ನು ಶಿವಣ್ಣ ಅನುಸರಿಸುತ್ತಿದ್ದಾರೆ ಎಂದು ಹೇಳಿದರು. ಈ ಸುದ್ದಿ ಇಷ್ಟವಾದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ತಪ್ಪದೆ ತಿಳಿಸಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ.