ಆಯುಧ ಪೂಜೆ ಯಂದು ಕಸ್ತೂರಿ ಮಹಲ್ ಗೆ ಕುಂಬಳಕಾಯಿ.

ಖ್ಯಾತ ನಿರ್ದೇಶಕ ದಿನೇಶ್ ಬಾಬು ಅವರ ನಿರ್ದೇಶನದ ಚಿತ್ರ ಎಂದರೆ ಅಭಿಮಾನಿಗಳಲ್ಲಿ ಒಂದು ರೀತಿಯ ಕುತೂಹಲವಿರುತ್ತದೆ.‌ ಚಿತ್ರ ಯಾವಾಗ ಬಿಡುಗಡೆಯಾಗುವುದೊ ಎಂಬ ಕಾತುರ ಕೂಡ. ಪ್ರಸ್ತುತ ದಿನೇಶ್ ಬಾಬು ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚಿತ್ರ ಕಸ್ತೂರಿ ಮಹಲ್. ಈ ತಿಂಗಳ ಆರಂಭದಲ್ಲಿ ಚಿತ್ರದ ಚಿತ್ರೀಕರಣ ಕೊಟ್ಟಿಗೆ ಹಾರ, ಬಾಲೂರು ಸುತ್ತಮುತ್ತಲಿನ ಸುಂದರ ಪರಿಸರದಲ್ಲಿ ಆರಂಭವಾಗಿತ್ತು.

ಆಯುಧ ಪೂಜೆಯ ಶುಭದಿನದಂದು ಅದೇ ಸ್ಥಳದಲ್ಲಿ ಚಿತ್ರೀಕರಣ ಪೂರ್ಣಗೊಳಿಸಿ ಕುಂಬಳಕಾಯಿ ಒಡೆಯಲಾಯಿತು. ಸುಮಾರು ೨೦ ದಿನಗಳ ಕಾಲ ಒಂದೇ ಹಂತದಲ್ಲಿ ಚಿತ್ರೀಕರಣ ಮುಕ್ತಾಯಗೊಂಡಿದೆ. ಚಿತ್ರೀಕರಣ ನಂತರದ ಚಟುವಟಿಕೆ ಸದ್ಯದಲ್ಲೇ ಆರಂಭವಾಗಲಿದೆ. ಬಹುಭಾಷ ನಟಿ ಶಾನ್ವಿ ಶ್ರೀವಾಸ್ತವ್ ನಾಯಕಿಯಾಗಿ ನಟಿಸಿರುವ ಈ ಚಿತ್ರದ ತಾರಾಬಳಗದಲ್ಲಿ ಸ್ಕಂಧ ಅಶೋಕ್, ರಂಗಾಯಣ ರಘು, ಶೃತಿ ಪ್ರಕಾಶ್, ನೀನಾಸಂ ಅಶ್ವಥ್ , ಅಕ್ಷರ್ ಮುಂತಾದವರಿದ್ದಾರೆ.

ಹಾರಾರ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ನಿರ್ದೇಶಕ ದಿನೇಶ್ ಬಾಬು ಅವರೆ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಇದು ಅವರ ನಿರ್ದೇಶನದ 50ನೇ ಚಿತ್ರ. ಶ್ರೀಭವಾನಿ‌ ಆರ್ಟ್ಸ್ ಲಾಂಛನದಲ್ಲಿ ರವೀಶ್ ಆರ್ ಸಿ ನಿರ್ಮಿಸುತ್ತಿರುವ‌ ಈ ಚಿತ್ರಕ್ಕೆ ನವೀನ್ ಆರ್ ಸಿ ಹಾಗೂ ಅಕ್ಷಯ್ ಸಿ.ಎಸ್ ಅವರ ಸಹ ನಿರ್ಮಾಣವಿದೆ .ಪಿ.ಕೆ.ಹೆಚ್ ದಾಸ್ ಛಾಯಾಗ್ರಹಣ ಹಾಗೂ *ಸೌಂದರ್ ರಾಜ್ ಅವರ ಸಂಕಲನ ಕಸ್ತೂರಿ ಮಹಲ್ ಗಿದೆ.