ಕಸ್ತೂರಿ ನಿವಾಸ ಅಲ್ಲ ಕಸ್ತೂರಿ ಮಹಲ್

ದಿನೇಶ್ ಬಾಬು ಅವರ ನಿರ್ದೇಶನದಲ್ಲಿ, ರಚಿತಾರಾಂ ಪ್ರಧಾನ ಭೂಮಿಕೆಯಲ್ಲಿ ನಟಿಸುತ್ತಿರುವ ನೂತನ ಚಿತ್ರದ ಮುಹೂರ್ತ ಇತ್ತೀಚೆಗೆ ನೆರವೇರಿತ್ತು. ಚಿತ್ರಕ್ಕೆ ಕಸ್ತೂರಿ ನಿವಾಸ ಎಂದು ಹೆಸರಿಡಲಾಗಿತ್ತು.
ಈ ಹಿಂದೆ ಡಾ||ರಾಜಕುಮಾರ್ ಅವರ ಅಭಿನಯದಲ್ಲಿ ಮೂಡಿಬಂದಿದ್ದ ಕಸ್ತೂರಿ ನಿವಾಸ ಚಿತ್ರ ಈಗಲೂ ಅಭಿಮಾನಿಗಳ ಮನದಲ್ಲಿ ವಿಶೇಷ ಸ್ಥಾನ ಪಡೆದುಕೊಂಡಿದೆ.

ನಮ್ಮ ಚಿತ್ರಕ್ಕೆ ಈ ಶೀರ್ಷಿಕೆ ನಿಗದಿಯಾಗಿ ಆರಂಭವಾದ ದಿನದಿಂದಲೂ ಸಾಕಷ್ಟು ಅಭಿಮಾನಿಗಳು ನಮ್ಮೊಂದಿಗೆ ಮಾತನಾಡಿ, ಕಸ್ತೂರಿ ನಿವಾಸ ಎಂದ ಕೂಡಲೆ ನಮಗೆ ನೆನಪಾಗುವುದು ಡಾ||ರಾಜಕುಮಾರ್. ಹಾಗಾಗಿ ನೀವು ಈ ಚಿತ್ರದ ಶೀರ್ಷಿಕೆ ಬದಲಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಡಾ||ರಾಜಕುಮಾರ್ ಕುಟುಂಬ ಹಾಗೂ ಅಪಾರ ಅಭಿಮಾನಿಗಳ ಸಲಹೆ ಮೇರೆಗೆ ನಮ್ಮ ಚಿತ್ರಕ್ಕೆ ಕಸ್ತೂರಿ ಮಹಲ್ ಎಂದು ಹೆಸರಿಡಲಾಗಿದೆ. ಹಿರಿಯ ನಿರ್ದೇಶಕ ದೊರೆ – ಭಾಗವಾನ್ ಅವರಿಗೂ ಶೀರ್ಷಿಕೆ ಬದಲಾವಣೆ ವಿಷಯ ತಿಳಿಸಿ ಅವರ ಆಶೀರ್ವಾದಪಡಿದಿರುವುದಾಗಿ ನಿರ್ಮಾಪಕ ರವೀಶ್ ಆರ್ ಸಿ ತಿಳಿಸಿದ್ದಾರೆ.

ಅಕ್ಟೋಬರ್ 5ರಿಂದ ಕಸ್ತೂರಿ ಮಹಲ್‌ ಗೆ ಕೊಟ್ಟಿಗೆಹಾರದಲ್ಲಿ ಒಂದೇ ಹಂತದ ಚಿತ್ರೀಕರಣ ನಡೆಯಲಿದೆ.
ಹಾರಾರ್ ಥ್ರಿಲ್ಲರ್ ‌ಕಥಾಹಂದರ ಹೊಂದಿರುವ ‌ಈ‌ ಚಿತ್ರವನ್ನು ‌ಖ್ಯಾತ ನಿರ್ದೇಶಕ ದಿನೇಶ್ ಬಾಬು ‌ನಿರ್ದೇಶಿಸುತ್ತಿದ್ದಾರೆ. ಅವರೆ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಇದು ಅವರ ನಿರ್ದೇಶನದ 50ನೇ ಚಿತ್ರ.

ಶ್ರೀಭವಾನಿ‌ ಆರ್ಟ್ಸ್ ಹಾಗೂ ರುಬಿನ್ ರಾಜ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ರವೀಶ್ ಆರ್ ಸಿ ಹಾಗೂ ರುಬಿನ್ ರಾಜ್ ಅವರು ನಿರ್ಮಿಸುತ್ತಿರುವ‌ ಈ ಚಿತ್ರಕ್ಕೆ ಪಿ.ಕೆ.ಹೆಚ್ ದಾಸ್ ಛಾಯಾಗ್ರಹಣ ಹಾಗೂ ಸೌಂದರ್ ರಾಜ್ ಅವರ ಸಂಕಲನವಿದೆ.
ರಚಿತಾರಾಂ, ಸ್ಕಂಧ ಅಶೋಕ್, ರಂಗಾಯಣ ರಘು, ನಾರಾಯಣ ಸ್ವಾಮಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.