ಪ್ರೇಕ್ಷಕರ ಒತ್ತಾಸೆಯಂತೆ ಸ್ಟಾರ್ ಸಿನಿಮಾಗಳು ತೆರೆಕಾಣಲಿ..! ಇಪ್ಪತ್ತೊಂದರಲ್ಲಿ ಚಿತ್ರರಂಗ ಎದ್ದು ನಿಲ್ಲಲಿ..!!

ಈ ಕೆಲಸ ನಮ್ಮ ಚಿತ್ರರಂಗದ ದೊಡ್ಡ ಮಂದಿ ಮಾಡಬೇಕಿತ್ತು; ಧೈರ್ಯ ಮಾಡಿ ಚಿತ್ರ ಬಿಡುಗಡೆ ಮಾಡಬೇಕಿತ್ತು; ಮಾಡಲಿಲ್ಲ. ಸಣ್ಣವರು ಪ್ರಯತ್ನಿಸಿದರು ಕೈಗೂಡಲಿಲ್ಲ.

ಕರೋನ, ಲಾಕ್ಡೌನು, ಸೀಲ್ಡೌನು, ಲಸಿಕೆ ಎನ್ನುತ್ತಲೇ ವರ್ಷ ಹಳೆದಾಯಿತು. ಹತ್ತು ಹಲವು ಗೊಂದಲಗಳೊಂದಿಗೆ ನಮ್ಮ ಪಾಲಿನ ಹೊಸ ವರ್ಷ ಅಡಿಯಿಟ್ಟಿದೆ. ಎರಡು ಸಾವಿರದ ಇಪ್ಪತ್ತು ಏನಕ್ಕೂ ಆಗಿಬರದೇ, ದುರಂತ ಸೃಷ್ಟಿಸಿ, ಬದುಕಿನ ಬಗ್ಗೆ ಭಯ ಹುಟ್ಟಿಸಿ ನಡೆದು ಬಿಟ್ಟಿದೆ. ಈ ಹಿಂದೆ ಎರಡು ಸಾವಿರದ ಹತ್ತೊಂಬತ್ತನೆಯ ಡಿಸೆಂಬರಿನಲ್ಲಿ ಅಲ್ಲಲ್ಲಿ ಒಂದೋ-ಎರಡೋ ಸಂಖ್ಯೆಯಲ್ಲಿ ತೆಳುವಾಗಿ ಕಾಣಿಸಿದ ಕರೋನ, ಮುಂದೆ ಅಬ್ಬರಿಸಿದ ರೀತಿಗೆ ಎರಡು ಸಾವಿರದ ಇಪ್ಪತ್ತರಲ್ಲಿ ಇಡಿಯ ಪ್ರಪಂಚವೇ ನಲುಗಿ ಹೋಯ್ತು. ಒಂದಿಡೀ ವರ್ಷ ಈ ಭೀಕರ ಖಾಯಿಲೆಯಿಂದ ನೆಮ್ಮದಿಗು, ಆಮದಾನಿಗು, ಆರೋಗ್ಯಕ್ಕು ಹೊಡೆತ ಬಿತ್ತು. ವ್ಯವಹಾರ ಮಗುಚಿಕೊಂಡಿತು‌. ಹೊರಬರುವುದೇ ಹರಸಾಹಸವೆನಿಸಿತು.

ಇದೀಗ ಮತ್ತೆ ಬ್ರಿಟನ್ ರೂಪಾಂತರೀ ವೈರಸ್ ಅವಾಂತರ ಸೃಷ್ಟಿಸುವ ಭಯಹುಟ್ಟಿಸಿದೆ. ಈ ಹೊತ್ತಲ್ಲಿ ಹೊಸ ವರುಷದ ಸಂಭ್ರಮ ಪಡಬೇಕಾದ ಪರಿಸ್ಥಿತಿ ನಮ್ಮದು. ಈ ಕರೋನಾದಿಂದ ಅತಿಹೆಚ್ಚು ಹೊಡೆತ ತಿಂದು, ಇನ್ನೂ ತಲೆ ಎತ್ತಲಾಗದೆ ಒದ್ದಾಡುತ್ತಿರುವ ಉದ್ಯಮಗಳಲ್ಲಿ, ನಮ್ಮ ಚಿತ್ರೋದ್ಯಮ ಅಗ್ರಪಂಕ್ತಯಲ್ಲಿದೆ. ಅದರಂತೆ ಚಿತ್ರಮಂದಿರತ್ತ ಕಣ್ಣಾಡಿಸಿದರೆ ಹೊಟ್ಟೆ ಕಿವುಚುತ್ತದೆ. ಹಳೇ ವರ್ಷದ ಕೊನೇ ಕೊನೆಯಲ್ಲಿ ಆಕ್ಟ್-1978, ಗಡಿಯಾರ, ನಾನೊಂಥರದಂಥಹ ನಾಲ್ಕೈದು ಸಣ್ಣ ಸಿನಿಮಾಗಳು ಧೈರ್ಯ ಮಾಡಿ ಚಿತ್ರಮಂದಿರದತ್ತ ಬಂದವಾದರೂ; ಅಲ್ಲಿ ಹೇಳಿಕೊಳ್ಳುವ ಯಶಸ್ಸು ಸಿಗಲಿಲ್ಲ.

ಸರ್ಕಾರ ರೂಪಿಸಿದ ನಿಯಮಗಳಿಗೆ ಮತ್ತು ಎರಡನೇ ಅಲೆಯ ಕರೋನಾಗೆ ಹೆದರಿದ ದೊಡ್ಡ ಸಿನಿಮಾ ತಯಾರಕರು ಯಾವ ಕಾರಣಕ್ಕೂ ಮುಂದೆ ಬರುವ ಧೈರ್ಯ ಮಾಡಲಿಲ್ಲ ‌. ಕರೋನ ಬಂದು ಹೊಸತರಲ್ಲಿ ಹೋಟೇಲ್ ಉದ್ಯಮಕ್ಕು ಇದೇ ಭಯ ಹುಟ್ಟಿತ್ತು‌. ಆದರೆ ಸಮಯ ನೋಡಿ ಅವರಲ್ಲಿ ಕೆಲವರು ಹೋಟೇಲ್ ಪುನರಾರಂಭಿಸಿದರು‌. ನಿಧಾನವಾಗಿ ಈಗ ಹೋಟೆಲ್ನಲ್ಲಿ ಜನ ತುಂಬಿಕೊಳ್ಳುತ್ತಿದ್ದಾರೆ. ವ್ಯವಹಾರ ಹಿಂದಿನಂತೆ ಕುದುರತೊಡಗಿದೆ. ಯಾವುದೇ ಇರಲಿ, ಜನಕ್ಕೆ ಅದರ ರುಚಿಹತ್ತಿಸಬೇಕು ಅಷ್ಟೆ‌. ಈ ಕೆಲಸ ನಮ್ಮ ಚಿತ್ರರಂಗದ ದೊಡ್ಡ ಮಂದಿ ಮಾಡಬೇಕಿತ್ತು; ಧೈರ್ಯ ಮಾಡಿ ಚಿತ್ರ ಬಿಡುಗಡೆ ಮಾಡಬೇಕಿತ್ತು; ಮಾಡಲಿಲ್ಲ. ಸಣ್ಣವರು ಪ್ರಯತ್ನಿಸಿದರು; ಕೈಗೂಡಲಿಲ್ಲ.

pogaru

ಈಗಲಾದರು ದೊಡ್ಡವರು ಮನಸ್ಸು ಮಾಡಬೇಕಿದೆ‌. ವರ್ಷದ ಮೊದಲಿಗೆ ಹೊಸ ಪ್ರತಿಭೆಗಳ ಮಹಿಷಾಸುರ, ಲಡ್ಡು ಚಿತ್ರಗಳು ತೆರೆಕಾಣಲು ಸಜ್ಜಾಗಿದೆ. ಇದರ ಬೆನ್ನಲ್ಲೇ ಕೆಜಿಎಫ್-2, ರಾಬರ್ಟ್, ಕೋಟಿಗೊಬ್ಬ- 3, ಯುವರತ್ನ, ಚಾರ್ಲಿ, ಸಲಗದಂಥ ದೊಡ್ಡ ಸಿನಿಮಾಗಳು ಗಟ್ಟಿ ಮನಸ್ಸು ಮಾಡಿ ಚಿತ್ರಮಂದಿರಕ್ಕೆ ಬಂದರೇ, ಬೆಳ್ಳಿ ಪರದೆಯ ಮನರಂಜನೆ ಇಲ್ಲದೆ ಕಾದಿರುವ ಪ್ರೇಕ್ಷಕರು ದೌಡಾಯಿಸಿ ಬರುತ್ತಾರೆ. ಹೀಗೆ ನಾಲ್ಕಾರು ಸಿನಿಮಾಗಳು ಹೌಸ್ ಫುಲ್ ಪ್ರದರ್ಶನ ಕಂಡು ಹಿಟ್ ಎನಿಸಿದರೆ, ಬಸವಳಿದ ಚಿತ್ರರಂಗ ಮತ್ತೆ ತಲೆಎತ್ತುವಂತಾಗಲಿದೆ. ಅಂದಾಜಿನ ಪ್ರಕಾರ ಏಪ್ರಿಲ್ ತಿಂಗಳಲ್ಲಿ ದೊಡ್ಡ ಸಿನಿಮಾಗಳು ಸಾಲುಗಟ್ಟಿ ಬರಲು ತಯಾರಾಗುತ್ತಿವೆ‌. ಇನ್ನು ಅಷ್ಟರಲ್ಲಿ ಈಗಾಗಲೇ ನಿರೀಕ್ಷೆ ಹುಟ್ಟಿಸಿರುವ ಬಿರಾದಾರ್ ಅಭಿನಯದ ನೈಂಟಿ ಹೊಡಿ ಮನೀಗ್ ನಡಿ,ವಿರಾಟಪರ್ವ, ಅಬ್ಬರ,ರಾಜಮಾರ್ತಾಂಡ, ಚಾಂಪಿಯನ್ ,ರೌಡಿ ಫೆಲೋ…..

ಚಿತ್ರಗಳು ತೆರೆಗೆ ಬಂದು ಸದ್ದು ಮಾಡುವ ಭರವಸೆ ಹುಟ್ಟಸಿವೆ‌. ಅದೆನೇ ಇರಲಿ‌. ಜನರಿಂದ ಕರೋನ ಭಯ ಇಲ್ಲವಾಗಿದೆ. ಸದ್ಯಕ್ಕೆ ಪ್ರೇಕ್ಷಕರಿಗೆ ಹಿರಿತೆರೆ ಮನರಂಜನೆ ಬೇಕಾಗಿದೆ. ನಿರೀಕ್ಷೆಯಂತೆಯೆ ಎಲ್ಲವೂ ಕೈಗೂಡಿ ಸಿನಿಮಾಗಳು ಬಿಡುಗಡೆ ಕಂಡು ಥೀಯೇಟರ್ ತುಂಬಿಕೊಳ್ಳಲಿ ಎಂಬ ಆಶಾವಾದ, ,ಭರವಸೆಗಳೊಂದಿಗೆ ಅವರಿವರಿಗೆ ಶುಭಕೋರುತ್ತಾ ಆತ್ಮಸ್ಥೈರ್ಯ ತುಂಬಿಕೊಳ್ಳುವ ಪ್ರಯತ್ನ ನಮ್ಮದು. ಮರೆವು ಮಾನವನಿಗೆ ಭಗವಂತನ ಬಹುದೊಡ್ಡ ಬಳುವಳಿ; ಅದರಂತೆ ಅದೇ ಭಗವಂತನ ಹೆಸರಲ್ಲಿ ಹಳೇ ವರ್ಷದ ಕಹಿ ನೆನಪುಗಳಿಗೆ ಎಳ್ಳುನೀರು ಬಿಡೋಣ. ಹೊಸ ವರುಷಕ್ಕೆ, ಹೊಸ ಹುರುಪಿನಲ್ಲಿ ಮೈಯೊಡ್ಡೋಣ‌. ಮುಂದಾಗಬೇಕಿರುವ ಕೆಲಸಗಳತ್ತ ಮನ ಮಾಡಿ, ಮೈಚಳಿ ಬಿಟ್ಟು ಕಾರ್ಯಪ್ರವೃತ್ತರಾಗೋಣ ಎನ್ನುತ್ತಾ, ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಷಯಗಳು.

*ನಾಗರಾಜ್ ಅರೆಹೊಳೆ.