ಸದ್ಯದಲ್ಲೇ ಜಂಟಲ್ ಮನ್ – 2

1993ರಲ್ಲಿ ತೆರೆಕಂಡಿದ್ದ ಜಂಟಲ್ ಮನ್ ಚಿತ್ರ ಭಾರತೀಯ ಚಿತ್ರರಂಗದಲ್ಲಿ ಸಾಕಷ್ಟು ರೀತಿಯ ದಾಖಲೆ ನಿರ್ಮಿಸಿತ್ತು. ಈ ಚಿತ್ರದ ಮೂಲಕ ಡೈರೆಕ್ಟರ್ ಶಂಕರ್ ನಿರ್ದೇಶಕರಾಗಿ ಹೊರಹೊಮ್ಮಿದ್ದರು. ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ವೃತ್ತಿಬದುಕಿಗೆ ಇದು ದೊಡ್ಡ ತಿರುವು ನೀಡಿತ್ತು. ಎ.ಆರ್ ರೆಹಮಾನ್ ಸಂಗೀತ ನಿರ್ದೇಶನದ ಹಾಡುಗಳಂತೂ ಎಲ್ಲರ ಗಮನ ಸೆಳೆದಿದ್ದವು. ಇಂಥ ಸೂಪರ್ ಹಿಟ್ ಚಿತ್ರವನ್ನು ನಿರ್ಮಿಸಿದವರು ಮೆಘಾ ಸಿನೆಮಾ ಸಂಸ್ಥೆಯ ಕೆ.ಟಿ. ಕುಂಜುಮೊನ್.

ಇದಕ್ಕೂ ಮುಂಚೆ ವಸಂತಕಾಲ ಪಾರ್ವೈ, ಸೂರ್ಯನ್ ಸಿನಿಮಾಗಳನ್ನು ನಿರ್ಮಿಸಿದ್ದ ಕುಂಜುಮೊನ್ ಜಂಟಲ್ ಮನ್ ನ ಅಮೋಘ ಗೆಲುವಿನ ನಂತರ ಕಾದಲನ್, ಕಾದಲ್ ದೇಶಂ ಸೇರಿದಂತೆ ಸಾಕಷ್ಟು ಸೂಪರ್ ಹಿಟ್ ಚಿತ್ರಗಳನ್ನು ನಿರ್ಮಿಸಿದ್ದಾರೆ. ಮಲಯಾಳಂ ಸೂಪರ್ ಸ್ಟಾರ್ ಗಳಾದ ಮಮ್ಮೂಟಿ ಮತ್ತು ಮೋಹನ್ ಲಾಲ್ ಸೇರಿದಂತೆ ಸಾಕಷ್ಟು ಜನ ಮಲಯಾಳಂ ನಟರ ಸಿನಿಮಾಗಳನ್ನು ನಿರ್ಮಿಸಿರುವ ಕೀರ್ತಿ ಇವರದ್ದು. ಅಷ್ಟೇ ಅಲ್ಲದೆ, ವಿತರಕರಾಗಿಯೂ ಕಾರ್ಯನಿರ್ವಹಿಸಿ ಸೂಪರ್ ಸ್ಟಾರ್ ರಜನಿಕಾಂತ್, ಕಮಲ್ ಹಾಸನ್ ರಂಥ ದೊಡ್ಡ ನಟರ ನೂರಾರು ಸಿನಿಮಾಗಳನ್ನು ತಮಿಳುನಾಡು, ಕೇರಳ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಬಿಡುಗಡೆ ಮಾಡಿದ್ದಾರೆ. ಕಾದಲನ್ ಚಿತ್ರದ ಮೂಲಕ ಪ್ರಭುದೇವಾರನ್ನು ಪರಿಚಯಿಸಿದ್ದು, ತೆಲುಗಿನ ಸ್ಟಾರ್ ಅಕ್ಕಿನೇನಿ ನಾಗಾರ್ಜುನ ಅವರನ್ನು ರಕ್ಷಕನ್ ಮೂಲಕ ತಮಿಳಿಗೆ ಕರೆತಂದಿದ್ದು, ಮಿಸ್ ಯೂನಿವರ್ಸ್ ಸುಷ್ಮಿತಾ ಸೇನ್ ರನ್ನು ಬೆಳ್ಳಿತೆರೆಗೆ ಪರಿಚಯಿಸಿದ್ದು, ಮಧುಬಾಲಾ, ನಗ್ಮಾ, ಶರತ್ ಕುಮಾರ್ ಮೊದಲಾದವರಿಗೆ ಅವಕಾಶ ನೀಡಿದ್ದು ಕೂಡಾ ಇದೇ ಕೆ.ಟಿ. ಕುಂಜುಮೊನ್.

ಕೆ.ಟಿ. ಕುಂಜುಮೊನ್ ಈಗ ಜಂಟಲ್ ಮನ್ -2 ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಆರಂಭಿಕವಾಗಿ ತೆರೆಗೆ ಬರಲಿದ್ದು, ನಂತರ ಇತರೆ ಭಾಷೆಗಳಲ್ಲಿಯೂ ಬಿಡುಗಡೆ ಮಾಡಲಿದ್ದೇವೆ ಎಂದು ನಿರ್ಮಾಪಕ ಕುಂಜುಮೊನ್ ತಿಳಿಸಿದ್ದಾರೆ. ಅತ್ಯಾಧುನಿಕ ತಂತ್ರಜ್ಞಾನ, ತಾಂತ್ರಿಕ ಕೌಶಲ್ಯಗಳನ್ನು ಬಳಸಿ ಈ ಚಿತ್ರವನ್ನು ತಯಾರಿಸಲಾಗಿದೆ. ಮೊದಲಿಗೆ ಥಿಯೇಟರುಗಳಲ್ಲಿ ಬಿಡುಗಡೆ ಆದ ನಂತರವಷ್ಟೇ ಇತರೆ ಮಾದ್ಯಮಗಳಲ್ಲಿ ಈ ಚಿತ್ರ ರಿಲೀಸ್ ಆಗಲಿದೆ. ಜಂಟಲ್ ಮನ್-2 ಕುರಿತ ಇನ್ನಷ್ಟು ವಿವರಗಳು ಸಧ್ಯದಲ್ಲೇ ಹೊರಬರಲಿದೆ.