ಶಕೀಲಾ ಮಾದಕಟಿಯೊಬ್ಬಳ ಜೀವನಗಾಥೆ

ಹೆಚ್ಚಾಗಿ ಗ್ಲಾಮರಸ್ ಪಾತ್ರಗಳಲ್ಲೇ ಅಭಿನಯಿಸುವ ಮೂಲಕ ಗುರ್ತಿಸಿಕೊಂಡ ಮಲಯಾಳಂನ ಮಾದಕ ನಟಿ, ಶಕೀಲಾ ಹೆಸರು ಕೇಳಿರದ ಪಡ್ಡೆ ಹುಡುಗರೇ ಇಲ್ಲವೆನ್ನಬಹುದು.

ದಕ್ಷಿಣ ಭಾರತ ಸಿನಿಮಾ ನಟಿಯೊಬ್ಬರ ಬಯೋಪಿಕ್ ಇರೋ ಚಿತ್ರವೊಂದು ಹಿಂದಿ, ಕನ್ನಡ ತಮಿಳು ಸೇರಿದಂತೆ 5 ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವುದು ಇದೇ ಮೊದಲೆನ್ನಬಹುದು. ಅಂಥಾ ಹಿರಿಮೆಗೆ ಕಾರಣವಾಗಿರೋ ಚಿತ್ರ ಶಕೀಲಾ. ಇಂದ್ರಜಿತ್ ಲಂಕೇಶ್ ಅವರ ನಿರ್ದೇಶನ ಈ ಚಿತ್ರ ಇದೇ ತಿಂಗಳು ಬಿಡುಗಡೆಯಾಗಲು ಸಿದ್ದವಾಗಿದೆ. ಚಿತ್ರದ ಫಸ್ಟ್‍ಲುಕ್ ಹಾಗೂ ಟ್ರೈಲರ್ ಬಿಡುಗಡೆ ಬೆಂಗಳೂರಿನ ಸ್ಟಾರ್ ಹೋಟೆಲ್‍ವೊಂದರಲ್ಲಿ ನೆರವೇರಿತು. ಹಿಂದಿ ಭಾಷೆಯಲ್ಲಿ ಶುರುವಾಗಿದ್ದ ಈ ಚಿತ್ರ ಈಗ ಪ್ಯಾನ್ ಇಂಡಿಯಾ ಲೆವೆಲ್‍ನಲ್ಲಿ ರಿಲೀಸಾಗುತ್ತಿದೆ. ಹೆಚ್ಚಾಗಿ ಗ್ಲಾಮರಸ್ ಪಾತ್ರಗಳಲ್ಲೇ ಅಭಿನಯಿಸುವ ಮೂಲಕ ಗುರ್ತಿಸಿಕೊಂಡ ಮಲಯಾಳಂನ ಮಾದಕ ನಟಿ, ಶಕೀಲಾ ಹೆಸರು ಕೇಳಿರದ ಪಡ್ಡೆ ಹುಡುಗರೇ ಇಲ್ಲವೆನ್ನಬಹುದು. 1990 ಹಾಗೂ 2000ದ ದಶಕದಲ್ಲಿ ಯಶಸ್ಸಿನ ಉತ್ತುಂಗದಲ್ಲಿದ್ದ ಶಕೀಲಾ ಅತ್ಯಂತ ಜನಪ್ರಿಯ ನಟಿಯಾಗಿದ್ದರು. ಒಂದೇ ವರ್ಷದಲ್ಲಿ ಅವರು ನಟಿಸಿದ ಹತ್ತಾರು ಸಿನಿಮಾಗಳು ಬಿಡುಗಡೆ ಆಗುತ್ತಿದ್ದವು. ಆರಂಭದಲ್ಲಿ ಈಕೆಯ ಬದುಕು ಅಷ್ಟು ಸುಲಭವಾಗಿರಲಿಲ್ಲ. ಅವರು ಕೂಡ ಜೀವನದಲ್ಲಿ ಅನೇಕ ಏಳು-ಬೀಳುಗಳನ್ನು ಕಂಡಿದ್ದಾರೆ. ಅವರ ಹಿಂದಿನ ಬದುಕೇ ಈಗ ಸಿನಿಮಾ ಆಗಿ ತೆರೆಗೆ ಬರುತ್ತಿದೆ. ಶಕೀಲಾರ ಪಾತ್ರವನ್ನು ಬಾಲಿವುಡ್ ನಟಿ ರಿಚಾ ಛಡ್ಡಾ ನಿಭಾಯಿಸಿದ್ದಾರೆ.

ಚಿತ್ರದ ಕುರಿತಂತೆ ಮಾತನಾಡಿದ ಶಕೀಲಾ ನಾನು ಬದುಕಿನಲ್ಲಿ ಎದುರಿಸಿದ ಕಷ್ಟ, ಸುಖದ ಕಥೆಯನ್ನು ಈ ಸಿನಿಮಾದಲ್ಲಿ ತೋರಿಸುತ್ತಿದ್ದಾರೆ. ಆರಂಭದಲ್ಲಿ ನಿರ್ದೇಶಕರು ನನ್ನ ಬಳಿ ಚರ್ಚಿಸಿ ಒಂದಷ್ಟು ಬದಲಾವಣೆ ಕೂಡ ಮಾಡಿಕೊಂಡಿದ್ದಾರೆ. ಸಿನಿಮಾದಲ್ಲಿ ಎಷ್ಟು ಕಾಲ್ಪನಿಕ, ಎಷ್ಟು ವಾಸ್ತವ ಇದೆ ಎಂಬುದನ್ನು ಪ್ರೇಕ್ಷಕರು ಚಿತ್ರಮಂದಿರದಲ್ಲಿಯೇ ನೋಡಲಿ. ಈ ಸಂದರ್ಭದಲ್ಲಿ ನನ್ನ ಫ್ಯಾಮಿಲಿಯೇ ನನ್ನ ಜೊತೆಗಿಲ್ಲ. ನಾನು ಎಲ್ಲಿದ್ದೇನೆ, ಏನು ಮಾಡುತ್ತಿದ್ದೇನೆ ಎಂಬುದೆಲ್ಲವೂ ಅವರಿಗೆ ಗೊತ್ತಿದೆ. ಆದರೆ ನನ್ನ ಬಗ್ಗೆ ಯಾರಿಗೂ ಕಾಳಜಿ ಇಲ್ಲ. ನಾನು ನನ್ನ ಫ್ಯಾಮಿಲಿಗಾಗಿಯೇ ಇಷ್ಟೆಲ್ಲ ಮಾಡಿದೆ. ಆದರೆ ನನ್ನವರೇ ನನಗೆ ಮೋಸ, ದ್ರೋಹ ಮಾಡಿದರು.

ನೀಲಿಚಿತ್ರಗಳನ್ನು ಮಾಡಿದ ಬಗ್ಗೆ ನನಗೆ ವಿಷಾದವಿಲ್ಲ. ಅದರ ಬಗ್ಗೆ ನನಗೆ ಖುಷಿ ಇದೆ. ನಾನು ದೇವರ ಮಗಳು. ಇಂದು ನಾನು ನಿಮ್ಮ ಜೊತೆ ಮಾತನಾಡುತ್ತಿದ್ದೇನೆ, ನನ್ನ ಬಗ್ಗೆ ಸಿನಿಮಾ ಆಗುತ್ತಿದೆ ಎಂದರೆ ಅದಕ್ಕೆ ಆ ಚಿತ್ರಗಳೇ ಕಾರಣ. ನಾನೊಬ್ಬ ಪೋಷಕ ನಟಿ ಮಾತ್ರ ಆಗಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ. ಆದರೆ ಇಂಥ ಕುಟುಂಬಕ್ಕಾಗಿ ಮಾಡಿದೆನಲ್ಲ ಎಂಬ ಬೇಸರವಿದೆ ಎಂದು ಶಕೀಲಾ ತನ್ನ ಕುಟುಂಬದ ಬಗ್ಗೆ ತುಂಬ ಬೇಸರದಿಂದ ಹೇಳಿಕೊಂಡರು.

ಇಂದ್ರಜಿತ್ ಅವರ ಜೊತೆ ನಾನು ಲವ್‍ಯೂ ಆಲಿಯಾ ಸಿನಿಮಾ ಮಾಡುತ್ತಿದ್ದಾಗ ನಿರ್ದೇಶಕಿಯೊಬ್ಬರು ನನ್ನನ್ನು ಭೇಟಿಮಾಡಿ ನನ್ನ ಆತ್ಮಚರಿತ್ರೆಯನ್ನು ಸಿನಿಮಾ ಮಾಡಬೇಕೆಂದಿದ್ದೇನೆ ಎಂದರು. ಆ ವಿಷಯ ಇಂದ್ರಜಿತ್‍ರಿಗೂ ತಿಳಿಯಿತು. ಎರಡು ದಿನ ಸಮಯ ತೆಗೆದುಕೊಂಡು ಇಂದ್ರಜಿತ್ ಕೂಡ ನನ್ನ ಆತ್ಮಚರಿತ್ರೆಯನ್ನು ಓದಿದರು. ತಾವೇ ಈ ಚಿತ್ರ ಮಾಡುವುದಾಗಿ ತಿಳಿಸಿದರು. ನನಗೂ ಖುಷಿ ಆಯಿತು. ನನ್ನ ಕಥೆಯನ್ನು ಅವರು ಚೆನ್ನಾಗಿ ತೆರೆಮೇಲೆ ತರುತ್ತಾರೆ ಎಂಬ ನಂಬಿಕೆಯಿತ್ತು. ನಾನು ಈ ಬಯೋಪಿಕ್ ಪುಸ್ತಕ ಬರೆದು 10 ವರ್ಷಗಳಾಗಿವೆ. ಆನಂತರ ಏನೆಲ್ಲ ನಡೆಯಿತು ಎಂಬುದನ್ನು ಈ ಸಿನಿಮಾದಲ್ಲಿ ವಿವರಿಸಿದ್ದೇವೆ. ನನ್ನ ಹುಟ್ಟಿನಿಂದ ಹಿಡಿದು 42ನೇ ವಯಸ್ಸಿನವರೆಗೆ ಅನೇಕ ವಿಷಯಗಳ ಬಗ್ಗೆ ಈ ಚಿತ್ರ ಮಾತನಾಡುತ್ತದೆ ಎಂದೂ ಸಹ ಶಕೀಲಾ ಹೇಳಿಕೊಂಡರು.

ನಂತರ ಮಾತನಾಡಿದ ಇಂದ್ರಜಿತ್ ಲಂಕೇಶ್ ಒಂದರ್ಥದಲ್ಲಿ ನಿಜವಾದ ಪ್ಯಾನ್ ಇಂಡಿಯಾ ಸಿನಿಮಾವಿದು, ಕನ್ನಡದ ಸುಚೇಂದ್ರ ಪ್ರಸಾದ್, ಸಂಗೀತ ನಿರ್ದೇಶಕ ವೀರಸಮರ್ಥ್ ಸೇರಿದಂತೆ ಎಲ್ಲಾ ಭಾಷೆಯ ತಂತ್ರಜ್ಞರು ಈ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ಐದೂ ಭಾಷೆ ಸೇರಿ ಎರಡರಿಂದ ಎರಡೂವರೆ ಸಾವಿರ ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದೆ ಎಂದು ಹೇಳಿದರು.

ಸಾಮಿ ನಾನ್ವಾನಿ ಹಾಗೂ ಶರವಣಪ್ರಸಾದ್ ಈ ಚಿತ್ರದ ನಿರ್ಮಾಪಕರು. ಅಲ್ಲದೆ ನಟ, ನಿರ್ದೇಶಕ ಸಂದೀಪ್ ಮಲಾನಿ ಚಿತ್ರದ ಸಹನಿರ್ಮಾಪಕರಾಗಿದ್ದಾರೆ. ಸಂತೋಷ್ ರೈ ಪಾತಾಜೆ ಕ್ಯಾಮೆರಾವರ್ಕ್ ನಿಭಾಯಿಸಿದ್ದಾರೆ. ರೀಚಾ ಛಡ್ಡಾ, ಪಂಕಜ್‍ತ್ರಿಪಾಠಿ, ರಾಜೀವ್ ಪಿಳ್ಳೈ, ಸಮರ್ಜಿತ್ ಲಂಕೇಶ್, ಸಂದೀಪ್ ಮಲಾನಿ ಹಾಗೂ ಎಸ್ಟರ್ ನರೋನಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಮಾರಂಭದಲ್ಲಿ ನಿರ್ಮಾಪಕ ಸೂರಪ್ಪಬಾಬು, ಜಾಕ್‍ಮಂಜು, ವಿತರಕ ಭಾಷಾ ಸೇರಿದಂತೆ ಚಿತ್ರರಂಗದ ಇತರೆ ಗಣ್ಯರು ಭಾಗವಹಿಸಿದ್ದರು.