ಆಕ್ಷನ್, ಕ್ರೈಂ, ಕಾಮಿಡಿ, ಥ್ರಿಲ್ಲರ್ ಎಲಿಮೆಂಟುಗಳ ಹೀರೋ

ʻʻನಾನು ಈವರೆಗೆ ಕೆಲಸ ಮಾಡಿರುವ ಸಿನಿಮಾಗಳಿಗಿಂತ ತೀರಾ ಹೊಸ ಅನುಭವ ʻಹೀರೋʼ ಚಿತ್ರ ನೀಡಿದೆ.

ಲಾಕ್ ಡೌನ್ ತಂದಿಟ್ಟಿದ್ದ ಶುಷ್ಕತೆ, ಶೂನ್ಯತೆಗೆ ಕ್ರಿಯಾಶೀಲ ಮನಸ್ಸುಗಳು ತತ್ತರಿಸಿದ್ದವು. ದಿನ, ವಾರ, ತಿಂಗಳುಗಳು ಉರುಳಿದರೂ ಸುಮ್ಮನೇ ಕೂರುವ ಸಂದರ್ಭ ಎದುರಾಗಿತ್ತಲ್ಲಾ? ಆ ಹೊತ್ತಿನಲ್ಲಿ ನಟ, ನಿರ್ದೇಶಕ ರಿಷಬ್ ಶೆಟ್ಟಿ ತಮ್ಮ ಊರಿನಲ್ಲಿದ್ದರು. ʻʻಇನ್ನು ಹೀಗೇ ಕೂರುವುದು ನನ್ನಿಂದ ಸಾಧ್ಯವಿಲ್ಲ ಮತ್ತೆ ಬೆಂಗಳೂರಿಗೆ ಹೋಗಿ ಬೇರೇನಾದರೂ ಪ್ಲಾನ್ ಮಾಡ್ತೀನಿʼʼ ಅಂತಾ ಪತ್ನಿ ಪ್ರಗತಿಗೆ ಹೇಳಿ ಹೊರಟು ನಿಂತಿದ್ದರು. ಹಾಗೆ ಬೆಂಗಳೂರಿಗೆ ಬಂದವರೇ ತಮ್ಮ ತಂಡದ ಸದಸ್ಯರನ್ನೆಲ್ಲಾ ಕೂರಿಸಿಕೊಂಡು ಸಿನಿಮಾಗಳ ಬಗ್ಗೆ ಚರ್ಚೆ ಆರಂಭಿಸಿದ್ದರು. ಅದೇ ಸಮಯಕ್ಕೆ ಸರಿಯಾಗಿ ಈ ಹಿಂದೆ ತಮ್ಮೊಟ್ಟಿಗೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದ ಭರತ್ ಒಂದು ಸಬ್ಜೆಕ್ಟನ್ನು ವಿವರಿಸಿದ್ದರು. ರಿಷಬ್ ಟೀಮಿನ ಎಲ್ಲರಿಗೂ ಕಥೆ ಸಿಕ್ಕಾಪಟ್ಟೆ ಇಷ್ಟವಾಗಿತ್ತು. ಕಡಿಮೆ ಅವಧಿಯಲ್ಲಿ ತೀರಾ ಚೆಂದ ರೋಚಕ ಕಥಾವಸ್ತುವೊಂದು ಸಿದ್ದಗೊಂಡಿತ್ತು. ಆ ಮೂಲಕ ಶುರುವಾದ ಸಿನಿಮಾ ಹೀರೋ!

ರಿಷಬ್ ಶೆಟ್ಟಿ ಫಿಲಂಸ್ ಬ್ಯಾನರಿನಲ್ಲಿ ಈವರೆಗೆ ವಿವಿಧ ರೀತಿಯ ಪ್ರಯತ್ನಗಳಾಗಿವೆ. ಆದರೆ ಆ್ಯಕ್ಷನ್, ಕ್ರೈಂ, ಕಾಮಿಡಿ, ಥ್ರಿಲ್ಲರ್ ಎಲಿಮೆಂಟುಗಳ ಚಿತ್ರಗಳು ಬಂದಿರಲಿಲ್ಲ. ಲಾಕ್ ಡೌನ್ ಪ್ರಕ್ರಿಯೆ ಚಾಲ್ತಿಯಲ್ಲಿದ್ದ ಕಾರಣ ಎಂದಿನಂತೆ ಚಿತ್ರೀಕರಣಕ್ಕೆ ಹೋಗುವ ಸಾಧ್ಯತೆ ಇರಲಿಲ್ಲ. ಹೀಗಾಗಿ ಒಂದಷ್ಟು ಜನ ಕಲಾವಿದರು ಮತ್ತು ತಂತ್ರಜ್ಞರನ್ನು ಆಯ್ಕೆ ಮಾಡಿಕೊಂಡು ಏಕಾಏಕಿ ಕಾಫಿ ಎಸ್ಟೇಟಿಗೆ ತೆರಳಿದರು. ಅಲ್ಲಿ ಸತತ ನಲವತ್ತು ದಿನಗಳ ಕಾಲ ಚಿತ್ರೀಕರಣ ಮಾಡಿ ʻಹೀರೋʼ ಚಿತ್ರವನ್ನು ರೂಪಿಸಿದ್ದಾರೆ.

ʻʻನಾನು ಈವರೆಗೆ ಕೆಲಸ ಮಾಡಿರುವ ಸಿನಿಮಾಗಳಿಗಿಂತ ತೀರಾ ಹೊಸ ಅನುಭವ ʻಹೀರೋʼ ಚಿತ್ರ ನೀಡಿದೆ. ಇಲ್ಲಿ ಎಲ್ಲರೂ ಎಲ್ಲ ಕೆಲಸವನ್ನೂ ಮಾಡಿದ್ದೀವಿ. ಲಾಕ್ ಡೌನ್ ಇದ್ದಿದ್ದರಿಂದ ಹೊರಗೆ ಓಡಾಡುವಂತಿರಲಿಲ್ಲ. ನಾವು ಚಿತ್ರೀಕರಣಕ್ಕೆ ಆಯ್ಕೆ ಮಾಡಿಕೊಂಡಿದ್ದ ಸ್ಥಳದಲ್ಲಿ ನೆಟ್ ವರ್ಕ್ ಕೂಡಾ ಇರುತ್ತಿರಲಿಲ್ಲ. ಸಾಮಾನ್ಯ ಜಗತ್ತಿನ ಯಾವ ಸಂಪರ್ಕಗಳೂ ಅಲ್ಲಿರಲಿಲ್ಲ. ನಾವು ನಾವುಗಳೇ ಸೇರಿ ಅಡುಗೆ ಮಾಡಿಕೊಂಡು, ಊಟ ಮಾಡಿ ಶೂಟಿಂಗ್ ಮಾಡುತ್ತಿದ್ವಿ. ಹೊರಗಿನಿಂದ ಏನಾದರೂ ಬೇಕಿದ್ದಾಗ ನಮ್ಮ ತಂಡದ ಸುಹಾಸ್ ಮಾತ್ರ ಹೋಗಿ ತರುತ್ತಿದ್ದರು. ಬೆಂಗಳೂರಿನಿಂದ ಏನಾದರೂ ಬೇಕಿದ್ದರೆ ಶೈನ್ ಶೆಟ್ಟಿ ತಂದುಕೊಡುತ್ತಿದ್ದರು. ಈ ಸಿನಿಮಾ ಶುರು ಮಾಡೋಣ ಅಂತಾ ತೀರ್ಮಾನಿಸಿದ ಒಂದು ದಿನದೊಳಗೆ ಶೂಟಿಂಗ್ ಗೆ ತೆರಳಿದ್ದೆವು. ನಟ ಮಂಜುನಾಥ ಗೌಡ ಮೂಲತಃ ಕಲಾ ನಿರ್ದೇಶಕ, ರಂಗಭೂಮಿಯ ಪ್ರತಿಭೆ ಮತ್ತು ನಮ್ಮ ಹಳೆಯ ಗೆಳೆಯ. ಈ ಚಿತ್ರದಲ್ಲಿ ಅವರು ಕಲಾ ನಿರ್ದೇಶನದ ಜೊತೆಗೆ ಪ್ರಮುಖ ಪಾತ್ರವನ್ನು ಕೂಡಾ ನಿಭಾಯಿಸಿದ್ದಾರೆ.

ಮಂಜು ಮತ್ತು ಪ್ರಮೋದ್ ಸೇರಿ ಇಪ್ಪತ್ನಾಲ್ಕು ಗಂಟೆಗಳಲ್ಲಿ ಸಿನಿಮಾಗೆ ಬೇಕಿರುವ ಅಷ್ಟೂ ಸೆಟ್ ಪ್ರಾಪರ್ಟಿಯನ್ನು ಹೊಂದಿಸಿದರು. ಈ ಚಿತ್ರದಲ್ಲಿ ಮಂಜುನಾಥ್ ಹೀರೋನಾ ಅಥವಾ ವಿಲನ್ನಾ ಅನ್ನೋದು ಸಿನಿಮಾ ನೋಡಿದ ಮೇಲಷ್ಟೇ ಗೊತ್ತಾಗಲಿದೆ. ಒಟ್ಟಾರೆ ಕಷ್ಟದ ದಿನಗಳಲ್ಲೂ ಎಲ್ಲರೂ ಇಷ್ಟಪಟ್ಟು ಉತ್ತಮವಾದ ಪ್ರಯತ್ನ ಮಾಡಿದ್ದೇವೆ. ಆರಂಭದಲ್ಲಿ ಈ ಚಿತ್ರವನ್ನು ಓಟಿಟಿಗೆ ನೀಡುವ ಪ್ಲಾನಿತ್ತು. ಈಗ ಸಿನಿಮಾ ಹೊರಬಂದಿರುವ ರೀತಿಯನ್ನು ನೋಡಿದರೆ, ಖಂಡಿತವಾಗಿಯೂ ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡಬೇಕು ಅನ್ನಿಸುತ್ತಿದೆ…ʼʼ ಎಂದು ನಟ ರಿಷಬ್ ವಿವರಿಸಿದರು. ದೇವರು ತುಂಬಾ ಒಳ್ಳೆಯವರನ್ನೆಲ್ಲಾ ಒಂದು ಕಡೆ ಸೇರಿಸಿ, ತಮ್ಮನ್ನು ಆ ತಂಡದ ಒಬ್ಬಳನ್ನಾಗಿ ಮಾಡಿದ್ದು ನನ್ನ ಪಾಲಿನ ಸುಕೃತ. ಈ ಚಿತ್ರದಲ್ಲಿ ಪಾತ್ರ ನಿರ್ವಹಿಸಿರೋದು ಖುಷಿ ನೀಡಿದೆ ಎಂದು ಚಿತ್ರದ ನಾಯಕಿ ಗಾನವಿ ತಿಳಿಸಿದರು.

ರಿಷಬ್ ಶೆಟ್ಟಿ ಫಿಲಂಸ್ ನಿರ್ಮಾಣದ ʻಹೀರೋʼ ಚಿತ್ರದ ಟ್ರೇಲರ್ ಈಗ ಬಿಡುಗಡೆಯಾಗಿದೆ. ಈ ಚಿತ್ರಕ್ಕೆ ಎಂ. ಭರತ್ ರಾಜ್ ನಿರ್ದೇಶನ, ಭರತ್ ರಾಜ್ ಮತ್ತು ಅನಿರುದ್ಧ್ ಮಹೇಶ್ ಬರವಣಿಗೆ, ನಿತೇಶ್ ನಂಜುಂಡಾರಾಧ್ಯ, ತ್ರಿಲೋಕ್ ತ್ರಿವಿಕ್ರಮ, ರಿಷಬ್ ಶೆಟ್ಟಿ ಸಹ ಬರಹಗಾರರಾಗಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ, ಅರವಿಂದ್ ಎಸ್ ಕಶ್ಯಪ್ ಛಾಯಾಗ್ರಹಣ, ಪ್ರತೀಕ್ ಶೆಟ್ಟಿ ಸಂಕಲನ, ಧರಣಿ ಕಲೆ, ವಿಕ್ರಂ ಮೋರ್ ಮತ್ತು ರಿಷಬ್ ಶೆಟ್ಟಿ ಸಾಹಸ ಸಂಯೋಜನೆ ಇದೆ.