‘ಆ ಒಂದು ಕನಸು’ ಶೀರ್ಷಿಕೆ ಅನಾವರಣ.

ಪ್ರಸಿದ್ಧ ಶನಿ ಧಾರಾವಾಹಿಯ ನಿರ್ದೇಶಕರಾಗಿ ಕಾರ್ಯನಿರ್ವಹಿಸಿರುವ ವಿಷ್ಣು ನಾಚನೇಕರ್ ಅವರಿಗೆ ಹಿರಿಯೆರೆಯಲ್ಲಿ ಇದು ಚೊಚ್ಚಲ ನಿರ್ದೇಶನದ ಚಿತ್ರ.

ರಂಗು ಕ್ರಿಯೇಷನ್ಸ್ ಲಾಂಛನದಲ್ಲಿ ದಿಲೀಪ ಬಿ.ಎಂ ನಿರ್ಮಿಸುತ್ತಿರುವ ನೂತನ ಚಿತ್ರ ‘ಆ ಒಂದು ಕನಸು’. ಈ ಚಿತ್ರದ ಶೀರ್ಷಿಕೆಯನ್ನು ಹಿರಿಯ ನಟರಾದ ಎಸ್ ಉಮೇಶ್, ಹೊನ್ನವಳ್ಳಿ ಕೃಷ್ಣ ಹಾಗೂ ಆಶಾ(ಹಿರಿಯ ಕಂಠದಾನ ಕಲಾವಿದೆ) ಬಿಡುಗಡೆ ಮಾಡಿದ್ದಾರೆ. ಡಿಸೆಂಬರ್ 3ರಿಂದ ಚಿತ್ರೀಕರಣ ಆರಂಭ ವಾಗಲಿದೆ. ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರವನ್ನು ವಿಷ್ಣು ನಾಚನೇಕರ್ ನಿರ್ದೇಶಿಸುತ್ತಿದ್ದಾರೆ.

ಕನ್ನಡದ ಕೆಲವು ಸಿನಿಮಾಗಳಿಗೆ ಸಹಾಯಕ ನಿರ್ದೇಶಕರಾಗಿ, ಕಿರುತೆರೆಯ ಹಲವು ಧಾರಾವಾಹಿಗಳ ಸಂಚಿಕೆ ನಿರ್ದೇಶಕರಾಗಿ, ಪ್ರಸಿದ್ಧ ಶನಿ ಧಾರಾವಾಹಿಯ ನಿರ್ದೇಶಕರಾಗಿ ಕಾರ್ಯನಿರ್ವಹಿಸಿರುವ ವಿಷ್ಣು ನಾಚನೇಕರ್ ಅವರಿಗೆ ಹಿರಿಯೆರೆಯಲ್ಲಿ ಇದು ಚೊಚ್ಚಲ ನಿರ್ದೇಶನದ ಚಿತ್ರ. ಕೆ.ಉದಯಂ ಕಥೆ, ಚಿತ್ರಕಥೆ ಹಾಗೂ ಮಳವಳ್ಳಿ ಸಾಯಿಕೃಷ್ಣ ಸಂಭಾಷಣೆ ಬರೆದಿದ್ದಾರೆ. ವೀನಸ್ ಮೂರ್ತಿ‌ ಛಾಯಾಗ್ರಹಣ, ಅಭಿಷೇಕ್ ಜೆ ರಾಯ್ ಸಂಗೀತ ನಿರ್ದೇಶನ, ಅಲ್ಟಿಮೆಟ್ ಶಿವು ಸಾಹಸ ನಿರ್ದೇಶನ ಹಾಗೂ ಹೈಟ್ ಮಂಜು, ಸ್ಟಾರ್ ಗಿರಿ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ‘ಆ ಒಂದು ಕನಸು’ ಚಿತ್ರದಲ್ಲಿ ಮೂರು ಹಾಡುಗಳು ಹಾಗೂ ನಾಲ್ಕು ಸಾಹಸ ಸನ್ನಿವೇಶಗಳಿವೆ. ಬೆಂಗಳೂರು, ಸಾಗರ, ಶಿವಮೊಗ್ಗದಲ್ಲಿ ಚಿತ್ರೀಕರಣ ನಡೆಯಲಿದೆ.

ಸಾಕಷ್ಟು ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ನಟಿಸಿರುವ ವಿಶ್ವಾಸ್ ನಾಯಕರಾಗಿ ನಟಿಸುತ್ತಿರುವ ಎರಡನೇ ಚಿತ್ರವಿದು. ಬಾಲ ರಾಜವಾಡಿ, ಅಮಿತ್ ಗಿರೀಶ್ ಶಿವಣ್ಣ, ರಮೇಶ್ ಭಟ್ ಗಿರೀಜಾ ಲೋಕೇಶ್, ಕುರಿ ಬಾಂಡ್ ರಂಗ, ಹರ್ಷವರ್ಧನ್, ಶ್ವೇತಾರಾವ್ ಜಯಶ್ರೀ, ನಾರಾಯಣ ಸ್ವಾಮಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.