ಸಿನಿಮಾ ಅಂದರೇನೆ ಹೊಸತನ. ವಿಭಿನ್ನತೆಗಷ್ಟೇ ಇಲ್ಲಿ ಬೆಲೆ. ಈ ನಿಟ್ಟಿನಲ್ಲಿ ನಿಜಕ್ಕೂ ಭಿನ್ನ ಎನಿಸಿಕೊಳ್ಳುವ ಚಿತ್ರವೊಂದು ಕನ್ನಡ ಚಿತ್ರರಂಗದಲ್ಲಿ ರೂಪುಗೊಂಡಿದೆ. ತೀರಾ ವಿಶೇಷ ಎನ್ನಿಸಿಕೊಳ್ಳುವ ಆವಿಷ್ಕಾರ ಇಲ್ಲಿ ಯಶಸ್ವಿಯಾಗಿ ನೆರವೇರಿದೆ. ಧೃತಿ ಪ್ರೊಡಕ್ಷನ್ಸ್ ಅಡಿಯಲ್ಲಿ ಪ್ರವೀಣ್ ಮತ್ತು ಅವರ ಸ್ನೇಹಿತರು ಸೇರಿ ನಿರ್ಮಿಸುತ್ತಿರುವ ಹೊಸ ಚಿತ್ರ ಎವಿಡೆನ್ಸ್. ಈ ಚಿತ್ರಕ್ಕೆ ಪ್ರವೀಣ್ ರಾಮಕೃಷ್ಣ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ರವಿ ಸುವರ್ಣ ಛಾಯಾಗ್ರಹಣ, ಕಾರ್ತಿಕ್ ವೆಂಕಟೇಶ್ ಸಂಗೀತ ಈ ಚಿತ್ರಕ್ಕಿದೆ. ಒಂದೇ ಲೊಕೇಶನ್ ನಲ್ಲಿ ಎರಡೇ ಪಾತ್ರಗಳ ಮೂಲಕ ಕಥೆ ಅನಾವರಣಗೊಳ್ಳಲಿದೆ.
ರೋಬೋ ಗಣೇಶ್ ಮತ್ತು ಮಾನಸ ಜೋಷಿ ಆ ಎರಡು ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ಸಸ್ಪೆನ್ಸ್ , ಥ್ರಿಲ್ಲರ್ ಜಾನರಿನ ಈ ಚಿತ್ರದಲ್ಲಿ ಈವರೆಗೆ ಎಲ್ಲೂ ಅನಾವರಣಗೊಳ್ಳದ ಕಥಾವಸ್ತು ಇರಲಿದೆ ಎಂದು ನಿರ್ದೇಶಕ ಪ್ರವೀಣ್ ರಾಮಕೃಷ್ಣ ಹೇಳಿದ್ದಾರೆ. ಒಂದೇ ಜಾಗ ಮತ್ತು ಎರಡು ಪಾತ್ರಗಳನ್ನು ಬಳಸಿಕೊಂಡು ಇಡೀ ಸಿನಿಮಾವನ್ನು ಕಟ್ಟಿ ನಿಲ್ಲಿಸುವುದು ನಿಜಕ್ಕೂ ಸವಾಲಿನ ಕೆಲಸ. ನಿರ್ದೇಶಕ ಪ್ರವೀಣ್ ಅವರ ಕಲ್ಪನೆಯೇ ಅದ್ಭುತವಾಗಿದೆ. ನೋಡುಗರು ಅರೆಕ್ಷಣವೂ ಅತ್ತಿತ್ತ ಅಲುಗಾಡದಂತೆ ಹಿಡಿದಿಡುವ ಶಕ್ತಿ ‘ಎವಿಡೆನ್ಸ್ ಗಿದೆ’ ಎನ್ನುವುದು ನನ್ನ ನಂಬಿಕೆ ಅನ್ನೋದು ಛಾಯಾಗ್ರಾಹಕ ರವಿ ಸುವರ್ಣ ಅವರ ನುಡಿ. ಕನಕಪುರ ಮುಖ್ಯರಸ್ತೆಯಲ್ಲಿರುವ ಭೂಮಿಕಾ ಸ್ಟುಡಿಯೋನಲ್ಲಿ ಎವಿಡೆನ್ಸ್ ಸಿನಿಮಾ ಸಂಪೂರ್ಣ ಚಿತ್ರೀಕರಣಗೊಂಡಿದೆ. ಈಗಾಗಲೇ ಈ ಚಿತ್ರದ ಬಹುತೇಕ ಕೆಲಸ ಕಾರ್ಯಗಳು ಪೂರ್ಣಗೊಂಡಿದ್ದು ಇಷ್ಟರಲ್ಲೇ ಮತ್ತಷ್ಟು ವಿವರಗಳನ್ನು ಚಿತ್ರತಂಡ ನೀಡಲಿದೆ.ಈ ಸುದ್ದಿ ಇಷ್ಟವಾದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ತಪ್ಪದೆ ತಿಳಿಸಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ.