ಸ್ಪೂರ್ತಿದಾಯಕ 2021 ಕ್ಯಾಲೆಂಡರ್

ಕ್ಯಾಮೆರಾಮನ್ ಕೃಷ್ಣ ಸಹೋದರ ಸಾಗರ್’ನಿಂದ ವಿನೂತನ ಕೊಡುಗೆ

ಸಾಮಾನ್ಯವಾಗಿ ಹೊಸ ವರ್ಷದ ಕ್ಯಾಲೆಂಡರ್ ಎಂದರೆ ಸುಂದರ ಪರಿಸರ, ತಳುಕು-ಬಳುಕಿನ ಫೋಟೋಗಳು, ಝಗಮಗಿಸುವ ಚಿತ್ತಾರಗಳೇ ತುಂಬಿರುತ್ತವೆ. ಆದರೆ 20121ರ ಕ್ಯಾಲೆಂಡರ್ ಎಲ್ಲಕ್ಕಿಂತಲೂ ಭಿನ್ನವಾಗಿರಬೇಕೆಂಬ ದೃಷ್ಟಿಕೋನದಲ್ಲಿ ಮೂಡಿಬಂದಿರುವ ಈ ಸುಂದರ ಕ್ಯಾಲೆಂಡರ್ ನಿಜಕ್ಕೂ ಸ್ಪೂರ್ತಿದಾಯಕ. ಯಾಕೆಂದರೆ ಇಲ್ಲಿರುವ ಪ್ರತಿಯೊಬ್ಬರೂ ಸಾಧಕರೇ. ಅದೂ ಅಂತಿಂಥ ಸಾಧಕರಲ್ಲ… ವಿಶೇಷಚೇತನರ ವಿಶಿಷ್ಟ ಸಾಧನೆಗಳನ್ನು ಪರಿಚಯಿಸುವ ಕ್ಯಾಲೆಂಡರ್. ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆಗೈದು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ಕ್ರೀಡಾಪಟುಗಳು, ಮಾಡೆಲ್, ಫೋಟೋಗ್ರಾಫರ್, ಫಿಟ್’ನೆಸ್, ಆರ್ಟಿಸ್ಟ್… ಹೀಗೆ ಹಲವಾರು ಸಾಧಕ-ಸಾಧಕಿಯರ ಕಿರು ಪರಿಚಯದೊಂದಿಗೆ ಒಂದೊಂದು ತಿಂಗಳಿಗೆ ಒಬ್ಬೊಬ್ಬರ ಕಿರು ಪರಿಚಯ ಹಾಗೂ ಅವರ ಸಾಧನೆಗಳನ್ನೊಳಗೊಂಡ ಕಥೆಗಳು ಎಂಥವರಿಗೂ ಸ್ಪೂರ್ತಿಯ ಚಿಲುಮೆ.

ಇಂಥದ್ದೊಂದು ಸುಂದರ ಪರಿಕಲ್ಪನೆಯ ಕ್ಯಾಲೆಂಡರ್ ಹೊತ್ತು ತಂದಿರುವುದು ಇನ್ವೋಕ್ ಫೌಂಡೇಷನ್ ಸಂಸ್ಥಾಪಕ ಸಾಗರ್. ಇವರು ಖ್ಯಾತ ನಿರ್ದೇಶಕ, ಛಾಯಾಗ್ರಾಹಕ ‘ಮುಂಗಾರು ಮಳೆ’ ಕೃಷ್ಣ ಅವರ ಸಹೋದರ. ಇವರಿಗೆ ಅಪಘಾತವೊಂದರಲ್ಲಿ ಸ್ಪೈನಲ್ ಕಾರ್ಡ್’ಗೆ ಬಲವಾದ ಪೆಟ್ಟು ಬಿದ್ದು ಚೇತರಿಸಿಕೊಳ್ಳುವಾಗ ವಿಶೇಷಚೇತನರಿಗೆ ಹುಟ್ಟಿಕೊಂಡ ಸಂಸ್ಥೆಯೇ ಇನ್ವೋಕ್ ಫೌಂಡೇಷನ್. ಈ ಸಂಸ್ಥೆಯಿಂದ ಮೂಡಿಬಂದಿರುವ ಸುಂದರ 2021 ನೂತನ ವರ್ಷದ ಕ್ಯಾಲೆಂಡರ್’ನ್ನು ನಿರ್ದೇಶಕ ಕೃಷ್ಣ ಬಿಡುಗಡೆ ಮಾಡಿ ಸಾಗರ್ ಪರಿಶ್ರಮ ಹಾಗೂ ಕ್ರಿಯೇಟಿವಿಟಿಯನ್ನು ಮೆಚ್ಚಿಕೊಂಡಿದ್ದಾರೆ.

ಬ್ಲೇಡ್ ರನ್ನರ್ ಶಾಲಿನಿ ಸರಸ್ವತಿ, ಪ್ಯಾರಾ ಒಲಂಪಿಯನ್ ಶರತ್ ಗಾಯಕ್ವಾಡ್, ಅಡ್ವೆಂಚರ್ ಟೂರಿಸ್ಟ್ ಮಂಜುನಾಥ್ ಚಿಕ್ಕಯ್ಯ, ಫಿಟ್ನೆಸ್ ಶ್ರೀನಿವಾಸ್ ಗೌಡ, ಈಜುಪಟು- ಡಾನ್ಸರ್ ಆಗಿರುವ ಜಯಂತ್, ಕ್ರಿಕೆಟರ್ಸ್ ಅಶ್ವಿನಿ-ಸಾಗರ್, ಬಾಸ್ಕೆಟ್ ಬಾಲ್ ಪ್ಲೇಯರ್ ಗೌಸಿಯಾ ತಾಜ್ ಸೇರಿದಂತೆ ಇನ್ನೂ ಅನೇಕರು ಈ ಕ್ಯಾಲೆಂಡರ್’ನಲ್ಲಿದ್ದಾರೆ. ಮತ್ತೊಂದು ವಿಶೇಷವೆಂದರೆ ಈ ಕ್ಯಾಲೆಂಡರ್ ಫೋಟೋಶೂಟ್ ಹಾಗೂ ಮೇಕಿಂಗ್ ಸಿನಿಮಾ ಕ್ವಾಲಿಟಿಯಲ್ಲಿ ಮಾಡಲಾಗಿದೆ.