ಬಿಗ್‌ಬಾಸ್‌ ಖ್ಯಾತಿಯ ನಟಿ ಜಯಶ್ರೀ ಆತ್ಮಹತ್ಯೆ,ಸಿನಿಮಾದಲ್ಲಿ ಸಿಗದ ಅವಕಾಶ.

ಬಿಗ್‌ ಬಾಸ್‌ ಖ್ಯಾತಿಯ ಜಯಶ್ರೀ ರಾಮಯ್ಯ ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರೊ ಸಂಧ್ಯಾ ಕಿರಣ ವೃದ್ಧಾಶ್ರಮದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಕಳೆದ ಕೆಲ ದಿನಗಳಿಂದ ಖಿನ್ನತೆಗೆ ಒಳಗಾಗಿದ್ದ ನಟಿ ಈ ಹಿಂದೆಯೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಇದೀಗ ಕೊನೆಗೂ ಉಸಿರು ಚೆಲ್ಲಿರುವ ಜಯಶ್ರೀಗೆ ಸಿನಿಮಾದಲ್ಲಿ ಅವಕಾಶಗಳು ಕಡಿಮೆಯಾಗಿದ್ದವಂತೆ. ಜೊತೆಗೆ ಕೌಟುಂಬಿಕ ಕಲಹವೂ ನಟಿಯ ನೆಮ್ಮದಿ ಹಾಳು ಮಾಡಿತ್ತು ಎನ್ನಲಾಗಿದೆ. ತಮ್ಮ ಸೋದರ ಸಂಬಂಧಿಯೊಬ್ಬರು ಕಿರುಕುಳ ನೀಡುತ್ತಿರುವುದಾಗಿಯೂ ಜಯಶ್ರೀ ಈ ಹಿಂದೆ ಹೇಳಿಕೊಂಡಿದ್ದರು.

ಕಳೆದ ಬಾರಿಯ ಆತ್ಮಹತ್ಯೆ ಯತ್ನದ ಬಳಿಕ ಜಯಶ್ರೀ ರಿ ಹ್ಯಾಬಿಟೇಷನ್ ಸೆಂಟರ್ ಗೆ ದಾಖಲಾಗಿದ್ದರು ಎನ್ನಲಾಗಿದೆ. ಜಯಶ್ರೀ ಆರೋಗ್ಯ ಸ್ಥಿತಿಯನ್ನು ಅರಿತಿದ್ದ ಕುಟುಂಬಸ್ಥರು ಬೆಂಗಳೂರಿನ ಅಭಯ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ನಟಿಗೆ ಚಿಕಿತ್ಸೆ ನೀಡಿದ್ದ ವೈದ್ಯರು ಜಯಶ್ರೀಗೆ ರಿ ಹ್ಯಾಬಿಟೇಷನ್ ಅಗತ್ಯವಿದೆ ಎಂದು ಸಲಹೆ ನೀಡದ್ದರು.

ಇದರಂತೆ ಕಳೆದ ಡಿಸೆಂಬರ್ 20 ರಂದು ಮಾದನಾಯಕನ ಹಳ್ಳಿಯ ಪ್ರಗತಿ ಲೇಔಟ್‌ನಲ್ಲಿರುವ ಸಂಧ್ಯಾಕಿರಣ ರಿ ಹ್ಯಾಬಿಟೇಶನ್ ಸೆಂಟರ್‌ಗೆ ಜಯಶ್ರೀ ದಾಖಲಾಗಿದ್ರು. ಇತ್ತೀಚಿನ ವರೆಗೂ ಲವಲವಿಕೆಯಿಂದಿದ್ದ ಜಯಶ್ರೀ ನಿನ್ನೆಯ ವರೆಗೂ ಚೆನ್ನಾಗಿಯೇ ಇದ್ದರಂತೆ. ನಿನ್ನೆ ಸಂಜೆ ಹೊತ್ತಿಗೆ ವೃದ್ದಾಶ್ರಮದಲ್ಲಿ ಟೀ ಸೇವನೆ ಮಾಡಿದ ಜಯಶ್ರೀ ಇದೇ ವೇಳೆ ನನಗೆ ರಾತ್ರಿ ಊಟ ಬೇಡ, ನಾನು ಡಯಟ್ ಮಾಡ್ತಿದ್ದಿನಿ ಟೀ ಅಷ್ಟೇ ಸಾಕು ಎಂದಿದ್ದರಂತೆ, ನಟಿ ಮೊದಲೇ ರಾತ್ರಿ ಊಟ ಬೇಡ ಅಂದಿದ್ದರಿಂದ ಊಟ ಕೊಡಲು ರಿ ಹ್ಯಾಬಿಟೇಷನ್ ಸೆಂಟರ್‌ನ ಸಿಬ್ಬಂದಿ ಆಕೆಯ ರೂಮಿನತ್ತ ತೆರಳಿಲ್ಲ.

ಬೆಳಗ್ಗೆ ರಿ ಹ್ಯಾಬಿಟೇಷನ್ ಸಿಬ್ಬಂದಿ ಕಮಲಾ ಜಯಶ್ರೀ ರೂಂ ಬಳಿ ತೆರಳಿದಾಗ ರೂಮ್‌ ಲಾಕ್ ಆಗಿದ್ದನ್ನು ಕಂಡು ಆತಂಕಗೊಂಡಿದ್ದಾರೆ, ಅನುಮಾನ ಬಂದು ಕಿಟಕಿಯಿಂದ ನೋಡಿದಾಗ ಜಯಶ್ರೀ ನೇಣಿಗೆ ಶರಣಾಗಿರೋದು ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.