“ಭಗತ್‌ಸಿಂಗ್” ರವರಿಗೆ ಜನ್ಮದಿನದ ಶುಭಾಶಯಗಳು.

ಒಂದು ಸಾಯಂಕಾಲ. ಮೂರು ವರ್ಷದ ಒಬ್ಬ ಪುಟ್ಟ ಹುಡುಗ ತನ್ನ ತಂದೆಯ ಜೊತೆ ಹೊರಗೆ ತಿರುಗಾಡಲು ಹೋಗಿದ್ದ. ತಂದೆಯೊಡನೆ ಇನ್ನೊಬ್ಬ ಹಿರಿಯರೂ ಇದ್ದರು. ಮೂವರೂ ಮಾತನಾಡುತ್ತಾ ಊರ ಹೊರಗೆ ಬಂದರು. ಅಲ್ಲೆಲ್ಲಾ ಹೊಲ ಗದ್ದೆಗಳು ಹಸಿರು ಬೆಳೆ ತುಂಬಿಕೊಂಡು ನಿಂತಿದ್ದವು. ಹಿರಿಯರು ಗದ್ದೆಯ ಬದುವಿನ ಮೇಲೆ ನಡೆಯುತ್ತಿದ್ದರು. ಹುಡುಗನ ಹೆಜ್ಜೆ ಸದ್ದು ಕೇಳದೆ ತಂದೆ ಹಿಂದೆ ತಿರುಗಿ ನೋಡಿದರು. ಹುಡುಗ ಗದ್ದೆಯಲ್ಲಿ ಒಂದು ಗಿಡದ ಕಂಟೆಯನ್ನು ನೆಡುತ್ತ ಕುಳಿತಿದ್ದ. ನೋಡಿ ತಂದೆಗೆ ಕುತೂಹಲ ಉಂಟಾಯಿತು.

“ಏನು ಮಾಡ್ತಾ ಇದ್ದೀಯೋ?” ಎಂದರು.

“ಮತ್ತೇ…. ನಾನು ಇಲ್ಲಿ ಗದ್ದೆ ತುಂಬ ಬಂದೂಕ ಬೆಳಸ್ತೀನಿ” ಎಂದು ಮುದ್ದಾಗಿ ಹೇಳಿದ ಪುಟ್ಟ ಹುಡುಗ.

ಬಂದೂಕುಗಳನ್ನು ಗದ್ದೆಯಲ್ಲಿ ಬೆಳೆಸುವದು ಖಂಡಿತ ಸಾಧ್ಯ ಎಂಬ ನಂಬಿಕೆ ಅವನ ಕಣ್ಣಲ್ಲಿ ಹೊಳೆಯುತ್ತಿತ್ತು. ಹಿರಯರಿಬ್ಬರೂ ಆ ಪುಟ್ಟ ಹುಡುಗನ ಮಾತಿಗೆ ಆಶ್ಚರ್ಯದಿಂದ ಮೂಕರಾಗಿ ನಿಂತರು.

ಭಾರತಕ್ಕೆ ಸ್ವಾತಂತ್ರ್ಯ ಗಳಿಸಿಕೊಡಲು ಹೋರಾಡಿ ಕೊನೆಗೆ ಜೀವವನ್ನೇ ಅರ್ಪಿಸಿದ ಮಹಾವೀರ ಭಗತ್‌ಸಿಂಗನೇ ಆ ಹುಡುಗ.

ಜನನ

ಪಂಜಾಬ್‌ಪ್ರಾಂತದಲ್ಲಿ ಲಾಯಲ್‌ಪುರ ಎಂಬ ಜಿಲ್ಲೆಯಲ್ಲಿ ಬಂಗಾ ಎಂಬ ಒಂದು ಹಳ್ಳಿ. ಅಲ್ಲಿ ಸರದಾರ್‌ಕಿಶನ್‌ಸಿಂಗ್‌ಎಂಬ ವೀರ ವಾಸಿಸುತ್ತಿದ್ದ. ಆತನ ಹೆಂಡತಿ ವಿದ್ಯವಾತಿ. ಕಿಶನ್‌ಸಿಂಗನದು ಧೈರ್ಯ ಸಾಹಸಗಳಿಗೆ ಹೆಸರಾದ ಮನೆತನ. ಇಂಗ್ಲೀಷರ ಕೈಯಿಂದ ಭಾರತವನ್ನು ಬಿಡುಗಡೆ ಮಾಡಲು ಅವನ ವಂಶದ ಹಲವಾರು ವೀರರು ಹೋರಾಡಿದ್ದರು. ಇಂಥ ಹೋರಾಟಗಾರರನ್ನು ಕ್ರಾಂತಿಕಾರಿಗಳು ಎಂದು ಕರೆಯುತ್ತಾರೆ. ಕಿಶನ್‌ಸಿಂಗನೂ ಕ್ರಾಂತಿಕಾರಿಯೆ. ಅಜಿತ್‌ಸಿಂಗ್, ಸ್ವರ್ಣಸಿಂಗ್‌ಎಂಬ ಅವನ ತಮ್ಮಂದಿರೂ ಇಂಗ್ಲೀಷರನ್ನು ಭಾರತದಿಂದ ಓಡಿಸಲು ಹೋರಡಿದ್ದರು. ಕಿಶನ್‌ಸಿಂಗ್, ಅಜಿತ್‌ಸಿಂಗ್‌ಮತ್ತು ಸ್ವರ್ಣಸಿಂಗ್ ಮೂವರನ್ನೂ ಸರ್ಕಾರ ಸೆರೆಗೆ ಹಾಕಿತ್ತು.

ಆಗ ಭಾರತದಲ್ಲಿ ಎಲ್ಲ ಕಡೆ ಇಂಥ ಕ್ರಾಂತಿ ಹಬ್ಬಿತ್ತು. ಸ್ವಾತಂತ್ರ್ಯ ಪಡೆಯಬೇಕು ಎಂಬ ಹಟ ಜನಗಳಲ್ಲಿ ತುಂಬಿತ್ತು. ಇಂಥ ಸಮಯದಲ್ಲಿ ೧೯೦೭ನೆಯ ಇಸವಿ ಸೆಪ್ಟೆಂಬರ್‌೧೮ರಂದು ಭಗತ್‌ಸಿಂಗ ಹುಟ್ಟಿದ. ಸರದಾರ್‌ಕಿಶನ್‌ಸಿಂಗ್‌ಮತ್ತು ವಿದ್ಯಾವತಿರಯವರ ಮೂರನೆಯ ಮಗ ಅವನು. ಅದೇ ಸಮಯದಲ್ಲಿ ಜೈಲಿನಲ್ಲಿದ್ದ ಕಿಶನ್‌ಸಿಂಗ್‌ಮತ್ತು ಚಿಕ್ಕಪ್ಪ ಸ್ವರ್ಣ ಸಿಂಗರ ಬಿಡುಗಡೆಯಾಯಿತು. ಇನ್ನೊಬ್ಬ ಚಿಕ್ಕಪ್ಪ ಅಜಿತ್‌ಸಿಂಗನ ಬಿಡುಗಡೆಯೂ ಆಗುವುದೆಂದು ವರ್ತಮಾನ ತಿಳಿದು ಬಂತು. ಹೀಗೆ ತಾನು ಹುಟ್ಟಿದ ಮನೆಗೆ ಭಾಗ್ಯ ತಂದ ಆ ಮಗುವಿಗೆ ಭಗತ್‌ಸಿಂಗ ಎಂದು ಹೆಸರಿಟ್ಟರು. “ಭಗತ್‌ಸಿಂಗ” ಎಂದರೆ ಭಾಗ್ಯವಂತ ಎಂದು ಅರ್ಥ.

ಎಲ್ಲರ ಸ್ನೇಹಿತ

ಮಗು ತುಂಬ ಮುದ್ದಾಗಿತ್ತು. ಅವನ ನಗುವೇ ಒಂದು ಚೆಂದ. ನೋಡಿದವರೆಲ್ಲ ಇವನು ಮುಂದೆ ಬಹಳ ಖ್ಯಾತನಾಗುತ್ತಾನೆ ಎಂದು ಹೇಳುತ್ತಿದ್ದರು.

ಅವನ ತಾಯಿ ವಿದ್ಯಾವತಿಯದು ಮೊದಲಿನಿಂದಲೂ ದುಃಖದ ಜೀವನವೇ. ಕ್ರಾಂತಿಕಾರಿಯಾದ ಗಂಡ ಯಾವಾಗಲೂ ಮನೆಯಿಂದ ಹೊರಗೇ ಇರುತ್ತಿದ್ದ. ಯಾವಾಗ ಅವನನ್ನು ಜೈಲಿಗೆ ಹಾಕುತ್ತಾರೋ ಎಂಬ ಭೀತಿ ವಿದ್ಯಾವತಿಗೆ ಸದಾ ಕಾಡುತ್ತಿತ್ತು. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದ. ಅವಳ ಮನೆಯ ಒಬ್ಬರಲ್ಲ ಒಬ್ಬರು ಜೈಲಿನಲ್ಲಿ ಇದ್ದೇ ಇರುತ್ತಿದ್ದರು. ಮನೆಯ ಉಸ್ತುವಾರಿಯನ್ನು ವಿದ್ಯಾವತಿಯೇ ನೋಡಿಕೊಳ್ಳಬೇಕಾಗುತ್ತಿತ್ತು. ಇಂಥ ಆತಂಕ ತುಂಬಿದ ಸಮಯದಲ್ಲಿ ಅವಳಿಗೆ ಮಕ್ಕಳೇ ಸಮಾಧಾನ ಹೇಳುತ್ತಿದ್ದರು. ಬುದ್ಧಿವಂತರಾಗಿ, ಧೈರ್ಯವಂತರಾಗಿ ಬೆಳೆಯುತ್ತಿದ್ದ ಮಕ್ಕಳನ್ನು ನೋಡಿಕೊಂಡು ಆಕೆ ತನ್ನ ಕಷ್ಟಗಳನ್ನು ಮರೆಯುತ್ತಿದ್ದಳು. ಭಗತ್‌ಸಿಂಗ್‌ಅವಳ ಕಣ್ಮಣಿಯಾಗಿ ಬೆಳೆಯತೊಡಗಿದ.

ಭಗತ್‌ಸಿಂಗನನ್ನು ಪ್ರಾಥಮಿಕ ಶಾಲೆಗೆ ಸೇರಿಸಿದರು. ವಿದ್ಯಭ್ಯಾಸದಲ್ಲಿ ಅವನಿಗೆ ಮೊದಲಿನಿಂದಲೂ ಆಸಕ್ತಿ. ಪಾಠದಲ್ಲಿ ಅವನೇ ಮುಂದು. ಅಕ್ಷರಗಳನ್ನು ಗುಂಡಗೆ ಬರೆಯುತ್ತಿದ್ದ. ಉಪಾಧ್ಯಾಯರ ಅಚ್ಚುಮೆಚ್ಚಿನ ಶಿಷ್ಯ ಅವನು. ಜೊತೆ ಹುಡಗರಿಗೆಲ್ಲ ಅವನ ಮೆಲೆ ತುಂಬ ಪ್ರೀತಿ, ಅವನೇ ಅವರ ನಾಯಕ. ದೊಡ್ಡ ಹುಡುಗರು ನಿತ್ಯ ಭಗತ್‌ಸಿಂಗನನ್ನು ಭುಜದ ಮೆಲೆ ಕೂಡಿಕೊಂಡು ಮನೆಯಿಂದ ಶಾಲೆಗೆ, ಶಾಲೆಯಿಂದ ಮನೆಗೆ ಕರೆದೊಯ್ಯುತ್ತಿದ್ದರು. ಮುಂದೆ ಕ್ರಾಂತಿಕಾರಿಗಳಿಗೆ ಮುಖಂಡನಾಗುವ ಸೂಚನೆ ಭಗತ್‌ಸಿಂಗನ ಬಾಲ್ಯದಲ್ಲಿಯೇ ಕಾಣುತ್ತಿತ್ತು.

ಭಗತ್‌ಸಿಂಗ್‌ಎಲ್ಲರನ್ನೂ ಸ್ನೇಹಿತರಂತೆ ಕಾಣುತ್ತಿದ್ದ. ಜೊತೆ ಹುಡುಗರಿರಲಿ, ಊರಿನಲ್ಲಿ ಎಲ್ಲರನ್ನೂ ತನ್ನ ಸ್ನೇಹಿತರಂತೆಯೇ ಕಾಣುತ್ತಿದ್ದ. ಬೀದಿ ಕಸಗುಡಿಸುವವರೂ ಅವನ ಸ್ನೇಹಿತರೇ. ಗಾಡಿ ಹೊಡೆಯುವವರೂ ಅವನ ಸ್ನೇಹಿತರೇ. ಕೂಲಿ ಮಾಡುವವರೂ ಅವನ ಸ್ನೇಹಿತರೆ.

ಒಂದು ಸಲ ಭಗತ್‌ಸಿಂಗನಿಗೆ ಬಟ್ಟೆ ಹೊಲಿಯಲು ಹಾಕಿದ್ದರು. ಮುದುಕ ದರ್ಜಿ ಹೊಲಿದು ಸಿದ್ಧಪಡಿಸಿದ ಬಟ್ಟೆಗಳನ್ನು ಮನೆಗೆ ತಂದುಕೊಟ್ಟು ಹೋದ. ತಾಯಿ ವಿದ್ಯಾವತಿ ಭಗತ್‌ಸಿಂಗನನ್ನು, “ಯಾರು ಬಟ್ಟೆ ತಂದು ಕೊಟ್ಟವರು?” ಎಂದು ಕೇಳಿದಳು.

“ನನ್ನ ಸ್ನೇಹಿತ” ಎಂದು ಭಗತ್‌ಸಿಂಗ್‌.

“ಏನು, ದರ್ಜಿಯೂ ನಿನ್ನ ಸ್ನೇಹಿತನೆ?” ಎಂದು ಬೆರಗಗಿ ಕೇಳಿದಳು ವಿದ್ಯಾವತಿ.

“ಹೌದು, ಊರಿನಲ್ಲಿರುವ ಎಲ್ಲರೂ ನನ್ನ ಸ್ನೇಹಿತರೇ.” ಎಂದ ಭಗತ್‌ಸಿಂಗ್‌.

ಜನಗಳ ಹೃದಯವನ್ನು ಸ್ನೇಹದಿಂದ ಗೆಲ್ಲುವ ಗುಣ ಭಗತ್‌ಸಿಂಗ್‌ನಲ್ಲಿ ಹೀಗೆ ಬಾಲ್ಯದಿಂದಲೇ ಬೆಳೆದು ಬಂತು.

ಸಿಂಹದ ಮರಿ

ಭಗತ್‌ಸಿಂಗನಿಗೆ ಇಬ್ಬರು ಚಿಕ್ಕಪ್ಪಂದಿರು. ಅವರಲ್ಲಿ ಸ್ವರ್ಣಸಿಂಗನನ್ನು ಇಂಗ್ಲೀಷರು ಮತ್ತೆ ಸೆರೆಯಲ್ಲಿಟ್ಟಿದ್ದರು. ಸೆರೆಮನೆಯಲ್ಲಿ ಜೀವನ ಆತನಿಗೆ ಬಹು ಕಷ್ಟವಾಗಿ ಕಾಯಿಲೆಬಿದ್ದನು. ಬಿಡುಗಡೆಯಾದ ನಂತರವೂ ಕಾಯಿಲೆ ಇದ್ದು ತಿರಿಕೊಂಡನು. ಅಜಿತ್‌ಸಿಂಗನು ಸೆರೆಯಿಂದ ಹೊರಕ್ಕೆ ಬಂದವನು ದೇಶವನ್ನೇ ಬಿಟ್ಟು ಹೊರಟಹೋದ.  ಭಗತ್‌ಸಿಂಗನ ಇಬ್ಬರು ಚಿಕ್ಕಮ್ಮಂದಿರೂ ತಮ್ಮ ಯಜಮಾನರಿಗೆ ಒದಗಿದ ಕಷ್ಟವನ್ನು ನೆನೆದು ನೆನೆದು ಗೋಳಿಡುತ್ತಿದ್ದರು. ಅದನ್ನು ಕಂಡು ಭಗತ್‌ಸಿಂಗ್‌”ಅಳ್ಬೇಡಾ ಚಿಕ್ಕಮ್ಮ, ನಾನು ದೊಡ್ಡವನಾದ ಮೇಲೆ ಇಂಗ್ಲೀಷರನ್ನು ಓಡಿಸಿ ಚಿಕ್ಕಪ್ಪನ ಹಿಂದಕ್ಕೆ ಕರೆದುಕೊಂಡು ಬರ್ತೀನಿ. ಚಿಕ್ಕಪ್ಪನಿಗೆ ಕಾಯಿಲೆ ಬರೋ ಹಾಗೆ ಮಾಡಿದ ಇಂಗ್ಲೀಷರನ್ನು ಓಡಿಸಿ ಸೇಡು ತೀರಿಸಿಕೊಳ್ತೀನಿ” ಎಂದು ಎದೆ ಉಬ್ಬಿಸಿ ಹೇಳುತ್ತಿದ್ದ. ಪುಟ್ಟ ಹುಡುಗನ ಈ ಶೌರ್ಯದ ಮಾತುಗಳನ್ನು ಕೇಳಿ ಅಳುತ್ತಿದ್ದವರಿಗೆ ಥಟ್ಟನೆ ನಗು ಬಂದುಬಿಡುತ್ತಿತ್ತು. ಆ ಗಳಿಗೆಯಲ್ಲಾದರೂ ಅವರ ದುಃಖ ಮರೆಯಾಗುತ್ತಿತ್ತು.  ಮುಂದುವರೆಯುವುದು…….