‘ಬೇತಾಳ’ದ ಜೊತೆ ಹೊರಟ ಕಸ್ತೂರಿ ಜಗನ್ನಾಥ್

ಹಾರರ್ ಕಾಮಿಡಿ ಕಥಾಹಂದರ ಹೊಂದಿರೋ ಬೇತಾಳ ಎಂಬ ಹೆಸರಿನ ಚಿತ್ರವೊಂದು ತೆರೆಗೆ ಬರಲು ಸಿದ್ದವಾಗುತ್ತಿದೆ.
ಕಸ್ತೂರಿ ಜಗನ್ನಾಥ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಹೆಸರು ಬೇತಾಳ. ನಿರ್ದೇಶಕ ಕಸ್ತೂರಿ ಜಗನ್ನಾಥ ಈ ಹಿಂದೆ ಸಮಾಗಮ ಹಾಗೂ ದೇವಯಾನಿ ಎಂಬ ಚಿತ್ರಗಳನ್ನು ನಿರ್ದೇಶಿಸಿದ್ದರು. ಇದು ಮೂರನೇ ಚಿತ್ರ. ನಿರ್ದೇಶಕರೇ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಚಿತ್ರದ ನಾಯಕ ಶಿವು ಒಬ್ಬ ಸಾಪ್ಟ್‍ವೇರ್ ಎಂಜಿನಿಯರ್, ತನ್ನ ಮನೆಯಲ್ಲಿ ಆಗಾಗ ಕೆಟ್ಟ ಕನಸುಗಳು ಬೀಳುತ್ತಿದ್ದವೆಂದು ಆತ ಮನೆ ಬದಲಿಸಲು ಮುಂದಾಗುತ್ತಾನೆ. ಆ ಹುಡುಕಾಟದಲ್ಲಿ ಆತನಿಗೆ ಕೊನೆಗೂ ಒಂದು ಮನೆ ಸಿಗುತ್ತದೆ. ಆ ಮನೆಗ ಬಂದ ನಂತರ ಅಲ್ಲೊಂದು ದೆವ್ವ ಇರುವುದು ಗೊತ್ತಾಗುತ್ತದೆ. ಆ ದೆವ್ವಕ್ಕೆ ಒಂದು ಆಸೆ ಇರುತ್ತದೆ, ಅದನ್ನು ಪೂರೈಸಿದರೆ ತಾನು ಮನೆ ಬಿಟ್ಟು ಹೋಗುವುದಾಗಿ ಶಿವುಗೆ ತಿಳಿಸುತ್ತದೆ. ಶಿವು ಅದರ ಆಸೆ ಪೂರೈಸಿದನೇ ಇಲ್ಲವೇ ಎನ್ನುವುದೇ ಬೇತಾಳ ಚಿತ್ರದ ಕಥಾನಕ.

ನಾಯಕ ದೆವ್ವದ ಆಸೆ ಪೂರೈಸಲು ಏನೆಲ್ಲಾ ಕಸರತ್ತು ಮಾಡಿದ ಎಂಬುದನ್ನು ಹಾಸ್ಯಮಿಶ್ರಿತವಾಗಿ ಹೇಳುವ ಪ್ರಯತ್ನವನ್ನು ನಿರ್ದೇಶಕರು ಮಾಡಿದ್ದಾರೆ. ಯುವನಟ ಸ್ಮೈಲ್ ಶಿವು ಈ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡರೆ, ಮತ್ತೊಬ್ಬ ನಟ ಅನಿಕ್ ಸೆಕೆಂಡ್ ಹೀರೋ ಆಗಿದ್ದಾರೆ. ಬಿಗ್‍ಬಾಸ್ ಖ್ಯಾತಿಯ ಸೋನು ಪಾಟೀಲ್ ಹಾಗೂ ಕಾವ್ಯಗೌಡ ಇಬ್ಬರು ನಾಯಕಿಯರಾಗಿ ಅಭಿನಯಿಸಿದ್ದಾರೆ.

ಈಗಾಗಲೇ ತನ್ನ ಮಾತಿನಭಾಗದ ಚಿತ್ರೀಕರಣ ಮುಗಿಸಿಕೊಂಡು ಹಾಡುಗಳ ಶೂಟಿಂಗ್‍ಗೆ ಸಿದ್ದವಾಗಿರುವ ಈ ಚಿತ್ರದ ಪ್ರಥಮ ಪತ್ರಿಕಾಗೋಷ್ಟಿ ಇತ್ತೀಚೆಗೆ ಎಸ್.ಆರ್.ವಿ. ಥಿಯೇಟರಿನಲ್ಲಿ ನೆರವೇರಿತು.
ಚಿತ್ರದ ಕುರಿತಂತೆ ನಾಯಕ ಹಾಗೂ ನಿರ್ಮಾಪಕ ಸ್ಮೈಲ್ ಶಿವು ಮಾತನಾಡಿ ಸ್ನೇಹಿತರೆಲ್ಲ ಸೇರಿ ಭೂಮಿಕ ಸಿನಿ ಕ್ರಿಯೇಶನ್ಸ್ ಮೂಲಕ ಈ ಚಿತ್ರವನ್ನು ನಿರ್ಮಿಸಿದ್ದೇವೆ. ಈ ಮೊದಲು ನಾನು ಒಂದಷ್ಟು ಚಿತ್ರಗಳಿಗೆ ಪೈನಾನ್ಸ್ ಕೂಡ ಮಾಡಿದ್ದೆ. ಹಾರರ್ ಸಬ್ಜೆಕ್ಟ್ ಆದರೂ ಅದನ್ನು ಕಾಮಿಡಿಯಾಗಿ ಹೇಳಲು ಪ್ರಯತ್ನಿಸಿದ್ದೇವೆ. ಚಿತ್ರದಲ್ಲಿ ನಾಲ್ಕು ಸಾಹಸ ದೃಷ್ಯಗಳಿದ್ದು, ಪ್ರತಿ ಸೀನ್ ಕುತೂಹಲ ಕೆರಳಿಸುತ್ತ ಸಾಗುತ್ತದೆ. ಬೆಂಗಳೂರು ಸುತ್ತಮುತ್ತ ಟಾಕಿ ಫೋರ್ಷನ್ ಚಿತ್ರೀಕರಣ ನಡೆಸಿದ್ದೇವೆ ಎಂದು ಹೇಳಿದರು.

BETHALA KANNADA MOVIE

ನಿರ್ದೇಶಕ ಕಸ್ತೂರಿ ಜಗನ್ನಾಥ ಮಾತನಾಡಿ ಬೇತಾಳ ಒಂದು ಕಾಮಿಡಿ ಹಾರರ್ ಕಂಟೆಟ್ ಹೊಂದಿರೋ ಚಿತ್ರ. ಇದರಲ್ಲಿ ಒಟ್ಟು ಮೂರು ಹಾಡುಗಳಿದ್ದು, ರಾಜ್‍ಕಿಶೋರ್ ಸಂಗೀತ ನೀಡಿದ್ದಾರೆ. ಮಾತಿನ ಭಾಗದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಹಾಡುಗಳ ಚಿತ್ರೀಕರಣ ಮಾತ್ರವೇ ಬಾಕಿಯಿದೆ. ಚಿಕ್ಕಮಗಳೂರು, ಸಕಲೇಶಪುರದಲ್ಲಿ ಹಾಡುಗಳನ್ನು ಶೂಟ್ ಮಾಡುವ ಪ್ಲಾನ್ ಇದೆ. ಸದ್ಯ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೀತಿದೆ ಎಂದು ಹೇಳಿದರು.
ಮತ್ತೊಬ್ಬ ನಟ ಅನಿಕ್ ಮಾತನಾಡಿ ಈ ಚಿತ್ರದಲ್ಲಿ ನನ್ನ ಪಾತ್ರಕ್ಕೆ 2 ಷೇಡ್ಸ್ ಇದೆ. ಒದರಲ್ಲಿ ಲವರ್‍ಬಾಯ್ ಆಗಿ ಕಾಣಿಸಿದರೆ, ಮತ್ತೊಂದರಲ್ಲಿ ಕ್ವಾಟ್ಲೆ ಕೊಡುವ ದೆವ್ವವಾಗಿ ಕಾಣಿಸಿಕೊಂಡಿದ್ದೇನೆ ಎಂದು ಹೇಳಿದರು. ನಟಿ ಕಾವ್ಯಗೌಡ ಅನಿಕ್ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಮತ್ತೊಬ್ಬ ನಟಿ ಸೋನು ಪಾಟೀಲ್ ಬಬ್ಲಿ ಗರ್ಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಸಹ ನಿರ್ಮಾಪಕ ಸ್ಟೀಬರ್ಡ್ ಕುಮಾರ್ ಮಾತನಾಡಿ ಈ ಹಿಂದೆ ಮಲಯಾಳಂ ಚಿತ್ರಗಳನ್ನು ಮಾಡಿದ್ದೇನೆ ಕನ್ನಡದಲ್ಲಿ ಮೊದಲ ಚಿತ್ರವಿದು ಎಂದು ಹೇಳಿದರು.