‘ಭಗವಾನ್‌ ಶ್ರೀ ಕೃಷ್ಣಪರಮಾತ್ಮʼನಿಗೆ ಚಾಲನೆ ಕೊಟ್ಟರು ನಟ ದರ್ಶನ್

ರಾಜರಾಜೇಶ್ವರಿನಗರದ ಷಣ್ಮುಖ ದೇವಸ್ಥಾನದಲ್ಲಿ ನಡೆದ ಸರಳ ಪೂಜೆಯ ಮೂಲಕ ಹೊಸ ಸಿನಿಮಾವೊಂದು ಆರಂಭವಾಗಿದೆ. ಚಿತ್ರದ ಹೆಸರು ʻಭಗವಾನ್‌ ಶ್ರೀ ಕೃಷ್ಣಪರಮಾತ್ಮʼ. ನಾಯಕನಟ ದರ್ಶನ್ ಮೊದಲ ದೃಶ್ಯಕ್ಕೆ ಕ್ಲಾಪ್‌ ಮಾಡಿ ತಂಡಕ್ಕೆ ಶುಭ ಕೋರಿದ್ಧಾರೆ.

ʻಭಗವಾನ್‌ ಶ್ರೀ ಕೃಷ್ಣಪರಮಾತ್ಮʼ ಚಿತ್ರವನ್ನು ಪ್ರಸಾದ್‌ ಬಿ.ಎನ್.‌ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದ ಮುಖಾಂತರ ಧ್ರುವನ್ ನಾಯಕನಟನಾಗಿ ಚಿತ್ರರಂಗಕ್ಕೆ ಪರಿಚಯಗೊಳ್ಳುತ್ತಿದ್ದಾರೆ. ಧ್ರುವನ್‌ ಮತ್ತು ನಿರ್ದೇಶಕ ಪ್ರಸಾದ್‌ ಬಹುಕಾಲದ ಗೆಳೆಯರು. ಎಲ್ಲರೂ ಇಷ್ಟಪಡುವಂಥಾ ಸಿನಿಮಾವೊಂದನ್ನು ಮಾಡಬೇಕು ಅಂತಾ ಯೋಚಿಸುವ ಹೊತ್ತಿಗೇ ಅದ್ಭುತವಾದ ಕಥೆಯ ಎಳೆ ಸಿಕ್ಕಿತಂತೆ. ಜೊತೆಗೆ ಸಿನಿಮಾವನ್ನು ಅಪಾರವಾಗಿ ಪ್ರೀತಿಸುವ ನಿರ್ಮಾಪಕರೂ ದೊರೆತರಂತೆ. ಈ ಮೂಲಕ ಶುರುವಾದ ಸಿನಿಮಾ ʻಭಗವಾನ್‌ ಶ್ರೀ ಕೃಷ್ಣಪರಮಾತ್ಮʼ. ಭರತ್ ವಿಷ್ಣು ಕಾಂತ್ ನಿರ್ಮಾಣದ ಈ ಚಿತ್ರಕ್ಕೆ ಅರ್ಜುನ್‌ ಜನ್ಯ ಸಂಗೀತ ನೀಡುತ್ತಿದ್ದಾರೆ. ಅದ್ವಿಕ್ ಆರ್ಯ ಕೆ. ಆರ್ ಛಾಯಾಗ್ರಹಣವಿದೆ. ಅದಿತಿ ಪ್ರಭುದೇವ ಧ್ರುವನ್‌ ಜೊತೆಗೆ ಜೋಡಿಯಾಗಿ ನಟಿಸುತ್ತಿದ್ದಾರೆ. ದತ್ತಣ್ಣ ಅವರಿಗೆ ಈ ಚಿತ್ರದಲ್ಲಿ ಪ್ರಮುಖವಾದ ಪಾತ್ರವೊಂದಿದೆ. ಚಿಕ್ಕಮಗಳೂರು, ಬೆಂಗಳೂರು, ಚೆನ್ನೈ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ. ನವೆಂಬರ್‌ ಕೊನೆಯ ಹೊತ್ತಿಗೆ ಶೂಟಿಂಗ್‌ ಆರಂಭಿಸಿ, ಎರಡು ಹಂತಗಳಲ್ಲಿ ಸಿನಿಮಾವನ್ನು ಪೂರ್ಣಗೊಳಿಸುವುದು ಚಿತ್ರತಂಡದ ಸದ್ಯದ ಯೋಜನೆ.

ʻಭಗವಾನ್‌ ಶ್ರೀ ಕೃಷ್ಣಪರಮಾತ್ಮʼ ಚಿತ್ರದೊಂದಿಗೆ ಡಾ ರಾಜ್‌ಕುಮಾರ್ ಅವರ ಕುಟುಂಬದ ಮತ್ತೋರ್ವ ಯುವಕ ನಾಯಕನಾಗಿ ಪಾದಾರ್ಪಣೆ ಮಾಡಿದಂತಾಗಿದೆ. ಪಾರ್ವತಮ್ಮ ಅವರ ಕಿರಿಯ ಸಹೋದರ ಶ್ರೀನಿವಾಸ ರಾಜು ಪುತ್ರನಾದ ಧ್ರುವನ್ ಹೀರೋ ಆಗಲು ನಟನೆ ಸೇರಿದಂತೆ ನಾನಾ ತರಬೇತಿ ಪಡೆದು ಪರಿಪೂರ್ಣರಾದ ನಂತರವೇ ಈ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ವರ್ಷಾಂತರಗಳ ಹಿಂದೆಯೇ ಚೆನೈಗೆ ತೆರಳಿದ ಧ್ರುವನ್ ಅಲ್ಲಿಯೇ ನಟನೆಯ ವಿವಿಧ ಹಂತಗಳ ತರಬೇತಿ ಕಲಿತಿದ್ದಾರೆ.

ಆ ನಂತರ ಪಾಂಡಿಯನ್ ಮಾಸ್ಟರ್ ಗರಡಿಯಲ್ಲಿ ವರ್ಷಾಂತರಗಳ ಕಾಲ ಸಾಹಸದ ಪಟ್ಟುಗಳನ್ನು ಕರಗತ ಮಾಡಿಕೊಂಡು, ಕಲೈ ಮಾಸ್ಟರ್ ಬಳಿ ನೃತ್ಯಾಭ್ಯಾಸವನ್ನೂ ಮುಗಿಸಿಕೊಂಡಿದ್ದಾರೆ. ನಟನಾಗಬೇಕೆಂಬ ಆಸೆ ಇದ್ದರೂ ಚಿತ್ರ ರಂಗದ ಬೇರೆ ಬೇರೆ ವಿಭಾಗಗಳಲ್ಲಿ ಅತೀವ ಆಸಕ್ತಿ ಇರುವ ಧ್ರುವನ್ ತಾರಕ್ ಮತ್ತು ಐರಾವತ ಚಿತ್ರಗಳಲ್ಲಿಯೂ ನಿರ್ದೇಶನ ವಿಭಾಗದಲ್ಲಿ ಕಾರ್ಯ ನಿರ್ವಹಿಸಿದ್ದವರು. ಪ್ರರತಿಯೊಂದರಲ್ಲಿಯೂ ಪರ್ಫೆಕ್ಟ್ ಆಗಿರಬೇಕೆಂದು ಬಯಸುವ ಧ್ರುವನ್ ತೀರಾ ಇಷ್ಟಪಟ್ಟು ಈ ಕಥೆಯನ್ನು ಒಪ್ಪಿಕೊಂಡಿದ್ದಾರಂತೆ.

ಶ್ರೀ ಕೃಷ್ಣ ಜನ್ಮಾಷ್ಠಮಿಯಂದು ದರ್ಶನ್‌ ಅವರ ಸಮ್ಮುಖದಲ್ಲಿ ಶೀರ್ಷಿಕೆ ಅನಾವರಣಗೊಂಡಿತ್ತು. ಈಗ ಮುಹೂರ್ತಕ್ಕೂ ದರ್ಶನ್‌ ಅವರೇ ಬಂದು ತಂಡವನನ್ನು ಬೆಂಬಲಿಸಿದ್ದಾರೆ.