ಡಬ್ಬಿಂಗ್ ಮುಗಿಸಿದ ಅರ್ಜುನ್ ಗೌಡ

ಅದ್ದೂರಿ ಚಿತ್ರಗಳ ನಿರ್ಮಾಣಕ್ಕೆ ಹೆಸರಾದವರು ನಿರ್ಮಾಪಕ ರಾಮು. ರಾಮು ಫಿಲಂಸ್ ಲಾಂಛನದಲ್ಲಿ ರಾಮು ಅವರು ನಿರ್ಮಿಸುತ್ತಿರುವ ಮತ್ತೊಂದು ಅಪಾರ ವೆಚ್ಚದ, ಅದ್ದೂರಿ ಸಿನಿಮಾ ಅರ್ಜುನ್ ಗೌಡ. ಡೈನಾಮಿಕ್ ಪ್ರಿನ್ಸ್‌ ಪ್ರಜ್ವಲ್ ದೇವರಾಜ್ ನಾಯಕರಾಗಿ ನಟಿಸಿರುವ ಈ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಡಬ್ಬಿಂಗ್ ಸಹ ಮುಕ್ತಾಯವಾಗಿದೆ.
ಲಕ್ಕಿ ಶಂಕರ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಏಳು ಸಾಹಸ ಸನ್ನಿವೇಶಗಳಿದೆ.

ಮಾಸ್ ಮಾದ ಅವರ ಸಾಹಸ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಆಕ್ಷನ್ ಸನ್ನಿವೇಶಗಳು. ನೋಡುಗರ ಮೈ ಜುಂ ಎನಿಸುತ್ತದೆ. ಈಗಾಗಲೇ ಈ ಚಿತ್ರದ ಆಕ್ಷನ್ ಟ್ರೇಲರ್ ಬಿಡುಗಡೆಯಾಗಿದ್ದು, ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಅನ್ಯ ಭಾಷೆಯ ವಿತರಕರು ಹಾಗೂ ನಿರ್ಮಾಪಕರಿಂದಲೂ ಆಕ್ಷನ್ ಟ್ರೇಲರ್ ಗೆ ಪ್ರಶಂಸೆ ಸಿಕ್ಕಿರುವುದು ಸಂತಸದ ಸಂಗತಿ. ಸದ್ಯದಲ್ಲೇ ಮೇಕಿಂಗ್ ಟ್ರೇಲರ್ ಬಿಡುಗಡೆಮಾಡುವುದಾಗಿ ನಿರ್ದೇಶಕರು ತಿಳಿಸಿದ್ದಾರೆ. ಕೊರೋನ ಹಾವಳಿ ಇಲ್ಲದೇ ಹೋಗಿದ್ದರೆ, ಈ ಚಿತ್ರ ಏಪ್ರಿಲ್ ನಲ್ಲಿ ಬಿಡುಗಡೆಯಾಗಬೇಕಿತ್ತು. ಅಭಿಮಾನಿಗಳು ಕಾತುರದಿಂದ ಕಾಯುತ್ತಿರುವ ಈ ಸಿನಿಮಾವನ್ನು ನಿಗದಿತ ಸಮಯ ನೋಡಿಕೊಂಡು ಬಿಡುಗಡೆ ಮಾಡುವ ಆಶಯ ನಿರ್ಮಾಪಕರದು.

ಪ್ರಜ್ವಲ್ ದೇವರಾಜ್ ಅವರಿಗೆ ನಾಯಕಿಯಾಗಿ ಪ್ರಿಯಾಂಕ ತಿಮ್ಮೇಶ್ ಅಭಿನಯಿಸಿದ್ದಾರೆ. ಬಾಲಿವುಡ್ ನ ರಾಹುಲ್ ದೇವ್, ಸ್ಪರ್ಶ ರೇಖ, ಸಾಧುಕೋಕಿಲ, ಕಡ್ಡಿಪುಡಿ ಚಂದ್ರು, ದೀಪಕ್ ಶೆಟ್ಟಿ, ದಿನೇಶ್ ಮಂಗಳೂರು, ಶೋಭಿತ್, ಜೀವನ್, ಹನುಮಂತೇ ಗೌಡ, ಮೋಹನ್ ಜುನೇಜ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಕವಿರಾಜ್, ರಾಘವೇಂದ್ರ ಕಾಮತ್, ಶಂಕರ್ ಅವರು ಚಿತ್ರದ ಹಾಡುಗಳನ್ನು ಬರೆದಿದ್ದು, ಧರ್ಮವಿಶ್ ಸಂಗೀತ ನೀಡಿದ್ದಾರೆ. ಜೈ ಆನಂದ್ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನ , ಈಶ್ವರಿ ಕುಮಾರ್ ಕಲಾ ನಿರ್ದೇಶನ ಹಾಗೂ ಮೋಹನ್, ಕಂಬಿ‌ರಾಜು ಅವರ ನೃತ್ಯ ನಿರ್ದೇಶನ ಅರ್ಜುನ್ ಗೌಡ ಚಿತ್ರಕ್ಕಿದೆ.