ಆರಂಭವಾಯಿತು “ಅಮರ ಪ್ರೇಮಿ ಅರುಣ್” ಚಿತ್ರ.

ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕರಿಂದ ಶೀರ್ಷಿಕೆ ಅನಾವರಣ.

ಒಲವು ಸಿನಿಮಾ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ “ಅಮರ ಪ್ರೇಮಿ ಅರುಣ್” ಚಿತ್ರದ ಮುಹೂರ್ತ ಸಮಾರಂಭ ಶುಕ್ರವಾರ ಬೆಳಗ್ಗಿನ‌ ಶುಭಲಗ್ನದಲ್ಲಿ ಧರ್ಮಗಿರಿ ಶ್ರೀಮಂಜುನಾಥನ ದಿವ್ಯ ಸನ್ನಿಧಿಯಲ್ಲಿ ನೆರವೇರಿತು.ದೇವರ ಮೇಲೆ ಸೆರೆಹಿಡಿಯಲಾದ ಮೊದಲ ಸನ್ನಿವೇಶಕ್ಕೆ ಹಿರಿಯ ನಿರ್ದೇಶಕ ಗಿರೀಶ್ ಕಾಸರವಳ್ಳಿ ಆರಂಭ ಫಲಕ ತೋರಿದರು. ನಿರ್ದೇಶಕ ಸಾಹಿತಿ ಯೋಗರಾಜ್ ಭಟ್ ಕ್ಯಾಮೆರಾ ಚಾಲನೆ ಮಾಡಿದರು.

ಕನ್ನಡ ಚಿತ್ರರಂಗ ಕಂಡಿರುವ ಹೆಸರಾಂತ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ, ಬಿ.ಸುರೇಶ್, ಎಂ.ಕೆ.ಸುಬ್ರಹ್ಮಣ್ಯ, ಯೋಗರಾಜ್ ಭಟ್, ಅಭಯಸಿಂಹ ಹಾಗೂ ಮಹೇಶ್ ರಾವ್ ಈ ಆರು ಜನ ನಿರ್ದೇಶಕರು ಸೇರಿ ಈ ಚಿತ್ರದ ಶೀರ್ಷಿಕೆ ಅನಾವರಣ ಮಾಡಿದರು.ಅತಿಥಿಗಳ ಪೈಕಿ ಮೊದಲು ಮಾತನಾಡಿದ್ದ ಬಿ.ಸುರೇಶ್, ಪ್ರವೀಣ್ ನಮ್ಮ ಬಳಿಯು ಕೆಲಸ‌ ಮಾಡಿರುವ ಹುಡುಗ.‌ ನಮ್ಮ ಸಕ್ಕರೆ ಸಿನಿಮಾಗೆ ಸಹ ನಿರ್ದೇಶನ ಮಾಡಿದ್ದಾರೆ. ಉತ್ತಮ ಕಥೆಗಾರನಾಗಿರುವ ಈತ ಹಲವು ಮೆಟ್ಟಿಲುಗಳನ್ನು ದಾಟಿ ನಿರ್ದೇಶಕನಾಗುತ್ತಿದ್ದಾನೆ, ಶುಭವಾಗಲಿ ಎಂದರು.

ಗಿರೀಶ್ ಕಾಸರವಳ್ಳಿ ಅವರು ಸಹ ಪ್ರವೀಣ್ ಕೂರ್ಮಾವತಾರ ಚಿತ್ರದಲ್ಲಿ ಅವರೊಂದಿಗೆ ಸಹ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದನ್ನು ಹೇಳುತ್ತಾ, ನಾನು ಹತ್ತು ವರ್ಷದಿಂದ ಕಂಡಿರುವುದು ಪ್ರವೀಣ್ ಅವರಿಗೆ ಕೆಲಸದಲ್ಲಿರುವ ಶ್ರದ್ಧೆ. ಆ ಶ್ರದ್ಧೆ ಅವರನ್ನು ಎತ್ತರಕ್ಕೆ ಕೊಂಡೊಯ್ಯಲಿ ಎಂದರು.ಈ ಸಮಾರಂಭ ಗುರು ವಂದನಾ ಕಾರ್ಯಕ್ರಮ ಇದ್ದಂತೆ ಇದೆ ಎಂದು ಮಾತು ಆರಂಭಿಸಿದ ಯೋಗರಾಜ್ ಭಟ್ ಅವರು ಇಲ್ಲಿರುವ ಎಲ್ಲಾ ನಿರ್ದೇಶಕರ ಬಳಿ ನಾನು ಹಾಗೂ ಪ್ರವೀಣ ಕೆಲಸ‌ ಮಾಡಿದ್ದೇವೆ. ಇಂದು ಅವರೊಟ್ಟಿಗೆ ಕುಳಿತಿರುವುದು ನಮ್ಮ ಸೌಭಾಗ್ಯ. ಮೊದಲ ಚಿತ್ರ ನಿರ್ದೇಶಿಸುತ್ತಿರುವ ಪ್ರವೀಣನಿಗೆ ಒಳ್ಳೆಯದಾಗಲಿ ಎಂದರು.

ʼಇತರರೊಂದಿಗೆ ಕತೆಗಳು ಮತ್ತು ಸಿನಿಮಾಗಳನ್ನು ಚರ್ಚಿಸುವ ಮತ್ತು ಅನಿಸಿಕೆಗಳನ್ನು ಸ್ವೀಕರಿಸುವ ಗುಣ ಚೆನ್ನಾಗಿದೆ ಪ್ರವೀಣನಿಗೆ. ಅವನ ಸಾಹಿತ್ಯದ ಅಭಿರುಚಿ ಇರುವ ಅವನು ಒಳ್ಳೊಳ್ಳೆಯ ಸಿನಿಮಾಗಳನ್ನು ಕೊಡಲಿ. ತಂಡಕ್ಕೆ ಶುಭವಾಗಲಿʼ ಎಂದರು ಎಂ.ಕೆ.ಸುಬ್ರಹ್ಮಣ್ಯ. ʼಬಿಡುಗಡೆಯಾಗುವ ಎಲ್ಲಾ ಕನ್ನಡ ಸಿನಿಮಾಗಳನ್ನು ನೋಡುವ ಮತ್ತು ಅವುಗಳ ಬಗ್ಗೆ ಚೆನ್ನಾಗಿ ಮಾತಾಡುವ ಪ್ರವೀಣ ಅವರು ಬರೆಯುವ ಕತೆಗಳು ಗಟ್ಟಿ ಕತೆಗಳು ಎಂದರು ಅಭಯ ಸಿಂಹ.ಪ್ರವೀಣ್ ಅವರ ಜೊತೆಗಿನ ತಮ್ಮ ಸಂಬಂಧ ನೆನಪಿಸಿಕೊಳ್ಳುತ್ತಾ, ಚಿತ್ರತಂಡಕ್ಕೆ ನಿರ್ದೇಶಕರೆಲ್ಲರೂ ಶುಭ ಕೋರಿದರು. ಬಂದ ಎಲ್ಲರಿಗೂ ವಂದನೆ ತಿಳಿಸಿ ಮಾತು ಆರಂಭಿಸಿದ್ದ ನಿರ್ದೇಶಕ ಪ್ರವೀಣ್ ಕುಮಾರ್, ಇದು ಬಳ್ಳಾರಿ ಜಿಲ್ಲೆಯಲ್ಲಿ ನಡೆಯುವ ಕಥೆ.‌ ಹಾಗಾಗಿ ನಮ್ಮ ಚಿತ್ರದ ಎಲ್ಲಾ ಕಲಾವಿದರು ಆ ಪ್ರಾಂತೀಯ ಭಾಷೆಯನ್ನು ಅಭ್ಯಾಸ ಮಾಡುತ್ತಿದ್ದಾರೆ.

ಬಳ್ಳಾರಿಯ ಪ್ರಾದೇಶಿಕತೆ ತೋರಿಸುತ್ತಾ, ಪ್ರೇಮಕಥೆ ಹೇಳುವ ಒಂದು ಪ್ರಯತ್ನ. ರೊಮ್ಯಾಂಟಿಕ್ ಕಾಮಿಡಿ ಜಾನರ್‌ನ ಚಿತ್ರ ಅನ್ನಬಹುದು ಎಂದ ಪ್ರವೀಣ್ ಕುಮಾರ್ ಯುಗಾದಿ ಆದ ಮೇಲೆ ಚಿತ್ರೀಕರಣ ಆರಂಭವಾಗಲಿದೆ ಎಂದು ತಿಳಿಸಿದರು.ಪ್ರವೀಣ್ ಕುಮಾರ್ ಕಥೆ ಹೇಳುವ ರೀತಿಯೇ ಬಹಳ ಚೆನ್ನ, ಅವರು ಬಳ್ಳಾರಿಯಲ್ಲೇ ಇಡೀ ಕಥೆ ನಡೆಯುತ್ತದೆ ಎಂದು ಹೇಳದ್ದಾರೆ. ಚಿತ್ರದಲ್ಲಿ ಐದು ಹಾಡುಗಳಿದ್ದು, ಈಗ ಕೆಲಸ ಆರಂಭಿಸಿದ್ದೇನೆ ಎಂದರು ಸಂಗೀತ ನಿರ್ದೇಶಕ ಕಿರಣ್ ರವೀಂದ್ರನಾಥ್. ನಾವು ಒಂದು ಊರಿಂದ ಮತ್ತೊಂದು ಊರಿಗೆ ಹೋಗುವಾಗ ಪಾಸಿಂಗ್ ನಲ್ಲಿ ಬಳ್ಳಾರಿ ನೋಡಿರುತ್ತೇವೆ.‌ ಆದರೆ ಇದರಲ್ಲಿ ನಾವು ನೋಡಿರದ ಬಳ್ಳಾರಿಯನ್ನು ತೋರಿಸುವ ಪ್ರಯತ್ನ ಮಾಡುತ್ತೇನೆ ಎನ್ನುವುದು ಛಾಯಾಗ್ರಾಹಕ ಪ್ರವೀಣ್ ಎಸ್ ಅವರ ಅನಿಸಿಕೆ.

ಈ‌ ಹಿಂದೆ ಕಹಿ ಚಿತ್ರದಲ್ಲಿ ಅಭಿನಯಿಸಿದ್ದ ಹರಿಶರ್ವಾ ಈ ಚಿತ್ರದ ನಾಯಕರಾಗಿ ನಟಿಸುತ್ತಿದ್ದಾರೆ.
ಚಿತ್ರದಲ್ಲಿ ಅಭಿನಯಿಸುತ್ತಿರುವ ಹರಿಶರ್ವಾ, ದೀಪಿಕಾ ಆರಾಧ್ಯ ಹಾಗೂ ಭೂಮಿಕ ರಘು ಕೂಡ ತಮ್ಮ ಪಾತ್ರದ ಕುರಿತು ಪತ್ರಿಕಾಗೋಷ್ಠಿಯಲ್ಲಿ ವಿವರಣೆ ನೀಡಿದರು. ಧರ್ಮಣ್ಣ, ಮಹೇಶ್ ಬಂಗ್, ಸುಶ್ಮಿತಾ ಮುಂತಾದ ಕಲಾವಿದರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಪ್ರವೀಣ್ ಕುಮಾರ್ ಅವರ ಸ್ನೇಹಿತರು ಹಾಗೂ ಸಂಬಂಧಿಕರು ಸೇರಿ ಒಲವು ಸಿನಿಮಾ ಎಂಬ ಪ್ರೊಡಕ್ಷನ್ಸ್ ಮೂಲಕ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.‌ಜಯಂತ ಕಾಯ್ಕಿಣಿ, ಯೋಗರಾಜ್ ಭಟ್ ಈ ಚಿತ್ರದ ಹಾಡುಗಳನ್ನು ಬರೆಯುತ್ತಿದ್ದಾರೆ. ಮಂಡ್ಯ ಮಂಜು ಕಾರ್ಯಕಾರಿ ನಿರ್ಮಾಣ, ನಿರಂಜನ್ ದೇವರಮನೆ ಸಂಕಲನ ಹಾಗೂ ಷಣ್ಮುಖ ಹಿರೆಮಧುರೆ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.