ಲಾಕ್​ಡೌನ್​ ಬಳಿಕ 25 ದಿನಗಳನ್ನು ಪೂರೈಸಿದ ಮೊದಲ ಸಿನಿಮಾ ಆ್ಯಕ್ಟ್ 1978

ಡಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಆ್ಯಕ್ಟ್ 1978 ಸಿನಿಮಾವನ್ನು ದೇವರಾಜ್ ಆರ್ ಬಂಡವಾಳ ಹೂಡಿದ್ದು, ಮಂಸೋರೆ ನಿರ್ದೇಶನ ಮಾಡಿದ್ದಾರೆ.

ಲಾಕ್ಡೌನ್ ಬಳಿಕ ಕನ್ನಡದ ಮೊದಲ ಹೊಸ ಸಿನಿಮಾ ಬಿಡುಗಡೆ ಆಗಿದ್ದು ಮಂಸೋರೆ ನಿರ್ದೇಶನದ ಆ್ಯಕ್ಟ್ 1978. ಇದೀಗ ಆ ಚಿತ್ರದ ರಾಜ್ಯದ ಹಲವೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, 25 ದಿನಗಳನ್ನು ಪೂರ್ಣಗೊಳಿಸಿ ಮುನ್ನುಗ್ಗುತ್ತಿದೆ. ಈ ಖುಷಿಯ ವಿಚಾರಕ್ಕೆ ಇಡೀ ತಂಡ ಮತ್ತೆ ಮಾಧ್ಯಮದ ಮುಂದೆ ಬಂದಿತ್ತು. ಕೊರೊನಾ ಸಮಯದಲ್ಲಿ ಆ 25 ದಿನ ಪೂರೈಸಿದ ಬಗೆಯನ್ನು ಚಿತ್ರತಂಡದವರು ಒಂದೊಂದಾಗಿ ಮಾಹಿತಿ ಹಂಚಿಕೊಂಡರು. ಡಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಆ್ಯಕ್ಟ್ 1978 ಸಿನಿಮಾವನ್ನು ದೇವರಾಜ್ ಆರ್ ಬಂಡವಾಳ ಹೂಡಿದ್ದು, ಮಂಸೋರೆ ನಿರ್ದೇಶನ ಮಾಡಿದ್ದಾರೆ. ಕಳೆದ ನವೆಂಬರ್ 20ರಂದು ರಾಜ್ಯಾದ್ಯಂತ ಬಹುತೇಕ ಮಲ್ಟಿಫ್ಲೆಕ್ಸ್ ಮತ್ತು ಏಕಪರದೆ ಮೇಲೆ ಈ ಸಿನಿಮಾ ಬಿಡುಗಡೆಯಾಗಿತ್ತು. ಕೆಆರ್ಜಿ ಸ್ಟುಡಿಯೋಸ್ ಈ ಚಿತ್ರದ ರಿಲೀಸ್ ಜವಾಬ್ದಾರಿ ವಹಿಸಿಕೊಂಡಿತ್ತು.

ಕೆಆರ್ಜಿ ಸ್ಟುಡಿಯೋಸ್ ಬಗ್ಗೆಯೇ ಮಾತು ಆರಂಭಿಸಿದ ಮಂಸೋರೆ, ‘ಕೆಆರ್ಜಿ ಕನೆಕ್ಟ್ ತುಂಬ ಅನುಕೂಲವಾಯ್ತು, ಬರೀ ಪ್ರಚಾರ ಆಗಬಾರದು, ಅಭಿಯಾನದ ರೀತಿಯಲ್ಲಿ ಮಾಡಬೇಕು ಎಂಬ ನಿಟ್ಟಿನಲ್ಲಿ ಕೆಲಸ ಮಾಡಿದರು. ಯಾವ್ಯಾವ ಚಿತ್ರಮಂದಿರದಲ್ಲಿ ರಿಲೀಸ್ ಮಾಡಿದರೆ ಜನ ಬರ್ತಾರೆ ಎಂಬುದನ್ನು ಅರಿತು ಬಿಡುಗಡೆ ಮಾಡಲಾಯ್ತು. ಒಟ್ಟಾರೆಯಾಗಿ 25 ದಿನ ಪೂರೈಸಿದ ಈ ಗೆಲುವಿಗೆ ಇಡೀ ತಂಡದ ಶ್ರಮವೇ ಕಾರಣ ಎಂದರು.

ನಿರ್ಮಾಪಕ ದೇವರಾಜ್ ಮಾತನಾಡಿ, ಕಮರ್ಷಿಯಲ್ ಹಿಟ್ ಆಗುತ್ತೋ ಬಿಡುತ್ತೋ ಗೊತ್ತಿಲ್ಲ, ನಮ್ಮ ಸಂತೋಷಕ್ಕಾದರೂ ಸಿನಿಮಾ ಮಾಡಿದರಾಯ್ತು ಎಂದು ಈ ಸಿನಿಮಾ ಶುರು ಮಾಡಿದೆವು. ಇದೀಗ ಇವತ್ತು 25ನೇ ದಿನ ಮುಗಿಸಿ ಮುನ್ನುಗ್ಗುತ್ತಿದೆ. ಇದೆಲ್ಲದಕ್ಕಿಂತ ಮುಖ್ಯವಾಗಿ ನಮ್ಮ ಸಿನಿಮಾ ನೋಡಿ ಪಿಡಿಒ ಮಹಿಳೆಯೊಬ್ಬರು ತಮಗಾದ ಅನ್ಯಾಯವನ್ನು ಧೈರ್ಯವಾಗಿ ಹೇಳಿಕೊಂಡಿದ್ದಾರೆ. ಹೀಗಾಗಿ ನಾವು ಅಂದುಕೊಂಡ ಕೆಲಸ ಸಾರ್ಥಕವಾಯ್ತು’ ಎಂದರು. ಅದೇ ರೀತಿ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ ಬಿ. ಸುರೇಶ್ ಸಹ ಮಾತನಾಡಿದರು. 2021ರ ಯುಗಾದಿಯ ಹೊತ್ತಿಗೆ ಸಹಜವಾಗಿ ಬರಬಹುದು ಎನಿಸುತ್ತಿದೆ. ಇಲ್ಲಿಯವರೆಗೂ ಯೋಗರಾಜ್ ಭಟ್ ಬರೆದ ಸೋಪ್ ಹಾಕ್ಕೋಳೋ, ಕೈ ತೊಳ್ಕೋಳ್ಳೋ ಅದೇ ಹಾಡಿನಂತೆ ಮಾಡುವುದಾಗಿತ್ತು. ಇದೀಗ ಅದನ್ನು ದಾಟಿ ಮುಂದಡಿ ಇಟ್ಟಿದ್ದೇವೆ. ಅಪರೂಪದ ಕಥೆ ಬರೆದು, ಎಲ್ಲರ ಮನಸ್ಸಿಗೆ ತಾಗುವ ಸಿನಿಮಾ ಮಾಡಿದ್ದೇವೆ. ನನ್ನ ತಾಯಿಗೂ ಈ ಸಿನಿಮಾ ತೋರಿಸಿ, ಅವರೂ ಅಳುತ್ತ ಬಂದರು.. ಅಲ್ಲಿಗೆ ನಮ್ಮ ಸಾರ್ಥಕ ಅನಿಸಿತು ಎಂದರು ಸುರೇಶ್.

ನನಗೆ ಈ ವ್ಯವಹಾರದ ಬಗ್ಗೆ ಗೊತ್ತಿಲ್ಲ ಎಂದ ಹಿರಿಯ ನಟ ದತ್ತಣ್ಣ, ಎರಡನೇ ದಿನ ನಾನು ಈ ಸಿನಿಮಾ ನೋಡಿದೆ. ನಾನು ಸಿನಿಮಾವನ್ನು ವಿಮರ್ಶಾತ್ಮಕವಾಗಿ ನೋಡ್ತಿನೆ. ಯಾವ ಸಿನಿಮಾವನ್ನೂ ನಾನು ಅಷ್ಟು ಸುಲಭವಾಗಿ ಮೆಚ್ಚಿಕೊಳ್ಳುವುದಿಲ್ಲ. ಈ ಸಿನಿಮಾ ತುಂಬ ಹಿಡಿಸಿತು. ಹಲವು ಜನರಿಗೆ ಹೇಳಿದ್ದೆ. ಚಿತ್ರಮಂದಿರದಲ್ಲಿ ಡಿಸಿಪ್ಲೇನ್ ಮೇಂಟೆನ್ ಮಾಡಿದ್ದಾರೆ ಬಂದು ನೋಡ್ರಪ್ಪ ಎಂದಿದ್ದೆ. ಅದರಂತೆ ಇದೀಗ 25 ದಿನ ಪೂರೈಸಿದೆ’ ಮೆಚ್ಚಿಕೊಂಡವರಿಗೆಲ್ಲ ಧನ್ಯವಾದ ಎಂದರು.  ನಟ ಸಂಚಾರಿ ವಿಜಯ್ ಸಹ ಸಿನಿಮಾಕ್ಕೆ ಸಿಕ್ಕಿರುವ ಪ್ರತಿಕ್ರಿಯೆ ನೋಡಿ ಸಂತಸದಲ್ಲಿದ್ದಾರೆ. ಇಡೀ ತಂಡ ಬೆಂಗಳೂರಿನ ಬಹುತೇಕ ಮಲ್ಟಿಫ್ಲೆಕ್ಸ್ಗಗಳೀಗೆ ಹೋಗಿ ಪ್ರೇಕ್ಷಕರ ಪ್ರತಿಕ್ರಿಯೆ ಪಡೆದುಕೊಂಡು ಬಂದಿರುವ ಬಗ್ಗೆ ಅವರು ಹೇಳಿಕೊಂಡರು. ಅದೇ ರೀತಿ ಛಾಯಾಗ್ರಾಹಕ ಸತ್ಯ ಹೆಗಡೆ, ಇದೊಂದು ಕೇವಲ ನೋಡುವ ಸಿನಿಮಾ ಅಲ್ಲ, ಕಾಡುವ ಸಿನಿಮಾ ಎಂದು ಬಣ್ಣಿಸಿದರು. 25ದಿನ 75ದಿನವಾಗಲಿ, 75, 150 ಆಗಲಿ ಎಂದು ಚಿತ್ರಕ್ಕೆ ಹಾರೈಸಿದರು ನಟ ಪ್ರಮೋದ್ ಶೆಟ್ಟಿ.
ಅದರಂತೆ ಚಿತ್ರಕ್ಕೆ ಕಥೆ ಬರೆದ ಟಿ.ಕೆ ದಯಾನಂದ್, ನಟಿ ಶರಣ್ಯ, ರಾಘು ಶಿವಮೊಗ್ಗ ಸಿನಿಮಾ ಬಗ್ಗೆ ಮಾತನಾಡಿದರು. ಚಿತ್ರಕಥೆ ಸಂಭಾಷಣೆ ಟಿಕೆ ದಯಾನಂದ್, ವೀರೇಂದ್ರ ಮಲ್ಲಣ್ಣ ಬರೆದರೆ, ನಾಗೇಂದ್ರ ಅವರ ಸಂಕಲನ ಚಿತ್ರಕ್ಕಿದೆ. ಜಯಂತ ಕಾಯ್ಕಿಣಿ ಸಾಹಿತ್ಯ, ಸಂಗೀತ ಮತ್ತು ಹಿನ್ನೆಲೆ ಸಂಗೀತವನ್ನು ರೋನಾಡ ಬಕ್ಕೇಶ್, ರಾಹುಲ್ ಶಿವಕುಮಾರ್ ನೀಡಿದ್ದಾರೆ.