ಕನ್ನಡ, ತೆಲುಗು ಮತ್ತು ಸಂಸ್ಕೃತ ಭಾಷೆಗಳಲ್ಲಿ ಆಚಾರ್ಯ ಶ್ರೀ ಶಂಕರ

ಭಾರತದ ಸನಾತನ ಸಂಸ್ಕೃತಿಯನ್ನು ಇಡೀ ಜಗತ್ತಿಗೆ ಸಾರಿ ಹೇಳಿದವರು ಶಂಕರಾಚಾರ್ಯರು. ಇವರು ಭೌತಿಕವಾಗಿ ಜೀವಿಸಿದ್ದು ತೀರಾ ಕಡಿಮೆ ಅವಧಿ. ಮೂವತ್ತೆರಡನೇ ವಯಸ್ಸಿಗೆಲ್ಲಾ ದೇಶದ ಮೂಲೆ ಮೂಲೆಗಳಿಗೆ ಸಂಚರಿಸಿ ಗೀತಾಚಾರ್ಯ ಶ್ರೀಕೃಷ್ಣನ ಅದ್ವೈತ ಸಿದ್ಧಾಂತವನ್ನು ಪ್ರತಿಪಾದಿಸುತ್ತ, ಅದನ್ನು ಜಗತ್ತಿಗೆ ಸಾರಿದರು. ಆದಿಶಂಕರರು ಭಗವದ್-ಗೀತೆ, ಉಪನಿಷತ್ ಹಾಗು ಬ್ರಹ್ಮ ಸೂತ್ರಗಳಿಗೆ ಭಾಷ್ಯ ಬರೆದ ಮೊದಲ ಆಚಾರ್ಯರು. ಇಂಥ ಶಂಕರರ ಸಮಗ್ರ ಹಿರಿಮೆಯನ್ನು ಸಾರುವ ಅಪರೂಪದ ಪ್ರಯತ್ನವೊಂದು ನಡೆಯುತ್ತಿದೆ.

ಕನ್ನಡ, ತೆಲುಗು ಮತ್ತು ಸಂಸ್ಕೃತ ಭಾಷೆಗಳಲ್ಲಿ ಏಕಕಾಲದಲ್ಲಿ ತಯಾರಾಗುತ್ತಿರುವ ಚಿತ್ರ ಆಚಾರ್ಯ ಶ್ರೀ ಶಂಕರ. ವೃತ್ತಿಯಲ್ಲಿ ಲೆಕ್ಕ ಪರಿಶೋಧಕರಾಗಿರುವ ವೈ.ಎನ್. ಶರ್ಮಾ ಮತ್ತು ಅವರ ಪತ್ನಿ ವಿಜಯಲಕ್ಷ್ಮಿ ತಮ್ಮದೇ ಎಮ್ಮನೂರು ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಿಸಿರುವ ಚಿತ್ರ ಆಚಾರ್ಯ ಶ್ರೀ ಶಂಕರ. ಈ ಹಿಂದೆ ರಿಯಲ್ ಸ್ಟಾರ್ ಉಪೇಂದ್ರ ಅವರ ಶ್ರೀಮತಿ, ಭಗವದ್ ಶ್ರೀ ರಾಮಾನುಜ ಮತ್ತು ಅಷ್ಟಾವಕ್ರ ಚಿತ್ರಗಳನ್ನು ನಿರ್ದೇಶನ ಮಾಡಿದ್ದ ರಾಜಾ ರವಿಶಂಕರ್ ಆಚಾರ್ಯ ಶ್ರೀ ಶಂಕರ ಚಿತ್ರವನ್ನು ನಿರ್ದೇಶಿಸಿದ್ದಾರೆ. ಶೃಂಗೇರಿ ಶಾರದಾ ಪೀಠದ ಜಗದ್ಗುರುಗಳು ಕಥೆ, ಚಿತ್ರಕತೆ ಮತ್ತು ಸಂಭಾಷಣೆಯನ್ನು ಪರಾಮರ್ಷಿಸಿ, ಹಸಿರು ನಿಶಾನೆ ತೋರಿದ ನಂತರವಷ್ಟೇ ಆಚಾರ್ಯ ಶ್ರೀ ಶಂಕರ ಚಾಲನೆಗೊಂಡಿತ್ತು.

೨೦೨೦ರ ಜನವರಿ ತಿಂಗಳಲ್ಲಿ ಶೃಂಗೇರಿ ಶಾರದಾಂಬೆಯ ಸನ್ನಿಧಿಯಲ್ಲಿ ಆರಂಭಗೊಂಡ ಚಿತ್ರ ನಂತರ ತೀರ್ಥಹಳ್ಳಿ, ಕುಂದಾಪುರ, ದೇವರಾಯನ ದುರ್ಗ ಸೇರಿದಂತೆ ಸಾಕಷ್ಟು ಕಡೆ ಚಿತ್ರೀಕರಣಗೊಂಡಿದೆ. ಸದ್ಯ ಶೂಟಿಂಗ್ ಮುಕ್ತಾಯವಾಗಿದ್ದು ಡಬ್ಬಿಂಗ್ ಕಾರ್ಯ ನೆರವೇರುತ್ತಿದೆ. ಆಚಾರ್ಯ ಶ್ರೀ ಶಂಕರ ಚಿತ್ರದ ಕಥೆಯ ತಯಾರಿ ಮುಗಿದ ಮೇಲೆ ಶಂಕರಾಚಾರ್ಯರ ಪಾತ್ರಕ್ಕೆ ಯಾರನ್ನು ಹೊಂದಿಸುವುದು ಎಂಬ ಹುಡುಕಾಟದಲ್ಲಿದ್ದಾಗ ಶಿರಸಿಯ ರವೀಂದ್ರ ಭಾಗವತ ಅವರು ಆಯ್ಕೆಯಾದರು. ??ಡಾ. ರಾಜ್ ಕುಮಾರ್ ಅವರು ಯಾವ ಪಾತ್ರಕ್ಕೆ ಬೇಕಾದರೂ ಹೊಂದುತ್ತಿದ್ದರು. ಈಗ ಶಂಕರಾಚಾರ್ಯರ ಪಾತ್ರಕ್ಕೆ ಹುಡುಕಾಡುತ್ತಿದ್ದಾಗ ಆ ಪಾತ್ರಕ್ಕೆ ಹೇಳಿಮಾಡಿಸಿದಂತಾ ಕಲಾವಿದ ರವೀಂದ್ರ ಭಾಗವತ ನಮಗೆ ಸಿಕ್ಕರು. ಶ್ರೀ ಶಂಕರರ ಬಾಲ್ಯ ಯೌವ್ವನ ಮತ್ತು ನಿರ್ಗಮನದ ತನಕ ಸಂಪೂರ್ಣ ಜೀವನಗಾಥೆ ಈ ಚಿತ್ರದಲ್ಲಿ ಸೇರಿಕೊಂಡಿದೆ” ಎನ್ನುವುದು ನಿರ್ದೇಶಕ ರಾಜಾ ರವಿಶಂಕರ್ ಅಭಿಪ್ರಾಯ.

ಮಂಡನ ಮಿಶ್ರಾ ಪಾತ್ರದಲ್ಲಿ ಹಿರಿಯ ನಟ ರಾಮಕೃಷ್ಣ, ಕುಮಾರಿಲ ಭಟ್ಟನಾಗಿ ರಮೇಶಭಟ್, ಮಾ. ಲಿಖಿತ ಶರ್ಮಾ, ಮಾ. ಬಿ. ಪಿ. ರೋಹಿತ್ ಶರ್ಮಾ, ಡಾ. ಆರೂಢ ಭಾರತಿ ಸ್ವಾಮಿಜಿ, ಮೈಕೋ ಮಂಜು, ಮೂಗು ಸುರೇಶ, ಜಿ.ರಾಮರಾವ್, ಆದಿತ್ಯ ಶೆಟ್ಟಿ, ಸಾಯಿಪ್ರಕಾಶ್, ನಾಗೇಂದ್ರ ಪ್ರಸಾದ್, ಸತ್ಯ ಪ್ರಸಾದ್, ಶಶಿ ಕೋಟೆ, ವಿನಯಾ ಪ್ರಸಾದ್, ಪ್ರಥಮಾ ಪ್ರಸಾದ್, ತೇಜಸ್ವೀನಿ, ಸುರೇಖಾ ಸುಕುಮಾರ, ಸುಧಾ, ಉಷಾ ಮೊದಲಾದವರು ಆಚಾರ್ಯ ಶ್ರೀ ಶಂಕರ ಚಿತ್ರದಲ್ಲಿ ಪಾತ್ರ ನಿರ್ವಹಿಸಿದ್ಧಾರೆ.

ಸಿ.ನಾರಾಯಣ ಛಾಯಾಗ್ರಹಣ, ಅರ್ಜುನ್ ಜನ್ಯ ಸಂಗೀತ, ಸಂಕಲನ ಆರ್.ದೊರೆರಾಜ (ಆರ್. ಡಿ. ರವಿ), ಮೇಕಪ್ ಕುಮಾರ ನೋಣವಿಣಕೆರೆ, ವಸ್ತ್ರವಿನ್ಯಾಸ ಕೆ.ಚಂದ್ರಾಚಾರಿ ಸಹನಿರ್ದೇಶನ, ಜಗದೀಶ ಮಲ್ಲಪ್ಪ, ಐ.ಅಮರ್ ಸಹಾಯಕ ನಿರ್ದೇಶನ ಮಹೇಶ ಗಡಾದ, ಷಣ್ಮುಖ, ಉಷಾ ಅವರದ್ದು. ಈ ಚಿತ್ರದ ಮತ್ತೊಂದು ದಾಖಲಾರ್ಹ ಸಂಗತಿ ಏನೆಂದರೆ ಡಾ. ಆರೂಢ ಭಾರತಿ ಸ್ವಾಮಿಗಳು ಸಂಸ್ಕೃತ ಭಾಷೆಯಲ್ಲಿ ಸಂಭಾಷಣೆಯನ್ನು ಬರೆದು ಬಿಳಿಯ ವಸ್ತ್ರವನ್ನು ಉಟ್ಟು ವ್ಯಾಸ ಮಹರ್ಷಿಗಳಾಗಿ ಅಭಿನಯಿಸಿದ್ದಾರೆ. ತೆಲಗು ಭಾಷೆಯ ಸಂಭಾಷಣೆಯನ್ನು ವಿದ್ವಾಂಸರಾದ ವೈ. ವಿ. ಎಲ್.ಏನ್ ಶಾಸ್ತ್ರಿಗಳು ರಚಿಸಿದ್ದಾರೆ.