ಡಿಟಿಎಸ್​ (ಡೇರ್​ ಟು ಸ್ಲೀಪ್) ಕನ್ನಡ, ತೆಲುಗು ಚಿತ್ರದಲ್ಲಿ ಆ ದಿನಗಳು ಖ್ಯಾತಿಯ ಚೇತನ್.

– ಫೆ. 24ರ ಚೇತನ್ ಅವರ ಜನ್ಮದಿನದಂದು ಸಿನಿಮಾ ಘೋಷಣೆ
– 100 CRORES ನಿರ್ಮಾಪಕರ ಜತೆ ಮತ್ತೊಂದು ಚಿತ್ರ

ಎಸ್​ಎಸ್​ ಸ್ಟುಡಿಯೋ ಬ್ಯಾನರ್​ನಲ್ಲಿ ನಿರ್ಮಾಣವಾಗುತ್ತಿರುವ ಡಿಟಿಎಸ್​ (ಡೇರ್ ಟು ಸ್ಲೀಪ್) ಚಿತ್ರಕ್ಕೆ ನಾಯಕನಾಗಿ ಆ ದಿನಗಳು ಸಿನಿಮಾ ಖ್ಯಾತಿಯ ಚೇತನ್ ಆಯ್ಕೆಯಾಗಿದ್ದು, ಇನ್ನೇನು ಫೆ. 24ರ ಅವರ ಜನ್ಮದಿನಕ್ಕೆ ಚಿತ್ರದ ಅದ್ದೂರಿಯಾಗಿ ಸಿನಿಮಾ ಘೋಷಣೆ ಮಾಡಲಿದೆ ತಂಡ. ಈಗಾಗಲೇ 100 CRORES ಸಿನಿಮಾ ನಿರ್ಮಾಣ ಮಾಡಿದ್ದ ತಂಡವೇ ಡಿಟಿಎಸ್ ಚಿತ್ರವನ್ನೂ ನಿರ್ಮಾಣ ಮಾಡುತ್ತಿದೆ. ಕನ್ನಡ ಮತ್ತು ತೆಲುಗಿನಲ್ಲಿ ಡಿಟಿಎಸ್​ ಸಿನಿಮಾ ನಿರ್ಮಾಣವಾಗುತ್ತಿದೆ.

ತೆಲುಗಿನ ಸಾಯಿ ಕಾರ್ತಿಕ್ ಮತ್ತು ಶ್ರೀಕಾಂತ್ ದೀಪಾಲ ಡಿಟಿಎಸ್ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದು, ಅಭಿರಾಮ್ ಫಿಲ್ಲ ಈ ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ. ಚೇತನ್​ ಜತೆಗೆ ತೆಲುಗಿನ ಖ್ಯಾತ ಹಾಸ್ಯ ನಟ ಸುನೀಲ್​, ಒಟ್ಟಿಗೆ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದು, ಫೆ, 22ರಿಂದ ಚಿತ್ರೀಕರಣವೂ ಶುರುವಾಗಿದೆ.

ಪಕ್ಕಾ ಆ್ಯಕ್ಷನ್​ ಹಿನ್ನೆಲೆಯಲ್ಲಿ ಸಾಗುವ ಈ ಚಿತ್ರದಲ್ಲಿ ಸುನೀಲ್​ ಖಡಕ್ ಪೊಲೀಸ್ ಅಧಿಕಾರಿಯಾದರೆ, ಚೇತನ್​ ಅಷ್ಟೇ ಪ್ರಧಾನವಾದ ಪಾತ್ರವೊಂದನ್ನು ನಿಭಾಯಿಸುತ್ತಿದ್ದಾರೆ. ನಾಲ್ಕು ಸಾಹಸ ದೃಶ್ಯಗಳಿರುವ ಈ ಸಿನಿಮಾದ ಬಹುತೇಕ ಶೂಟಿಂಗ್​ ದುಬೈ, ಥಾಯ್ಲೆಂಡ್​ ಸೇರಿ ಹಲವೆಡೆ ನಡೆಯಲಿದೆ. ಬೆಂಗಳೂರು ಮತ್ತು ಹೈದರಬಾದ್​ನಲ್ಲಿಯೂ ನಡೆಯಲಿದೆ.
ಇನ್ನು ಈ ಚಿತ್ರಕ್ಕೆ ಬಾಲಿವುಡ್​ ನಟಿಯರನ್ನು ಚಿತ್ರತಂಡ ಕರೆತಂದಿದೆ. ಡೋನಲ್ ಮತ್ತು ನತಾಶಾ ನಾಯಕಿಯರಾಗಿ ನಟಿಸುತ್ತಿದ್ದು, ಈಗಾಗಲೇ ಇವರೂ ಸಹ ಶೂಟಿಂಗ್​ನಲ್ಲಿ ಭಾಗಿಯಾಗಿದ್ದಾರೆ. 24ರಂದು ಅಧಿಕೃತವಾಗಿ ಚಿತ್ರ ಸೆಟ್ಟೇರಲಿದ್ದು, ಸಿನಿಮಾ ಘೋಷಣೆ ಮಾಡಲಿದ್ದಾರೆ ನಿರ್ಮಾಪಕರು. ಇನ್ನುಳಿದಂತೆ ಕಬೀರ್ ಸಿಂಗ್, ಕೃಷ್ಣ ಮುರಳಿ, ಚರಣ್, ಶಕಲಕಾ ಶಂಕರ್, ಚಿತ್ರಂ ಶ್ರೀನು, ಗೆಟಪ್​ ಸೀನು, ರವಿ ವರ್ಮಾ, ರಕೇಂದು ಮೌಳಿ ತಾರಾಗಣದಲ್ಲಿದ್ದಾರೆ. ಸಾಯಿ ಕಾರ್ತಿಕ್ ಈ ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ.