ಲಾಕ್‌ಡೌನ್ ನಂತರ ಥರ್ಡ್‌ಕ್ಲಾಸ್ ಮರುಬಿಡುಗಡೆ

ಕರೋನಾ ಲಾಕ್‌ಡೌನ್‌ನಿಂದ ಸ್ಥಬ್ದವಾಗಿದ್ದ ಚಿತ್ರರಂಗ ಈಗ ಹಂತ ಹಂತವಾಗಿ ಚಟುವಟಿಕೆಗಳನ್ನು ಆರಂಭಿಸುತ್ತಿದೆ. ಮೊದಲು ಸಿನಿಮಾ ಚಿತ್ರೀಕರಣಕ್ಕೆ ಅನುಮತಿಸಿದ ಕೇಂದ್ರ ಗೃಹ ಇಲಾಖೆ ಈಗ ಚಿತ್ರಮಂದಿರಗಳನ್ನು ತೆರೆಯಲೂ ಸಹ ಗ್ರೀನ್ ಸಿಗ್ನಲ್ ಕೊಟ್ಟಿದೆ. ಹಾಗಾಗಿ ಲಾಕ್‌ಡೌನ್ ಸಮಯದಲ್ಲಿ ಸ್ಥಗಿತಗೊಂಡಿದ್ದ ಹಲವಾರು ಚಿತ್ರಗಳು ಇದೇ ಶುಕ್ರವಾರ ಮತ್ತೆ ಬೆಳ್ಳಿತೆರೆಮೇಲೆ ರಾರಾಜಿಸಲಿವೆ. ಅವುಗಳಲ್ಲಿ ಥರ್ಡ್ ಕ್ಲಾಸ್ ಚಿತ್ರವೂ ಒಂದು. ಹೌದು ಈ ಚಿತ್ರ ಯಶಸ್ವೀ ಪ್ರದರ್ಶನ ಕಾಣುತ್ತಿರುವಾಗಲೇ ಪ್ರದರ್ಶನ ನಿಂತುಹೋಗಿತ್ತು. ಮಂಗಳವಾರ ರೇಣುಕಾಂಬ ಥಿಯೇಟರಿನಲ್ಲಿ ಪತ್ರಿಕಾಗೋಷ್ಟಿ ಕರೆದಿದ್ದ ಚಿತ್ರತಂಡ ಈ ವಿಚಾರ ಹೇಳಿಕೊಂಡಿತು. ಚಿತ್ರದ ನಾಯಕನಟ ಹಾಗೂ ನಿರ್ಮಾಪಕ ಜಗದೀಶ್ ಪವಾರ್, ನಿರ್ದೇಶಕ ಅಶೋಕ್‌ದೇವ್, ವಿತರಕ ವಿಜಯಕುಮಾರ್ ಹಾಜರಿದ್ದು ಬಿಡುಗಡೆಗೆ ಮಾಡಿಕೊಂಡಿರುವ ಸಿದ್ದತೆಗಳನ್ನು ವಿವರಿಸಿದರು.

ಮೊದಲಿಗೆ ಮಾತನಾಡಿದ ನಿರ್ಮಾಪಕ ಜಗದೀಶ್ ಏಳೆಂಟು ತಿಂಗಳ ನಂತರ ಒಬ್ಬರನ್ನೊಬ್ಬರು ನೋಡುತ್ತಿದ್ದೇವೆ. ಈ ಮಹಾಮಾರಿ ಕರೋನಾ ವಿರುದ್ದ ನಾವೆಲ್ಲ ಇನ್ನೂ ಹೋರಾಟ ನಡೆಸಬೇಕಿದೆ. ಏಳು ತಿಂಗಳ ಕಾಲ ಸ್ಥಬ್ದವಾಗಿದ್ದ ಚಿತ್ರರಂಗದಲ್ಲಿ ಲೈಟ್‌ಬಾಯ್‌ನಿಂದ ಹಿಡಿದು ನಿರ್ಮಾಪಕನವರೆಗೆ ಎಲ್ಲರೂ ಕಷ್ಟ ಅನುಭವಿಸಿದರು. ಯಾವಾಗ ಚಿತ್ರಮಂದಿರ ಆರಂಭವಾಗುತ್ತೋ, ನಾವೆಲ್ಲ ಮೊದಲಿನಂತೆ ಆಗೋದು ಯಾವಾಗ ಅಂತ ಕಾಯುತ್ತಿದ್ದರು. ಈಗ 16ರಿಂದ ಬಹುತೇಕ ಚಿತ್ರಮಂದಿರಗಳು ಆರಂಭವಾಗುತ್ತಿವೆ. ಅದೇ ರೀತಿ ೩೬ ದಿನಗಳ ಯಶಸ್ವೀ ಪ್ರದರ್ಶನ ಕಂಡು ಸ್ಥಗಿತವಾಗಿದ್ದ ನಮ್ಮ ಥರ್ಡ್‌ಕ್ಲಾಸ್ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದೇವೆ. ಜನರನ್ನು ಬನ್ನಿ ಎಂದು ಕರೆಯಲು ನಮಗೂ ಕಷ್ಟವಾಗ್ತಿದೆ. ಆದರೆ ಎಲ್ಲಾ ರೀತಿಯ ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಜನರ ಆರೋಗ್ಯರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ.

ಎಲ್ಲರೂ ಚಿತ್ರಮಂದಿರಕ್ಕೆ ಧೈರ್ಯವಾಗಿ ಬರಬಹುದು, ಎಲ್ಲಾ ರೀತಿಯ ಸಂರಕ್ಷಣೆ ಇರುತ್ತದೆ ಎಂದು ನಾಡಿನ ಜನತೆಯಲ್ಲಿ ಮನವಿ ಮಾಡಿಕೊಂಡರು.ನಂತರ ವಿತರಕ ವಿಜಯಕುಮಾರ್ ಮಾತನಾಡಿ ಏಳು ತಿಂಗಳ ನಂತರ ಥರ್ಡ್‌ಕ್ಲಾಸ್ ಚಿತ್ರವನ್ನು ರೀರಿಲೀಸ್ ಮಾಡುತ್ತಿದ್ದೇವೆ. ಮೆಜೆಸ್ಟಿಕ್‌ನ ಭೂಮಿಕಾ ಚಿತ್ರಮಂದಿರದಲ್ಲಿ ಅಲ್ಲದೆ ಬೇರೆ ಬೇರೆ ಸೆಂಟರುಗಳಲ್ಲಿ ಚಿತ್ರ ರಿಲೀಸಾಗುತ್ತಿದೆ. ಸದ್ಯ ಶೇಕಡಾ ಹತ್ತರಷ್ಟು ಥೇಟರ್‌ಗಳು ಮಾತ್ರವೇ ಓಪನ್ ಆಗುತ್ತಿದ್ದು, ೨೩ರ ನಂತರ ಬಹುತೇಕ ಚಿತ್ರಮಂದಿರಗಳು ಆರಂಭವಾಗಲಿವೆ. ಆಗ ಮತ್ತೆ ಚಿತ್ರಮಂದಿರಗಳನ್ನು ಹೆಚ್ಚಿಸುತ್ತೇವೆ ಎಂದು ಹೇಳಿದರು. ನಂತರ ಚಿತ್ರದ ನಿದೇಶಕ ಅಶೋಕ್‌ದೇವ್ ಮಾತನಾಡಿ ಈಗಿನ ಪರಿಸ್ಥಿತಿಯಲ್ಲಿ ತುಂಬಾ ಬಿಕ್ಕಟ್ಟಿದೆ. ಆಗ ೧೩ ಸಿನಿಮಾಗಳ ನಡುವೆ ನಮ್ಮ ಸಿನಿಮಾ ರಿಲೀಸಾಗಿತ್ತು. ಆದರೂ ನಮ್ಮ ಚಿತ್ರ, ದಿಯಾ ಸೇರಿದಂತೆ ಕೆಲ ಚಿತ್ರಗಳು ಉತ್ತಮ ವಿಮರ್ಶೆ ಪಡೆದುಕೊಂಡು ಜನರನ್ನು ಸೆಳದಿದ್ದವು. ಅದೇ ನಂಬುಗೆಯಲ್ಲಿ ಈಗ ಚಿತ್ರವನ್ನು ಜನರಿಗೆ ಅರ್ಪಿಸುತ್ತಿದ್ದೇವೆ. ನಮ್ಮ ಚಿತ್ರ ರೀರಿಲೀಸ್ ಆಗ್ತಿರುವುದು ನಮಗೆಲ್ಲ ಸಂಜೀವಿನಿಯೇ ಸಿಕ್ಕಂತಾಗಿದೆ. ಅಲ್ಲದೆ ನನ್ನ ಮೊದಲ ಚಿತ್ರ ೫೦ನೇ ದಿನದತ್ತ ಸಾಗ್ತಿರುವುದು ಖುಷಿ ನೀಡಿದೆ ಎಂದು ಹೇಳಿದರು.

ಈ ಚಿತ್ರದ ಬಗ್ಗೆ ಹೇಳುವುದಾದರೆ ಅನಾಥನಾದ ನಾಯಕ ಹಾಗೂ ಆತನ ಮೂವರು ಸ್ನೇಹಿತರನ್ನು ಕಾರ್ ಗ್ಯಾರೇಜ್ ನಡೆಸುವ ಚಾಚಾನೇ ಸಾಕಿ ಬೆಳೆಸಿರುತ್ತಾನೆ. ಈ ನಡುವೆ ಶ್ರೀಮಂತ ಹುಡುಗಿಯೊಬ್ಬಳ ಪ್ರವೇಶದಿಂದ ಕಥೆ ಯಾವರೀತಿ ಟ್ವಿಸ್ಟ್ ಪಡೆಯುತ್ತದೆ ಎನ್ನುವುದೇ ಥರ್ಡ್‌ಕ್ಲಾಸ್‌ನ ಕಥಾಹಂದರ. ಮೂರು ಸಂಸಾರಗಳ ನಡುವೆ, ಮೂರು ವರ್ಗಗಳ ನಡುವೆ ನಡೆಯುವ ತ್ರಿಕೋನ ಪ್ರೇಮಕಥೆ ಈ ಸಿನಿಮಾದಲ್ಲಿದೆ.

ಚಿತ್ರದ ಪ್ರಚಾರಕ್ಕೆ ಹೋದ ಸಮಯದಲ್ಲಿ ನಾಯಕನಟ ಜಗದೀಶ್ ಉತ್ತರ ಕರ್ನಾಟಕದ ಶಾಲೆಯೊಂದನ್ನು ದತ್ತು ಪಡೆದು ಆ ಶಾಲೆಯನ್ನು ತಮ್ಮ ಸ್ವಂತ ಖರ್ಚಿನಲ್ಲೇ ಅಭಿವೃದ್ದಿಪಡಿಸಿದ್ದರು. ಇದರ ಜೊತೆ ಸಾವಿರ ಅನಾಥ, ಅಂಧಮಕ್ಕಳಿಗೆ ೨ ಲಕ್ಷ ರೂ.ಗಳ ವಿಮೆಯನ್ನು ಉಚಿತವಾಗಿ ಮಾಡಿಸಿಕೊಟ್ಟಿದ್ದರು. ಅಲ್ಲದೆ ಆಟೋ ಚಾಲಕರಿಗೂ ಸಹ ಜೀವವಿಮೆಯನ್ನು ಮಾಡಿಸಿಕೊಟ್ಟಿದ್ದರು. ನಾಯಕ ಜಗದೀಶ್ ಪವಾರ್ ಅವರ ಕಥೆಗೆ ಅಶೋಕ್‌ದೇವ್ ಆಕ್ಷನ್‌ಕಟ್ ಹೇಳಿದ್ದಾರೆ. ರೂಪಿಕಾ, ದಿವ್ಯಾರಾವ್ ಚಿತ್ರದ ನಾಯಕಿಯರಾಗಿದ್ದು, ಅವಿನಾಶ್, ಸಂಗೀತಾ, ರಮೇಶ್‌ಭಟ್, ಗಿರೀಶ್‌ಜತ್ತಿ, ಶಶಿಕಲಾ, ಪವನ್, ಹರೀಶ್, ಚಕ್ರವರ್ತಿ ದಾವಣಗೆರೆ, ರಾಜ್‌ಉದಯ್, ವಿಕಾಸ್ ಮೊದಲಾದವರು ಪ್ರಮುಖ ತಾರಾಗಣದಲ್ಲಿದ್ದಾರೆ. ಈ ಚಿತ್ರಕ್ಕೆ ಶಾಮ್‌ರಾಜ್ ಅವರ ಛಾಯಾಗ್ರಹಣವಿದೆ. ಸೆವೆನ್‌ಹಿಲ್ಸ್ ಸ್ಟುಡಿಯೋ ಬ್ಯಾನರ್‌ನಡಿ ಚಿತ್ರ ನಿರ್ಮಾಣವಾಗಿದೆ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ತಪ್ಪದೆ ತಿಳಿಸಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ.