‘ಹುಲಿ ಹಸ್ಕೊಂಡಿದ್ರೂ ಹುಲ್ ತಿನ್ನಲ್ಲ’

ಅದು 1969 “ಕಾಡಿನ ರಹಸ್ಯ” ಎಂಬ ಚಿತ್ರದಲ್ಲಿ ನಟಿಸಿದ ಆ ಹತ್ತೊಂಬತ್ತು ವರ್ಷದ ತರುಣ ಕನ್ನಡ ಚಿತ್ರರಂಗದ ಮೊಟ್ಟ ಮೊದಲ ಆಕ್ಷನ್ ಕಿಂಗ್ ಆಗುತ್ತಾನೆಂದು ಯಾರೆಂದರೆ ಯಾರೂ ಊಹಿಸಿರಲಾರರು…ಬೇರೆಯವರಿರಲಿ ಸ್ವತಃ ಟೈಗರ್ ಪ್ರಭಾಕರ್ ಅವರೇ ಅಂದುಕೊಂಡಿದ್ದರೋ ಇಲ್ಲವೋ…ಚಿತ್ರರಂಗದ ಹಾವು ಏಣಿ ಆಟವೇ ಹಾಗೆ…”ಹುಲಿ ಹೆಜ್ಜೆ ” ಸಿನೆಮಾ ತೆರೆಕಂಡ ಕೂಡಲೇ ಸರಸರನೆ ಏಣಿ ಹತ್ತಿದ ನಾಯಕ ನಟ ಅಲ್ಲಿಯವರೆಗೂ ಪ್ರಭಾಕರ್ ಆಗಿದ್ದವರು ಆ ಚಿತ್ರದಲ್ಲಿ ನಿಜವಾದ ಹುಲಿಯೊಡನೆ ಸೆಣಸಾಡಿ “ಟೈಗರ್ ಪ್ರಭಾಕರ್” ಆಗಿ ಕನ್ನಡಾಭಿಮಾನಿಗಳ ಹೃದಯದಲ್ಲಿ ಒಂದು ಶಾಶ್ವತ ಸ್ಥಾನ ಪಡೆದೇ ಬಿಟ್ಟರು…

ಚಿತ್ರರಂಗದಲ್ಲಿ ಹೆಜ್ಜೆ ಇಡಲು ಪ್ರಯತ್ನಿಸುತ್ತಿರುವ ಇಂದಿನ ಎಷ್ಟೋ ಯುವಜನತೆಗೆ ಟೈಗರ್ ಪ್ರಭಾಕರ್ ಅವರ ಚಲನಚಿತ್ರ ಜೀವನ ಅದ್ಭುತವಾದ ಕಲಿಕೆಗಳ ಪುಸ್ತಕ… ಸಾಮಾನ್ಯರಲ್ಲಿ ಸಾಮಾನ್ಯರಾಗಿ ಕಡುಬಡತನದಲ್ಲಿ ಬೆಳೆದು ಇಡೀ ಭಾರತೀಯ ಚಿತ್ರರಂಗ ಗುರುತಿಸುವ ಮಟ್ಟಕ್ಕೆ ಬೆಳೆದ ಅವರ ಪರಿಶ್ರಮ, ಸಾಧನೆ, ಛಲ, ಸೋಲಿಗೆ ಎದೆಗುಂದದ ಅವರ ಗುಂಡಿಗೆ ಇವುಗಳೆಲ್ಲಾ ನಿಜಕ್ಕೂ ಅನುಕರಣೀಯ…ಯಾವುದೇ ವ್ಯಕ್ತಿಯ ವೈಯಕ್ತಿಕ ಜೀವನ ಘಟನೆಗಳನ್ನು ಪಕ್ಕಕ್ಕಿಟ್ಟು ಅವರ ಸಾಧನೆಯ ಹಾದಿಯನ್ನು ಮಾತ್ರ ಗಮನಿಸುವ ಗುಣ ನಮ್ಮಲ್ಲಿ ಬೆಳೆಸಿಕೊಂಡರೆ ಮಾತ್ರ ನಾವೂ ಸಹ ಏನನ್ನಾದರೂ ಸಾಧಿಸಬಹುದು…ಅನೇಕ ಸಣ್ಣ ಪುಟ್ಟ ಪಾತ್ರಗಳನ್ನು ಒಪ್ಪಿಕೊಳ್ಳುತ್ತಾ ಖಳನಟನಾಗಿಯೂ ನಟಿಸುತ್ತಾ ಮುಂದೊಂದು ದಿನ ನನ್ನ ಸ್ಥಾನ ನಾನು ನಿರ್ಮಿಸಿಯೇ ತೀರುತ್ತೇನೆ ಎಂಬ ಟೈಗರ್ ಪ್ರಭಾಕರ್ ಅವರ ಅದಮ್ಯ ಛಲವೇ ಅವರಿಗೆ ದಾರಿದೀಪವೂ ಆಗಿತ್ತು…

ನಮ್ಮ ತಂದೆ ನನ್ನ ಅಣ್ಣಂದಿರ ಜೊತೆಗೆ ನನ್ನನ್ನು ಚಿಕ್ಕವಯಸ್ಸಿನಲ್ಲೇ ಕರೆದುಕೊಂಡು ಹೋಗಿ ತೋರಿಸುತ್ತಿದ್ದ ಅನೇಕ ಚಿತ್ರಗಳಲ್ಲಿ ಟೈಗರ್ ಪ್ರಭಾಕರ್ ಇರುತ್ತಿದ್ದರು…ಆ ಆಕ್ಷನ್ ಚಿತ್ರಗಳಲ್ಲಿ ಅವರನ್ನು ನಾವು ನೋಡಿ ನಲಿಯುತ್ತಿದ್ದ ಕಾಲವೇ ಅದ್ಭುತ…ನನಗೆ ಈಗಲೂ ನೆನಪಿದೆ “ಪ್ರಚಂಡ ಪುಟಾಣಿಗಳು” ಚಿತ್ರದಲ್ಲಿ ಯುವಕ ರಾಮಕೃಷ್ಣ ಹೆಗಡೆ ಗೆ ಸಹಾಯ ಮಾಡಲು ಬರುವ ಟೈಗರ್ ಪಾತ್ರ ನೋಡಿ ಇಡೀ ಹಗರಿಬೊಮ್ಮನಹಳ್ಳಿಯ ಪಂಪಾಪತಿ ಟೆಂಟಿನೊಳಗೆ ಕಿವಿಗಡಚಿಕ್ಕುವ ಶಿಳ್ಳೆ ಕೇಕೆ ಉತ್ಸಾಹದ ಅಲೆ…ಅದೊಂದು ರೋಮಾಂಚನ…”ಕಾಡಿನ ರಾಜ” ಚಿತ್ರವನ್ನಂತೂ ಅದೆಷ್ಟು ಬಾರಿ ನಾವು ಮೂರೂ ಜನ ಅಣ್ಣ ತಮ್ಮಂದಿರು ಶಾಲೆಗೆ ಚಕ್ಕರ್ ಹೊಡೆದು ಟೆಂಟಿನ ಗಾಂಧಿಕ್ಲಾಸಿನ ನೆಲದ ಮರಳಲ್ಲಿ ಕೂತು ನೋಡಿದ್ದೇವೋ…”ತಾಯಿಯ ಮಮತೆ” ಚಿತ್ರದ ಆ ಕುರೂಪಿ ಪಾತ್ರ, ತಾಯಿಯ ವಾತ್ಸಲ್ಯಕ್ಕಾಗಿ ಹಂಬಲಿಸುವ ಅವರ ನಟನೆ…ಓಹ್ ದಟ್ ವಾಸ್ ಅವರ್ ಚೈಲ್ಡ್ ಹುಡ್ ಎಂಟರ್ಟೈನ್ಮೆಂಟ್…

ಅಮಿತಾಭ್ ಬಚ್ಚನ್ ಶ್ರೀದೇವಿ ನಟಿಸಿದ್ದ ಇಂಕ್ವಿಲಾಬ್ ಚಿತ್ರವಿರಲಿ ಚಿರಂಜೀವಿಯವರೊಂದಿಗೆ ಖಳನಾಯಕನಾಗಿ ನಟಿಸಿದ ಅನೇಕ ತೆಲುಗು ಚಿತ್ರಗಳಿರಲಿ ತಮಿಳಿನ ರಜನಿಕಾಂತ್ ಅವರ ಚಿತ್ರಗಳಿರಲಿ ಎಲ್ಲ ಚಿತ್ರಗಳಲ್ಲೂ ಟೈಗರ್ ವಿಶೇಷ ಛಾಪು ಇದ್ದೇ ಇರುತ್ತಿತ್ತು… ಕನ್ನಡದ ಮೇರುನಟರಾದ ಡಾ.ರಾಜ್, ರೆಬೆಲ್ ಸ್ಟಾರ್ ಅಂಬಿ, ಸಾಹಸಸಿಂಹ ವಿಷ್ಣು, ಕರಾಟೆಕಿಂಗ್ ಶಂಕರ್ ನಾಗ್ ಎಲ್ಲರೊಂದಿಗೂ ಲೀಲಾಜಾಲವಾಗಿ ನಟಿಸುತ್ತಿದ್ದ ಈ ಟೈಗರ್ ಎಪ್ಪತ್ತು ಎಂಭತ್ತರ ದಶಕದಲ್ಲಿ ನನ್ನಂತೆ ಬಾಲ್ಯ ಕಳೆದು ಯೌವನಕ್ಕೆ ಕಾಲಿಡುತ್ತಿದ್ದ ಅನೇಕರಿಗೆ ಆರಾಧ್ಯ ದೈವವಾಗಿದ್ದರು ಎನ್ನುವುದರಲ್ಲಿ ಸಂಶಯವೇ ಇಲ್ಲ…

ಕನ್ನಡದ ಈ ಟೈಗರ್ ತೆರೆಯ ಮೇಲಷ್ಟೇ ಘರ್ಜಿಸುತ್ತಿತ್ತು…ತೆರೆಯ ಹಿಂದೆ ಇವರ ಹೃದಯ ಮೊಲದಷ್ಟೇ ಮೃದುವಾಗಿತ್ತು…ಟೈಗರ್ ಪ್ರಭಾಕರ್ ಕನ್ನಡದಲ್ಲಿ ಚಿತ್ರ ನಿರ್ಮಾಣ ನಿರ್ದೇಶನ ಕೂಡ ಮಾಡಿ, ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು ಎನ್ನುವುದನ್ನು ನಿರೂಪಿಸಿದ್ದಾರೆ…ಅವರ ಹಾದಿಯಲ್ಲೇ ತಂದೆಯಷ್ಟೇ ಪರಿಶ್ರಮ ಛಲದಿಂದ ಮುಂದೆ ಹೆಜ್ಜೆ ಇಡುತ್ತಿರುವ “ಮರಿ ಟೈಗರ್” “ಟೈಸನ್” ವಿನೋದ್ ಪ್ರಭಾಕರ್ ಕೂಡ ಮುಂದೊಂದು ದಿನ ನಿಸ್ಸಂಶಯವಾಗಿ ಟೈಗರ್ ಪ್ರಭಾಕರ್ ಅವರ ಎತ್ತರಕ್ಕೆ ಏರಿ ನಿಲ್ಲುವರೆಂಬ ಆಶಾಭಾವನೆಯಂತೂ ನನ್ನಲ್ಲಿದೆ…ಬಹಳ ವರ್ಷಗಳ ಹಿಂದೆ ನಂಜುಂಡಿ ನಾಗರಾಜ್ ಅವರ “ವೈರಿ” ಚಿತ್ರಕ್ಕೆ ನಾನೊಂದು ಪ್ಯಾಥೋ ಹಾಡು ಬರೆದಿದ್ದೆ ಅದನ್ನು ಕೇಳಿ ಜೈಜಗದೀಶ್ ವಿನೋದ್ ಪ್ರಭಾಕರ್ ಮುಂತಾದವರಿದ್ದ ಇಡೀ ಸೆಟ್ ಒಂದು ಕ್ಷಣ ಮೌನವಾಗಿದ್ದರಂತೆ ಹಾಗೆಂದು ನಂಜುಂಡಿ ಸರ್ ಹೇಳಿದ್ರು ನಾನು ಲೊಕೇಷನ್ನಿಗೆ ಹೋಗುವ ಅವಕಾಶ ಕೂಡಿ ಬಂದಿರಲಿಲ್ಲ ಅಷ್ಟೇ…

ಮಗನನ್ನು ಸ್ನೇಹಿತನಂತೆ ಕಂಡು ಅವನ ಹಾದಿಗೆ ಬೇಕಾದ ಎಲ್ಲಾ ರೀತಿಯ ಕಲಿಕೆಗಳನ್ನೂ ನೀಡಿ ತಮ್ಮ ಅನೇಕ ಎದೆಯಾಳದ ನೋವುಗಳನ್ನು ಅವನೊಂದಿಗೆ ಹೇಳಿಕೊಳ್ಳುತ್ತಿದ್ದ ಟೈಗರ್ ಪ್ರಭಾಕರ್ ಅವರಂತಹಾ ಅದ್ಭುತ ತಂದೆ ಬಹುಶಃ ಎಲ್ಲರಿಗೂ ಸಿಗುವುದು ನನಗೆ ಅನುಮಾನ…ಆ ವಿಷಯದಲ್ಲಿ ವಿನೋದ್ ಪ್ರಭಾಕರ್ ನಿಜಕ್ಕೂ ಅದೃಷ್ಟವಂತರು…

ಏನೇ ಆಗಲಿ ಕನ್ನಡ ಹಾಗೂ ಭಾರತೀಯ ಚಿತ್ರರಂಗ ಎಂದೂ ಮರೆಯದ ಅಜರಾಮರವಾಗಿರುವ ಆ ಹುಲಿ ಹೆಜ್ಜೆಗಳ ಗುರುತಿನ ಜಾಡು ಹಿಡಿದು ನಾವೆಲ್ಲರೂ ನಡೆಯುತ್ತಲೇ ಇರೋಣ…ಆ ನಡಿಗೆಯಲ್ಲಿ ಟೈಗರ್ ಪ್ರಭಾಕರ್ ಅವರಿಂದ ಅನೇಕ ಉತ್ತಮ ವಿಷಯಗಳನ್ನು ಕಲಿಯುತ್ತಲೇ ಇರೋಣ…ಏನಂತೀರಿ…ನಿಮ್ಮ ಅನಿಸಿಕೆಗಳನ್ನು ನಮ್ಮ www.kannadagoldframes.com ನಲ್ಲಿ ಮರೆಯದೆ ಹಂಚಿಕೊಳ್ಳಿ…

ಶ್ರೀಕಾಂತ್ ಬೇಲೂರ್