ಕೆರೂರಿನಿಂದ ಬಂದು ನಾನು ನಿರ್ದೇಶಕನಾದ ಕಥೆ…

ನನ್ನ ಹೆಸರು ಗೋಪಿ ಕೆರೂರ್. ನನ್ನ ಜನ್ಮಸ್ಥಳ ಕೆರೂರ್ ಬದಾಮಿ ತಾಲೂಕು, ಬಾಗಲಕೋಟೆ ಜಿಲ್ಲೆಯಲ್ಲಿ ಇರುವಂತ ಸಣ್ಣ ಊರಿನಲ್ಲಿ 26-3- 1970ರಲ್ಲಿ ನನಗೆ ಜನ್ಮ ಕೊಟ್ಟ ತಾಯಿಯ ಹೆಸರು ಶಾವಕ್ಕ ಬೀಳಗಿ, ನನ್ನ ತಂದೆಯ ಹೆಸರು ನಾಗಪ್ಪ ಬೀಳಗಿ. 

ನನ್ನ ತಂದೆ ನಾನು ಹತ್ತು ವರ್ಷದವ ನಿದ್ದಾಗಲೆ ತಿರಿಹೋದರು. ಅಲ್ಲಿಂದ ನನಗೆ ಬಡತನವೇ ಗೆಳೆಯ…     1990-91 ಸಾಲಿನಲ್ಲಿ ಹತ್ತನೇ ತರಗತಿ  ಮುಗಿದ ನಂತರ ಗೋವಾದಲ್ಲಿ ಮೂರು ವರ್ಷಗಳ ಕಾಲ ಗಾರೆ ಕೆಲಸ, ಪೇಂಟಿಂಗ್, ಫಾರೇನ್ನರಿಗೆ ಡಾಲ್ಫಿನ್ ತೋರಿಸುವ ಕೆಲಸ, ಮಟ್ಕಾ ಬರೆದು ಕೋಳ್ಳುವುದು, ಹೀಗೆ ನಾನಾ ತರದ ಕೆಲಸಗಳನ್ನು ಮಾಡುತ್ತಾ ಬದುಕಿನ ಬುತ್ತಿ ತುಂಬಿಸುವಾಗ, ಕೆರೂರಿನಿಂದ ನಮ್ಮವ್ವ ಹುಡುಕಿಕೊಂಡು ಗೋವಾ ಬರುತ್ತಾಳೆ. ದಾರಿ ತಪ್ಪಿದ ಮಗನಿಗೆ ಬುದ್ಧಿ ಹೇಳಿ ಮತ್ತೆ ಕೆರೂರಿಗೆ ಕರೆದು ಕೊಂಡು ಹೊಗುತ್ತಾಳೆ. ಸ್ವಲ್ಪ ದಿನಗಳು ಅಲ್ಲೇ ಇದ್ದು, ಮತ್ತೆ ತಾಯಿಯ ಕಣ್ಣು ತಪ್ಪಿಸಿ ಬಾಂಬೆಗೆ ಓಡಿ ಹೋಗುತ್ತೆನೆ, ಒಂದೂವರೆ ವರ್ಷಗಳ ಕಾಲ ಇದ್ದು ತಾಯಿಯ ನೆನಪಾಗಿ ಮತ್ತೆ ಕೆರೂರಿಗೆ ಬರುತ್ತೆನೆ. ನನ್ನನ್ನು ನೋಡಿದ ನಮ್ಮವ್ವ ನಾನೆನಾಗಬೇಕು ನನ್ನಿಂದ ಏನು ಮಾಡಿದರೆ ಒಳಿತಾಗುವುದು ಅನ್ನುವುದು ಮನವರಿಕೆ ಮಾಡಿ. 1996 ರಲ್ಲಿ ನನ್ನ ತಾಯಿಯು ಬೆಂಗಳೂರಿಗೆ ನಿರ್ದೇಶಕನಾಗುವ ಕನಸು ಕಟ್ಟಿ ನನ್ನನ್ನು ಕರೆದು ಕೊಂಡು ಬರುತ್ತಾಳೆ.

1996 ನಿಂದ 1999ರ ವರೆಗೆ ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ರವಿ ಬೆಳೆಗೆರೆ ರವರ ಕೈ ಕೆಳಗೆ ಆಫೀಸ್ ಬಾಯ್ ಆಗಿ, ಗುಮಾಸ್ತನಾಗಿ, ಅಕ್ಷರ ಬ್ರಹ್ಮನ ಕಡೆಯಿಂದ ಬರವಣಿಗೆ ಕಲಿತು ಅವರ ಆಶಿರ್ವಾದದಿಂದ 1999ರಲ್ಲಿ ನನ್ನ ಗುರಿ, ನಮ್ಮವ್ವನ ಕನಸು ತಿಳಿದು ಅವರು ನನ್ನನ್ನು ಆದರ್ಶ್ ಫೀಲ್ಮ್ ಇನಸ್ಟೂಟ್ ಸೇರಿಸಿದರು. ಡಿ, ಎಫ್, ಎ, ಮುಗಿಸಿಕೊಂಡು ಬೆಸ್ಟ್ ಸ್ಟೂಡೆಂಟ್ ಅವಾರ್ಡ್ ಪಡೆದು. ಹೊರ ಬಂದು ಸ್ವಲ್ಪ ದಿನಗಳಲ್ಲಿ ಕರ್ನಾಟಕ ರತ್ನನನ್ನು ವಿರಪ್ಪನ್ ಕಿಡ್ನಾಪ್ ಮಾಡಿದ. ಅಪ್ಪಾಜಿ ಮನೇಲ್ಲಿ ಕೆಲಸಗಾರರು ಬೇಕಾಗಿದ್ದರು, ದೊರೈ ಭಗವಾನ್ ಸಾರ್ ಆದರ್ಶ್ ಫೀಲ್ಮ್ ಇನಸ್ಟೂಟ್ ಮೂವತ್ತು ಹುಡುಗರನ್ನು ಸೆಲೆಕ್ಟ್ ಮಾಡಿದರು ಆ ಮೂವತ್ತು ಹುಡುಗ ರಲ್ಲಿ ನಾನು ಕೂಡ ಒಬ್ಬನಾಗಿದ್ದೆ. ಅಪ್ಪಾಜಿ ಯವರನ್ನು ತುಂಬಾ ಹತ್ತಿರದಿಂದ ನೋಡಿದವರಲ್ಲಿ ನಾನು ಕೂಡ ಒಬ್ಬನು ಅನ್ನೋದು ನನಗೆ ಸಂತೋಷವಿದೆ. ಅದಾದ ನಂತರ ನಾನು ಸಹಾಯಕ ನಿರ್ದೇಶಕನಾಗಿ  ದುಡಿದ ನನ್ನ ಮೊದಲ ಸಿನಿಮಾ, “ಕೃಷ್ಣ ಲೀಲೇ” ಡಿ, ರಾಜೇಂದ್ರ ಬಾಬು ಸಾರ್ ನಿರ್ದೇಶಕರು ಶಿವರಾಜ್ ಕುಮಾರ್  ಸಾರ್ ಹೀರೋ. “ಬಾನಲ್ಲೂ ನೀನೇ ಭೂವಿಯಲ್ಲೂ ನೀನೇ”. ಸಿನಿಮಾ ಎಸ್ , ನಾರಾಯಣ್ ಸಾರ್ ನಿರ್ದೇಶಕರು. ಪರ್ವ ವಿಷ್ಣುವರ್ಧನ್ ಸಾರ್ ಹೀರೋ ಸುನೀಲ್ ಕುಮಾರ್ ದೇಸಾಯಿ ಸಾರ್ ನಿರ್ದೇಶಕರು. ಲಾಂಡ್ ಆರ್ಡರ್ ಸಿನಿಮಾ . ಶಿವಮಣಿ ಸಾರ್ ನಿರ್ದೇಶಕರು. ಹೀಗೆ ಹಲವಾರು ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕ ನಾಗಿ ದುಡಿಯುತ್ತ, ಹವ್ಯಾಸಿ ರಂಗಭೂಮಿ ಕಲಾವಿದನಾಗಿ, ರಂಗಸಜ್ಜಿಕೆ, ಸಹಾಯಕ ನಿರ್ದೇಶಕನಾಗಿ, ಎಮ್, ಎಸ್, ಸತ್ಯು, ಪ್ರಮೋದ್ ಶಿಗ್ಗಾಂವ್, ಕೃಷ್ಣ ಮೂರ್ತಿ ಕವಾತ್ತರ್, ಜೋಶಪ್ ಜಾನ್, ಹಲವಾರು ಹವ್ಯಾಸಿ ರಂಗಭೂಮಿ ನಿರ್ದೇಶಕರ ಜೊತೆ ಕೆಲಸ ಮಾಡಿದ್ದೆನೆ.

2006ರ ನಂತರ. ಸಿನಿಮಾ ನಾಟಕಗಳಲ್ಲಿ ಕೆಲ್ಸಾ ಮಾಡುವುದರಿಂದ ಹೊಟ್ಟೆ ತುಂಬಲ್ಲ. ಮತ್ತು ಆ ಕ್ಷೇತ್ರದಲ್ಲಿ ಹಣ ಸಿಗಲ್ಲ. ಪಾರಟೈಮ್ ಕೆಲಸ ಯಾರು ಕೊಡಲ್ಲ, ಎರಡು ದೋಣಿಯಲ್ಲಿ ಬದುಕು ನಡೆಯಲ್ಲ, ಆಫ್ ಕೋರ್ಸ್ ಒಂದು ಸಾಧನೆ ಕಡೆ ಗಮನಹರಿಸಬೇಕು, ಇಲ್ಲಾ ಜೀವನದ ಕಡೆ, ನನ್ನನ್ನು ನಿರ್ದೇಶಕ ನನ್ನಾಗಿ ಮಾಡಬೇಕು ಅನ್ನುವ ನಮ್ಮವ್ವನ ಕನಸು ನುಚ್ಚು ನೂರಾಯಿತು.  ಮನೆಯಲ್ಲಿ ತುಂಬಾ ಬಡತನ. ನನಗೆ ಎರಡು ಮಕ್ಕಳು, ಅವರನ್ನು ಓದಿಸಬೇಕು, ಮನೆ ಬಾಡಿಗೆ ಸಂಸಾರದ ದೋಣಿ ತೇಲಿಸಲು, ನಾನು ಸಂಪೂರ್ಣವಾಗಿ ಸಿನಿಮಾ ನಾಟಕ  ಕೆಲ್ಸಾ ಬಿಟ್ಟು,  ಕಾಲ್ ಸೆಂಟರ್ ಕಾರ್ ಚಾಲಕನಾಗಿ, ಟ್ರಾವೆಲ್ಸ್ ಕಾರ್ ಚಾಲಕನಾಗಿ, ಟೂಯೋಟಾ ಎಂ ಡಿ ಕಾರ್ ಚಾಲಕನಾಗಿ ಕೆಲಸ ಮಾಡಿದ್ದೆನೆ. 2013ರಲ್ಲಿ ನಮ್ಮವ್ವ ನಮ್ಮನು ಬಿಟ್ಟು ಸ್ವರ್ಗದ ಹಾದಿ ಹಿಡಿದಳು.ಅವ್ವ ಹೋದ ಬಳಿಕ, ನಾನು ಬದುಕುತ್ತಿದ್ದೆನೆ ಅನ್ನುವ ಆಲೋಚನೆಯಿಂದ ಒಂದೊಂದು ಸಾರಿ ಹುಚ್ಚು ಹಿಡಿದಂತೆ ಭಾಸವಾಗುತ್ತಿತ್ತು. ಆಗ ನಾನು ಟೋಯೋಟ ಕಂಪನಿಯಲ್ಲಿ ಕಾರು ಚಾಲಕನಾಗಿ ಕೆಲ್ಸಾ ಮಾಡುತಿದ್ದೆ. ಎಲ್ಲವನ್ನೂ ಬಿಟ್ಟು ಜಯನಗರ 4ರ್ಥ ಬ್ಲಾಕನಲ್ಲಿ ಕಾಂಡಿಮೆಂಟ್ಸ್ ಶುರುಮಾಡಿದೆ. ಒಂದು ವರ್ಷದ ನಂತರ ಆ ಕೆಲ್ಸಾ ಕೂಡಾ ಮಾಡಲು ಮನಸ್ಸಾಗದೆ, ಬನಶಂಕರಿ ಸೆಕೆಂಡ್ ಸ್ಟೇಜ್ ಬೃಂದಾವನ ಪಾರ್ಕ್ ಮುಂದೆ ಬೆಳಿಗ್ಗೆ ರಾಗಿ ಗಂಜಿ ವ್ಯಾಪಾರ ಶುರುಮಾಡಿದೆ, ಮೂರ್ನಾಲ್ಕು ತಿಂಗಳು ಕಳೆದ ನಂತರ ವ್ಯಾಪಾರ ಚೆನ್ನಾಗಿ ನಡೆಯಲು ಶುರುವಾಯಿತು. ಮದ್ಯಾಹ್ನನದ ನಂತರ ಟೈಂ ಸಿಗುತ್ತಿತ್ತು. ಮತ್ತೆ ರವೀಂದ್ರ ಕಲಾಕ್ಷೇತ್ರಕ್ಕೆ ಬೇಟಿ ಶುರುವಾಯಿತು. “ಸಹದೇವ” ನಾಟಕದಲ್ಲಿ ಧೃತರಾಷ್ಟ್ರನ ಪಾತ್ರ ಮಾಡಿದೆ. ಹಾಗೆ ಶಾರ್ಟ್ ಮೂವೀ ಸ್ಕ್ರಿಪ್ಟ್ ಮಾಡಿದೆ. 2015 ರಲ್ಲಿ “ಮುನ್ನಡೆ”  ಹೆಸರಿನ ಶಾರ್ಟ್ ಮೂವೀ ನಿರ್ದೇಶನ ಮಾಡಿ, ದಿನವು ಪಾರ್ಕ್ ಹತ್ರ ರಾಗಿ ಗಂಜಿ ಕುಡಿಯಲು ಬರುತ್ತಿದ್ದ ಭೈಸಾನಿ ಸತೀಶ್ ಕುಮಾರ್ ಸಾರ್ ನನ್ನ ಪ್ರತಿಭೆ ನೋಡಿ  “ರಂಕಲ್ ರಾಟೆ” ಸಿನಿಮಾ ನಿರ್ಮಾಣ ಮಾಡಲು ತಯಾರಾದರು. ಅವರೇ ನನ್ನ ಮೊದಲ ಸಿನಿಮಾ ನಿರ್ದೇಶನದ ಅನ್ನದಾತರು.

2017 ರಲ್ಲಿ ಸ್ವತಂತ್ರ ನಿರ್ದೇಶಕನಾಗಿ “ರಂಕಲ್ ರಾಟೆ” ನಿರ್ದೇಶನ ಮಾಡಿದೆ, 2018 ರಲ್ಲಿ ಆ ಸಿನಿಮಾ ಕರ್ನಾಟಕದ ರಾಜ್ಯಾದ್ಯಂತ ಬಿಡುಗಡೆ ಮಾಡಿ ಯಶಸ್ವಿಯಾಗಿ ಪ್ರದರ್ಶನ ಖಂಡಿತ್ತು.ಅದನ್ನು ನೋಡಿದ ಶಿವರಾಜ್ ಲಕ್ಷ್ಮಣರಾವ್ ದೇಸಾಯಿ ರವರು ಎರಡನೇ ಸಿನಿಮಾ ನಿರ್ದೇಶನ ಮಾಡಲು ಅವಕಾಶ ಕೊಟ್ಟರು.ನನ್ನ ಎರಡನೇ ಸಿನಿಮಾ. “ಮದುವೆ ಮಾಡ್ರೀ ಸರಿ ಹೋಗ್ತಾನೆ” ಅನ್ನೊ ಹೆಸರಿನ ಸಿನಿಮಾ ನಿರ್ದೇಶನ ಮಾಡಿದೆ. ಅದು 6/3/2020 ರಂದು ಕರ್ನಾಟಕ ರಾಜ್ಯಾದ್ಯಂತ ಬಿಡುಗಡೆ ಆಯಿತು.ಬೆಂಗಳೂರಿನಿಂದ  ಸುಮಾರು 600 ಕೀ ಮೀ ದೂರದಲ್ಲಿರುವ ಕೆರೂರಿನಿಂದ ಬಂದು ನಾನು ನಿರ್ದೇಶಕನಾದ ಕಥೆ…