ಧೂಳಿನಿಂದ ಸುಧೀರ್ ಬದುಕು ಧೂಳೀಪಟವಾದ ಕಥೆ!

ಕನ್ನಡದ ‘ಉತ್ತಮ ವಿಲನ್’ ಸುಧೀರ್

ಸಿನಿಮಾದ ಪಾತ್ರಕ್ಕಾಗಿ ಬಿಟ್ಟರೆ ಒಂದು ತೊಟ್ಟು ಸಾರಾಯಿ ಕುಡಿಯಲಿಲ್ಲ. ಒಂದೇ ಒಂದು ಸಿಗರೇಟು ಸೇದಿದವರಲ್ಲ. ಇಸ್ಪೀಟಾಟ ಗೊತ್ತೇ ಇಲ್ಲ. ಕುದುರೆ ಬಾಲ ಹಿಡಿದವರಲ್ಲ. ಗುಟ್ಕಾ, ಜರ್ದಾ ಅಂದರೇನೆಂದೇ ಗೊತ್ತಿಲ್ಲ. ಪರಸ್ತ್ರೀಯರ ಮೇಲೆ ಕಣ್ಣು ಹಾಕಿದವರಲ್ಲ. ಇಷ್ಟೆಲ್ಲಾ ಸದ್ಗುಣಗಳಿರುವ ಕನ್ನಡದ ‘ಉತ್ತಮ ವಿಲನ್’ ಸುಧೀರ್ ಇವೆಲ್ಲವನ್ನೂ ಕ್ಯಾಮೆರಾ ಮುಂದೆ ಮಾತ್ರ ಸಲೀಸಾಗಿ ಮತ್ತು ಅಷ್ಟೇ ಸಹಜವಾಗಿ ಮಾಡುತ್ತಿದ್ದ ಅಪ್ಪಟ ಕಲಾವಿದ! ಇದು ಧೂಳಿನಿಂದ ಸುಧೀರ್ ಬದುಕು ಧೂಳೀಪಟವಾದ ಕಥೆ!


ಇಂಥಾ ಒಬ್ಬ ಸಜ್ಜನ ಕಲಾವಿದ ಇದ್ದಕ್ಕಿದ್ದಂತೆಯೇ ತೀರಿಕೊಂಡರು. ಹೆಂಡತಿ, ಮಕ್ಕಳು ಅನಾಥರಾದರು.  ಸುಧೀರ್ ತೀರಿಕೊಂಡಾಗ ಹಿರಿಯ ಮಗ ನಂದ ಕಿಶೋರ್ SSLC ಓದುತ್ತಿದ್ದ. ಕಿರಿಯ ಮಗ ತರುಣ್ ಒಂಭತ್ತನೇ ಕ್ಲಾಸು. ಹೆಂಡತಿ ಮಾಲತಿಗೆ ಕೇವಲ ನಲವತ್ತು! ಕಂಡ ಕನಸು ನುಚ್ಚುನೂರಾಯಿತು. ಭವಿಷ್ಯ ಕತ್ತಲು ಕತ್ತಲು.


ಅದೊಂದು ರೋಚಕ ಕಥೆ. ಇಷ್ಟಕ್ಕೂ ಸುಧೀರ್ ದಿಢೀರೆಂದು ಸಾವಿನ ಬಾಗಿಲು ತಟ್ಟಿದ್ದಾದರೂ ಹೇಗೆ?  ಸಂಕ್ಷಿಪ್ತವಾಗಿ ಹೇಳೋದಿದ್ರೆ, ಆ ದಿನ ಯಾವುದೋ ಸಿನಿಮಾದ ಚಿತ್ರೀಕರಣಕ್ಕೆಂದು ಕಂಠೀರವಾ ಸ್ಟುಡಿಯೋಕ್ಕೆ ಹೋಗಿದ್ದರು. ಹೀರೋ ಜತೆ ಬಡಿದಾಡುವ ಸನ್ನಿವೇಶದ ಚಿತ್ರೀಕರಣ. ಫ್ಲೋರ್ ತುಂಬಾ ಧೂಳೋ ಧೂಳು. ಎರಡು ದಿನಗಳ ಕಾಲ ಅಲ್ಲೇ ಶೂಟಿಂಗ್. ಬೆಳಗ್ಗಿನಿಂದ ಸಂಜೆ ತನಕ ಆ ಭಯಂಕರ ಧೂಳಿನಲ್ಲೇ ಚಿತ್ರೀಕರಣ. ಸುಧೀರ್’ಗೆ ಡಸ್ಟ್ ಅಲರ್ಜಿ ಇತ್ತು. ಸಾಮಾನ್ಯ ರಸ್ತೆಯಲ್ಲಿ ಓಡಾಡಿದರೂ ನೆಗಡಿಯಾಗಿ ಇಡೀ ವಾರ ಹಾಸಿಗೆ ಹಿಡಿದಿರುತ್ತಿದ್ದರು. ನೀವೇ ಹೇಳಿ? ಇಂಥಾ ಸುಧೀರ್ ಎರಡು ದಿನಗಳ ಕಾಲ ಸತತ ಧೂಳಿನಿಂದ ಕೂಡಿದ ಫ್ಲೋರ್’ನಲ್ಲಿ ಅಭಿನಯಿಸುವುದೆಂದರೆ ಅವರ ಆರೋಗ್ಯದ ಪರಿಸ್ಥಿತಿ ಹೇಗಾಗಿರಬೇಡ.

ಎರಡನೇ ದಿನದ ಸಂಜೆ ಹೊತ್ತಿಗೆ ಅವರ ಶ್ವಾಸಕೋಶದ ತುಂಬಾ ಧೂಳೋ ಧೂಳು! ಇನ್ಫೆಕ್ಷನ್ ಆಗಿ ಆಸ್ಪತ್ರೆ ಸೇರಿಕೊಂಡ ಸುಧೀರ್ ಮತ್ತೆ ಮನೆ ಸೇರಿಕೊಳ್ಳಲಿಲ್ಲ. ಹಲವು ಬಡ ಕಲಾವಿದರಿಗೆ ಅಕ್ಷರಶಃ ಉಸಿರು ನೀಡಿದ ಸುಧೀರ್ ಉಸಿರಾಟದ ತೀವ್ರ ತೊಂದರೆಯಿಂದಾಗಿ ಅಸ್ವಸ್ಥರಾದರು. ಬಾಳಸಂಗಾತಿ ಮಾಲತಿಯವರು ನೋಡನೋಡುತ್ತಿರುವಂತೆಯೇ ಸುಧೀರ್ ಕೊನೆಯುಸಿರೆಳೆದಿದ್ದರು. ಇದು ಒಬ್ಬ ಕಲಾವಿದನ ಅಂತ್ಯವಾದರೆ, ಇವರನ್ನೇ ನಂಬಿಕೊಂಡಿದ್ದ ಕುಟುಂಬದ ನೋವಿನ ವ್ಯಥೆ ಆರಂಭ.


ನಾಟಕ ಕಂಪೆನಿಯಿತ್ತು. ಇದರ ಜವಾಬ್ದಾರಿಯನ್ನು ಮಾಲತಿ ಮೇಡಂ ಹೊತ್ತುಕೊಂಡರು. ಮಕ್ಕಳು ಚಿಕ್ಕಪುಟ್ಟ ಸಹಾಯಕ್ಕಿದ್ದರು. ಊರಿಂದೂರಿಗೆ ಪಯಣ. ಸಾವಿರ ಅನುಭವಗಳು. ಹಿರಿಯ ಮಗ ನಂದ ವಿಪರೀತ ದಢೂತಿ ಆಸಾಮಿ! ಓಮ್ನಿ ಕಾರಿನಲ್ಲಿ ಡ್ರೈವ್ ಮಾಡಲು ಹೊರಟರೆ ಸ್ಟೇರಿಂಗ್’ಗೆ ಹೊಟ್ಟೆ ತಡೆಯುತ್ತಿತ್ತು. ಈ ಕಾರಣಕ್ಕಾಗಿ ಸ್ಟೇರಿಂಗ್ ವ್ಯವಸ್ಥೆಯನ್ನೇ ಬದಲಿಸಿಕೊಳ್ಳಲಾಯಿತು!

ಬದುಕು ಹೀಗೆಯೇ ಸಾಗುತ್ತಿರುವಂತೆಯೇ ದೂರದಲ್ಲೆಲ್ಲೋ ನಿರೀಕ್ಷೆಯ ನಕ್ಷತ್ರ ಮಿನುಗ ತೊಡಗಿತು! ಮಾಲತಿ ಮೇಡಂ ನಾಟಕ ಅಕಾಡೆಮಿ ಅಧ್ಯಕ್ಷೆಯಾದರು. ಮಕ್ಕಳು ಚಿತ್ರರಂಗದಲ್ಲೇ ತಳವೂರುವ ಲಕ್ಷಣ ಕಂಡು ಬಂತು. ಒಂದೊಂದೇ ಮೆಟ್ಟಿಲು ಏರುತ್ತಿರುವಂತೆಯೇ ಅದೃಷ್ಟವೂ ಕೈಹಿಡಿಯಿತು. ನಂದ ಕಿಶೋರ್ ಜತೆಗೆ ತರುಣ್ ಕಿಶೋರ್ ನಿರ್ದೇಶಿಸಿದ ಚಿತ್ರಗಳೆಲ್ಲವೂ ಹಿಟ್ ಆದವು. ಈ ಜೋಡಿ ಸೋದರರು ಈಗ ಏನೇನಾಗಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತು.

ಇದೆಲ್ಲವೂ ನನ್ನ ಕಣ್ಣ ಮುಂದೆಯೇ ನಡೆದ ಪವಾಡ. ಒಂದು ಕಾಲದಲ್ಲಿ ಬಳಲಿ ಬಸವಳಿದ ಕುಟುಂಬ ಈಗ ತೃಪ್ತಿಯ ಬದುಕಿನ ಬೆಳಕನ್ನು ಕಾಣುತ್ತಿದೆ. ಯೋಗ್ಯತೆಯ ಜತೆಗೆ ಅವಿರತ ಶ್ರಮ, ಶ್ರದ್ಧೆ, ಶಿಸ್ತು ಮತ್ತೊಂದಿಷ್ಟು ಯೋಗ ಸೇರಿಕೊಂಡು ಸುಧೀರ್ ಕುಟುಂಬ ಸಾರ್ಥಕ ಬದುಕಿನ ಸವಿಯನ್ನುಣ್ಣುತ್ತಿದೆ. ಅವರಿಗೆ ನಿಮ್ಮದೊಂದು ಶುಭ ಹಾರೈಕೆ ಇರಲಿ.

-ಗಣೇಶ್ ಕಾಸರಗೋಡು