ಎಸ್.ವಿ.ಶ್ರೀಕಾಂತ್ ಸಿನೆಮಾಟೋಗ್ರಾಫರ್ (ಟ್ರಿಕ್ ಫೋಟೋಗ್ರಫಿ ತಜ್ಞ)

ಟ್ರಿಕ್ ಫೋಟೋಗ್ರಫಿ ತಜ್ಞ

1968-69ರಲ್ಲಿ ಮಾರ್ಗದರ್ಶಿ ಮತ್ತು 1969-70ರಲ್ಲಿ ಗೆಜ್ಜೆಪೂಜೆ ಚಿತ್ರಕ್ಕೆ ಮತ್ತು 1974-75ರಲ್ಲಿ ಉಪಾಸನೆ ಚಿತ್ರಕ್ಕೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯ ಅಡಿಯಲ್ಲಿ ನೀಡಲಾಗುವ ಅತ್ಯುತ್ತಮ ಛಾಯಾಗ್ರಹಕ ಪ್ರಶಸ್ತಿಗೆ ಮೂರು ಬಾರಿ ಪಡೆದಿರುವ ಶ್ರೀ. ಎಸ್.ವಿ. ಶ್ರೀಕಾಂತ್‍ರವರು ಕನ್ನಡ ಸಿನೆಮಾ ಜಗತ್ತಿನ ವರ್ಣರಂಜಿತ ವೇದಿಕೆಗೆ ಸದಾ ಏನನ್ನಾದರೂ ಹೊಸತು ನೀಡುವ ತುಡಿತದಲ್ಲೇ ಇದ್ದವರು.

1960ರಿಂದ ಚಿತ್ರ ಜಗತ್ತಿನ ಪಯಣ ಆರಂಭಿಸಿದ ಎಸ್.ವಿ. ಶ್ರೀಕಾಂತ್‍ರವರು ಸರಿಸುಮಾರು ನಾಲ್ಕು ದಶಕಗಳ ಕಾಲ 60ಕ್ಕೂ ಹೆಚ್ಚು ಚಲನಚಿತ್ರಗಳಿಗೆ ಛಾಯಾಗ್ರಾಹರಾಗಿ ಕನ್ನಡ ಸಿನೆಮಾ ರಂಗವನ್ನು ತಮ್ಮ ಪ್ರತಿಭೆಯಿಂದ ಶ್ರೀಮಂತಗೊಳಿಸಿದ್ದಾರೆ.


ಕಂಪ್ಯೂಟರ್ ಗ್ರಾಫಿಕ್ಸ್ ಎಂಬ ತಂತ್ರ ಜ್ಞಾನದ ಹೆಸರೇ ಇಲ್ಲದ ಆ ಕಾಲದಲ್ಲೇ ಅತ್ಯುತ್ತಮ ಟ್ರಿಕ್ ಶಾಟ್ ಗಳನ್ನು ಬಳಸಿ ಚಿತ್ರೀಕರಿಸಿದ ಹೆಗ್ಗಳಿಕೆ ಎಸ್.ವಿ.ಶ್ರೀಕಾಂತ್‍ರವರಿಗೆ ಸಲ್ಲಬೇಕು.

ವರನಟ ಡಾ.ರಾಜ್‍ಕುಮಾರ್‍ರವರನ್ನು ಬಬ್ರುವಾಹನ ಚಿತ್ರದ ದ್ವಿಪಾತ್ರಾಭಿನಯವನ್ನು ಒಂದೇ ಫ್ರೇಮಿನಲ್ಲಿ ಹೃದಯಂಗಮವಾಗಿ ಚಿತ್ರೀಕರಿಸಿದ್ದವರು ಶ್ರೀ.ಎಸ್.ವಿ.ಶ್ರೀಕಾಂತ್. ಇದಾದ ಮೇಲೆ ಅನೇಕ ಅಣ್ಣಾವ್ರು ನಟಿಸಿದ ಚಿತ್ರಗಳಿಗೆ ಎಸ್.ವಿ.ಶ್ರೀಕಾಂತ್ ರವರೇ ಛಾಯಾಗ್ರಾಹಕರಾಗಿದ್ದುದು ಕೂಡ ವಿಶೇಷವೇ ಸರಿ. ಮಾಸ್ಕ್, ದ್ವಿಪಾತ್ರಾಭಿನಯ, ನೆರಳು-ಬೆಳಕಿನ ಆಟಗಳಿಗೆ ತೋರುತ್ತಿದ್ದ ನೈಪುಣ್ಯವೇ ಎಸ್.ವಿ.ಶ್ರೀಕಾಂತ್‍ರವರನ್ನು ವಿಶೇಷ ತಂತ್ರಜ್ಞರ ಸಾಲಿನಲ್ಲಿ ನಿಲ್ಲಿಸಿದ್ದವು.

ಸ್ವರ್ಣಗೌರಿ, ಮಾಗದರ್ಶಿ, ಗೆಜ್ಜೆಪೂಜೆ, ಉಪಾಸನೆ, ಪ್ರೇಮಮಯಿ, ಬಬ್ರುವಾಹನ, ಮನಸಿದ್ದರೆ ಮಾರ್ಗ, ಬಹದ್ದೂರ್ ಗಂಡು, ನಾ ನಿನ್ನ ಬಿಡಲಾರೆ, ಹಣ್ಣೆಲೆ ಚಿಗುರಿದಾಗ, ಅದೇ ಕಣ್ಣು, ಶ್ರಾವಣ ಬಂತು, ರಾಣಿ ಮಹಾರಾಣಿ, ವಿಜಯ್ ವಿಕ್ರಮ್, ಎಡಕಲ್ಲು ಗುಡ್ಡದ ಮೇಲೆ, ಅಣ್ಣಾವ್ರ ಮಕ್ಕಳು, ಜೀವನ ಚೈತ್ರ, ಆಕಸ್ಮಿಕ, ಸಾಕ್ಷಾತ್ಕಾರ, ತ್ರಿಮೂರ್ತಿ ಹೀಗೆ ಎಸ್.ವಿ.ಶ್ರೀಕಾಂತ್ ರವರ ಕೈಚಳಕದ ಮಾಂತ್ರಿಕ ಸ್ಪರ್ಶವಿರುವ ಚಲನಚಿತ್ರಗಳ ಪಟ್ಟಿ ಸಾಕಷ್ಟು ಉದ್ದವೇ ಇದೆ.

ಎಸ್.ವಿ.ಶ್ರೀಕಾಂತ್‍ರವರು ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಜನಿಸಿದವರು. ಬಿ.ಎಸ್ಸಿ. ಪದವಿ ಪಡೆದ ನಂತರ ಫೋಟೋಗ್ರಾಫರ್ ಆಗಿ ಮೈಸೂರಿನಲ್ಲಿ ತಮ್ಮ ಮೊದಲ ಹೆಜ್ಜೆ ಇಟ್ಟರು. ನಂತರ ಕೆಲವು ಹಿಂದಿ ಚಿತ್ರಗಳಿಗೆ (ಹೈಸಿಯತ್ ಮತ್ತು ವಫಾದಾರ್ ಹಿಂದಿ ಸಿನೆಮಾಗಳು) ಕ್ಯಾಮರಾ ಆಪರೇಟರ್ ಆಗಿ ದುಡಿದು ಅನುಭವಿಯಾದ ಮೇಲೆ ನಿಧಾನವಾಗಿ ಸ್ವತಂತ್ರ ಛಾಯಾಗ್ರಾಹಕರಾದರು. ಕನ್ನಡ ಚಲನಚಿತ್ರ ದಂತಕಥೆಗಳಾಗಿರುವ ಶ್ರೀ. ಪುಟ್ಟಣ್ಣ ಕಣಗಾಲ್ ಮತ್ತು ಡಾ.ರಾಜ್ ಕುಮಾರ್ ಇಬ್ಬರಿಗೂ ಅತ್ಯಂತ ಮೆಚ್ಚಿನ ಛಾಯಾಗ್ರಾಹಕರೆನಿಸಿಕೊಂಡವರು ಶ್ರೀ.ಎಸ್.ವಿ.ಶ್ರೀಕಾಂತ್.

ತಮ್ಮ 87ನೇ ವಯಸ್ಸಿನಲ್ಲಿ ಅನಾರೋಗ್ಯದಿಂದಾಗಿ ಪತ್ನಿ ಮತ್ತು ಪುತ್ರನನ್ನು ಅಗಲಿದ್ದಾರೆ. ಕಪ್ಪು-ಬಿಳುಪು ಚಲನಚಿತ್ರಗಳಿಂದ ಹಿಡಿದು ಕಲರ್ ಸಿನೆಮಾಗಳವರೆಗೆ ಶ್ರೀ.ಎಸ್.ವಿ.ಶ್ರೀಕಾಂತ್‍ರವರು ನೀಡಿರುವ ಮನೋಜ್ಞ ತಂತ್ರಜ್ಞಾನ ಸ್ಪರ್ಶ ನಮ್ಮೆಲ್ಲರೊಂದಿಗೆ ಸದಾ ಕಾಲ ಅವಿಸ್ಮರಣೀಯವಾಗಿರುತ್ತದೆ.


ಕನ್ನಡಮ್ಮನ ಮಡಿಲು ಸೇರಿರುವ ಹೆಮ್ಮೆಯ ಪುತ್ರ ಶ್ರೀ.ಎಸ್.ವಿ.ಶ್ರೀಕಾಂತ್ ರವರಿಗೆ ನಾವೆಲ್ಲರೂ ಹೃದಯ ಪೂರ್ವಕ ನಮನಗಳನ್ನು ಸಲ್ಲಿಸೋಣ.

 

-ಶ್ರೀಕಾಂತ್ ಬೇಲೂರ್

basrikanth.director@gmail.com